ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ರೂ. ನೀಡುವ ಕೇಂದ್ರ ಸರಕಾರದ ಯೋಜನೆಯನ್ನು ಶ್ಲಾಘಿಸಿರುವ ಕರ್ನಾಟಕ ರಾಜ್ಯ ಟೇಲರ್ ಅಸ್ಸೋಸಿಯೇಶನ್ ಸಲಹಾ ಸದಸ್ಯ, ಬೆಳಗಾವಿಯ ಕ್ರೀಸ್ ವೈಸ್ ಮಾಲಿಕ ಕೃಷ್ಣ ಭಟ್, ಯೋಜನೆಯಿಂದ ಕೋಟ್ಯಂತರ ಕುಟುಂಬಗಳ ಪಾಲಿಗೆ ಭೀಮ ಬಲ ಬಂದಿದೆ ಎಂದಿದ್ದಾರೆ.
ಅಸಂಘಟಿತ ಕಾರ್ಮಿಕರ ಸಲುವಾಗಿ ಕಳೆದ 15 ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿರುವ ಕೃಷ್ಣ ಭಟ್, ಬಜೆಟ್ ಗೆ 15 ದಿನಗಳ ಮೊದಲು ಕೇಂದ್ರಕ್ಕೆ ಪತ್ರ ಬರೆದಿದ್ದರು. ಅದಕ್ಕೆ ಈಗ ಸ್ಪಂದನೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
2007 ರಲ್ಲಿ ಕೃಷ್ಣ ಭಟ್ ಅವರು ಬೆಳಗಾವಿಯ ಸರ್ದಾರ ಮೈದಾನದಲ್ಲಿ ಸುಮಾರು 10 ಸಾವಿರ ಅಸಂಘಟಿತ ಕಾರ್ಮಿಕರನ್ನು ಸೇರಿಸಿ ಸಭೆ ನಡೆಸಿದ್ದೆ. ಅಲ್ಲಿಂದಲೂ ‘ಅಸಂಘಟಿತ ಕಾರ್ಮಿಕರೆಲ್ಲರಿಗೂ ಒಂದು ಭವಿಷ್ಯ ನಿಧಿ ಇರಬೇಕು, ಅವರೆಲ್ಲರಿಗೂ ಸಾಮಾಜಿಕ ಹಾಗು ಆರ್ಥಿಕ ಭದ್ರತೆ ಸಿಗಬೇಕು’ ಎನ್ನುವ ಅಂಶಗಳ ಕುರಿತು ಹಲವಾರು ಬಾರಿ ಕೇಂದ್ರ ಮಂತ್ರಿಗಳಿಗೆ, ಪ್ರಧಾನಿಗಳಿಗೆ ಪತ್ರಗಳನ್ನು ಬರೆದಿದ್ದೆ. ಈಗ ನರೇಂದ್ರ ಮೋದಿ ಸರಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಸಿಕ್ಕಿದೆ. ಕರ್ನಾಟಕವೊಂದರಲ್ಲೇ ಒಂದು ಕೋಟಿ ಕಾರ್ಮಿಕರಿಗೆ ಯೋಜನೆಯ ಲಾಭ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
15 ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವರು ಹಾಗೂ ಕಾರ್ಮಿಕ ಸಚಿವರಿಗೆ ಕೃಷ್ಣ ಭಟ್ ಬರೆದಿದ್ದ ಪತ್ರ ಹೀಗಿದೆ…
ಮಹನೀಯರೇ,
ಹಳ್ಳಿಗಳೇ ಹೆಚ್ಚಿರುವ ದೇಶ – ನಮ್ಮ ದೇಶ, ಪ್ರತಿ ಊರಿನಲ್ಲೂ ಸಣ್ಣ ಸಣ್ಣ ಅಂಗಡಿ, ಗ್ರಾಮೀಣ ಕುಲಕಸುಬುಗಳ ಮುಖಾಂತರ ಹಲವರು ಎರಡು ಮೂರು ಜನರಿಂದ ಎಂಟು ಹತ್ತು ಜನರವರೆಗೆ ಉದ್ಯೋಗವನ್ನು ಕೊಡುತ್ತಾರೆ. ಉದಾಹರಣೆಗೆ ಕಿರಾಣಿ ಅಂಗಡಿ, ಟಯರ್ ರಿಪೇರಿ ಅಂಗಡಿ, ಹೊಲಗದ್ದೆಗಳಲ್ಲಿ ಕೆಲಸ ಮಾಡುವವವರು, ಮನೆಗೆಲಸ ಮಾಡುವವರು ಇತ್ಯಾದಿ.
