Latest

ಅರಟಾಳದ 12ನೇ ಶತಮಾನದ ಸೂರ್ಯ ದೇವಸ್ಥಾನ ಅನನ್ಯ: ಸಿಎಂ ಬೊಮ್ಮಾಯಿ‌

ಪ್ರಗತಿವಾಹಿನಿ ಸುದ್ದಿ, ಹಾವೇರಿ: “ಅರಟಾಳ ಒಂದು ಅತ್ಯಂತ ಐತಿಹಾಸಿಕವಾಗಿರುವ‌ ಮಹತ್ವ ಇರುವ ಕ್ಷೇತ್ರ. 12 ನೇ ಶತಮಾನದಲ್ಲಿ ಇಲ್ಲಿ ದೇವಸ್ಥಾನಗಳ ಸ್ಥಾಪನೆ ಆಗಿದೆ. 1008 ಪಾರ್ಶ್ವನಾಥರ ಆಶೀರ್ವಾದದಿಂದ ಈ ದೇವಸ್ಥಾನ ಸೂರ್ಯನ ಗ್ರಹಣವಿರುವ ದಿನ ಪ್ರಾರಂಭವಾಗಿದ್ದು ಒಂದು ವಿಶೇಷ. ‌ಈ ತರಹದ ದೇವಸ್ಥಾನ ಮತ್ತೊಂದಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಶಿಗ್ಗಾಂವ ತಾಲೂಕಿನ ಅರಟಾಳ ಗ್ರಾಮದಲ್ಲಿ ನೂತನ ಯಾತ್ರಿ ನಿವಾಸ ಕಟ್ಟಡ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯವನ್ನು ನೆರವೇರಿಸಿ ಅವರು ಮಾತನಾಡಿದರು.

“ಜೈನ್ ಮುನಿಗಳು, ಜೈನ್ ಸಮುದಾಯದ ತೀರ್ಥಯಾತ್ರೆ ಉತ್ತರ ಭಾರತ, ಮಹರಾಷ್ಟ್ರದಿಂದ ಶ್ರವಣಬೆಳಗೊಳಕ್ಕೆ ಹೋಗುವ ಪ್ರತೀತಿ ಇದೆ. ಮೊದಲೆಲ್ಲ ಕಾಲ್ನಡಿಗೆ ಮೂಲಕವೇ ಜನರು ಹೋಗುತ್ತಿದ್ದರು. ಆ ವೇಳೆ ಅರಟಾಳದಲ್ಲಿ ಯಾತ್ರಾರ್ಥಿಗಳು ತಾಣವಾಗಿತ್ತು. ಹೀಗೆ ಇವತ್ತಿಗೂ ಕೂಡ ಬೇರೆ ಬೇರೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಈ ಕ್ಷೇತ್ರಕ್ಕೆ ಯಾತ್ರಿನಿವಾಸ ಬೇಕು ಎಂದು ಮೂರ್ನಾಲ್ಕು ವರ್ಷದಿಂದ ನಮ್ಮ ಪುಣ್ಯಸಾಗರ ಮಹಾರಾಜರು ಬಯಸಿದ್ದರು. ಅವರ ಮನಸ್ಸಿನಲ್ಲಿ ಏನಿದೆ ಎಂದು ನಾವೇ ತಿಳಿದುಕೊಂಡು ಮಾಡಬೇಕು. ಅವರು ಯಾರಿಗೂ ಏನನ್ನು ಕೇಳುವುದಿಲ್ಲ. ಅವರು ಏನು ಸಂಕಲ್ಪ ಮಾಡುತ್ತಾರೆ ಅದು ಆಗುತ್ತದೆ” ಎಂದರು.

“ನಾನು ಹಿಂದೆ ಈ ಕ್ಷೇತ್ರಕ್ಕೆ 1 ಕೋಟಿ ರೂ. ಪ್ರಸ್ತಾವನೆ ಕಳಿಸಿದ್ದೆ. ಆದರೆ ಅದು ಆಗ ಆಗಲಿಲ್ಲ. ಅದು ಏನೋ ಯೋಗಾಯೋಗ ನಾನು ಮುಖ್ಯಮಂತ್ರಿ ಆದಮೇಲೆ ಮಾಡಬೇಕು ಅಂತ ಇತ್ತು ಅನಿಸುತ್ತದೆ. 1.5 ಕೋಟಿ ವೆಚ್ಚದಲ್ಲಿ ನಾವು ಯಾತ್ರಿ ನಿವಾಸವನ್ನು ಮಾಡುತ್ತಿದ್ದೇವೆ. ಯಾತ್ರಿಗಳಿಗೆ ಏನೆಲ್ಲ ಸವಲತ್ತುಗಳು ಬೇಕು ಅದು ಇದರಲ್ಲಿ ಸಿಗುತ್ತದೆ. ಕಟ್ಟಡ ಆದ ನಂತರ 25 ಲಕ್ಷ ರೂ. ನೀಡಿ ಎಲ್ಲ ಸಲಕರಣೆಗಳನ್ನು ಕೊಡಿಸುವ ಕೆಲಸವನ್ನು ಕೂಡ ಮಾಡುತ್ತೇನೆ” ಎಂದರು.

“ಜೈನ ಧರ್ಮ ಅಹಿಂಸಾ ಪರಮೋಧರ್ಮ. ಬಹಳ ವಿಶೇಷವಾಗಿರುವ ಧರ್ಮ. ಬಹುತೇಕವಾಗಿ ನಾವೆಲ್ಲರೂ ಈ ಧರ್ಮವನ್ನು ಆಚರಿಸಿದರೆ ಈ ಜಗತ್ತಿನಲ್ಲಿ ಅಹಿಂಸೆಯೇ ಇರುವುದಿಲ್ಲ. ಇವತ್ತಿನ ಕಾಲಮಾನದಲ್ಲಿ ಅದು ಬಹಳ ಕಷ್ಟ. ಇತರೆ ಧರ್ಮಗಳು ನಶಿಸಿ ಹೋಗುವ ಸಂದರ್ಭದಲ್ಲಿ ಜೈನ್ ಧರ್ಮ ಆರಂಭವಾಗಿದೆ. ಧರ್ಮದಿಂದ ಮಾನವೀಯ ಮೌಲ್ಯಗಳು ಉಳಿಯುವುದರ ಜೊತೆಗೆ ನಂಬಿಕೆ ಇಡುವ ಕೆಲಸವನ್ನು ಎಲ್ಲ ತೀರ್ಥಂಕರರು ಮಾಡಿದ್ದಾರೆ. ಜೈನ ಧರ್ಮದ ಎಲ್ಲ ಭಕ್ತರು ತಮ್ಮ ದುಡಿಮೆಯಲ್ಲಿ ಬಹಳ ಯಶಸ್ಸು ಕಾಣುತ್ತಾರೆ. ದುಡಿದಿರುವುದರಲ್ಲಿ ಒಂದು ಭಾಗವನ್ನು ಧರ್ಮದ ಕಾರ್ಯ, ಪರೋಪಕಾರದ ಕಾರ್ಯಕ್ಕೆ ಕೊಡುವ ಒಂದು ವಿಶೇಷ ಗುಣ ಧರ್ಮ ಜೈನ ಧರ್ಮದಲ್ಲಿದೆ” ಎಂದರು.

“ಈ ಭಾಗದ ಜೈನ ಸಮುದಾಯದ ಎಲ್ಲ ದೇವಸ್ಥಾನಗಳಿಗೆ 6 ರಿಂದ 8 ಕೋಟಿಯಷ್ಟು ಅನುದಾನವನ್ನು ನೀಡಿದ್ದೇನೆ. ಈ ಧರ್ಮ ಉಳಿಯಬೇಕು, ಧರ್ಮ ಉಳಿದರೆ ಮಾನವೀಯತೆ ಉಳಿಯುತ್ತದೆ. ಮಾನವೀಯತೆ ಉಳಿದರೆ ಮನುಷ್ಯ ಉಳಿಯುತ್ತದೆ. ಇದರಿಂದ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗುತ್ತದೆ ಎನ್ನುವ ಕಾರಣಕ್ಕೆ ಮಾಡಿದ್ದೇನೆ. ಇವತ್ತು ಯಾತ್ರಿ ನಿವಾಸದ ಅಡಿಗಲ್ಲು ಮಾಡಿದ್ದೇನೆ. ಮುಂಬರುವ ಫೆಬ್ರುವರಿಯಲ್ಲಿ ಪಂಚಕಲ್ಯಾಣದ ವೇಳೆ ಉದ್ಘಾಟನೆ ಮಾಡುತ್ತೇನೆ. ಇದರ ಸದುಪಯೋಗ ಆಗಲಿ” ಎಂದರು.

ನಮ್ಮ ತಂದೆ-ತಾಯಿಯವರು ಹುಟ್ಟಿದ್ದು ಊರು ಇಲ್ಲಿಯೇ. ನಮ್ಮ ಬೇರು ಇಲ್ಲಿದೆ. ಈ ಭಾಗದ ಅಭಿವೃದ್ಧಿಗೆ, ಕೆರೆ ತುಂಬಿಸುವ ಯೋಜನೆ, ಎಲ್ಲ ಗ್ರಾಮಗಳ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದೇನೆ. ಮುಂದೆಯೂ ಅಭಿವೃದ್ಧಿ ಕಾರ್ಯ ಮುಂದುವರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ಮುನಿಶ್ರೀ 1008 ಪುಣ್ಯಸಾಗರ ಮಹಾರಾಜರು, ಅಕ್ಕಿಆಲೂರು ಭಟ್ಟಾರಕ ಮಹಾಸ್ವಾಮಿಗಳು, ಕುಮಾರ ಮಹಾಸ್ವಾಮಿಗಳು, ದತ್ತಾ ಡೋಲಿ, ಕಿರಣ ಅವರಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

https://pragati.taskdun.com/school-roomscm-basavaraj-bommaishiggavi/
https://pragati.taskdun.com/construction-of-study-center-in-dr-b-r-ambedkar-park-mla-anila-benake/

https://pragati.taskdun.com/forfeiture-as-per-existing-rules-election-commission-directive/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button