ಇಂತಹ ಸಣ್ಣ ಸಣ್ಣ ಉದ್ಯೋಗಗಳು ಶಹರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಸೃಷ್ಟಿಯಾಗಿವೆ. ಇಂತಹ ಉದೀಮೆದಾರರಲ್ಲಿ ಬಹುಪಾಲು ಜನ ಸರಕಾರದ ಸೌಲಭ್ಯಗಳನ್ನು ಪಡೆಯದೇ , ತಮ್ಮ ಸ್ವ ಸಾಮರ್ಥ್ಯದಿಂದ ಉದ್ಯೋಗ ನೀಡಿದ್ದಾರೆ. ಈ ಎಲ್ಲ ಉದ್ದಿಮೆಗಳು ಸಮಾಜದ ಇತರರಿಗೂ ಉದ್ಯೋಗ ಸೃಷ್ಟಿಸಿ ಹಲವಾರು ಕುಟುಂಬಗಳು ನೆಮ್ಮದಿಯ ಬಾಳ್ವೆ ನಡೆಸಲು ಸಹಕರಿಸುತ್ತಿವೆ. ಇಂತಹ ಯಾವುದೇ ವ್ಯಕ್ತಿಗೂ ಸರಕಾರ ಉದ್ಯೋಗವನ್ನು ಒದಗಿಸಿಲ್ಲ. ಈ ಯಾರಿಗೂ ಸರಕಾರದ ಕನಿಷ್ಠ ಸೌಲಭ್ಯಗಳೂ ಅವರ ವ್ಯವಹಾರಕ್ಕಾಗಿ ಸಹಾಯಕ್ಕೆ ಬಂದಿಲ್ಲ. ಆದರೆ ತೆರೆಮರೆಯಲ್ಲಿ ದೇಶದ ಆರ್ಥಿಕತೆಯ ಭಾಗವಾಗಿ ಹಾಗು ಸಮಾಜದಲ್ಲಿ ಉದ್ಯೋಗ ಸೃಷ್ಟಿಸಿ ಲಕ್ಷಾಂತರ ಜನರ ಬಾಳು ಬೆಳಗಿಸುವ ಈ ಎಲ್ಲ ಜನರ ಜೀವನ ಸುಗಮವಾಗಿ ನಡೆಯಲು ಈ ರೀತಿ ಕೆಲಸ ಮಾಡುವ ಸಂಸ್ಥೆಗಳಿಗೆ ಸರಕಾರದ ವತಿಯಿಂದ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಅದಕ್ಕೆ ನೋಂದಣಿ ವ್ಯವಸ್ಥೆಯೊಂದನ್ನು ಮಾಡಿ, ಒಂದು ಭಾಗ ಸರಕಾರ, ಒಂದು ಭಾಗ ಮಾಲೀಕ, ಒಂದು ಭಾಗ ಕಾರ್ಮಿಕ ಈ ರೀತಿ ಸ್ವಲ್ಪ ಹಣವನ್ನ ದೀರ್ಘಾವಧಿ ತುಂಬುವ ವ್ಯವಸ್ಥೆ ಮಾಡಿ, ನೋಂದಣಿಯಾದಂತಹ ಸಂಸ್ಥೆಯ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ, 50 ವರ್ಷದ ನಂತರ ಆ ಹಣ ಅವರಿಗೆ ಜೀವನದ ಭದ್ರತೆಗಾಗಿ ಸಿಗುವಂತೆ ಮಾಡಿದರೆ, ಸರಕಾರದ ಯಾವುದೇ ಸಹಕಾರವಿಲ್ಲದೆ ಸೃಷ್ಟಿಯಾದ ಈ ಕೋಟಿ ಕೋಟಿ ಕಾರ್ಮಿಕರಿಗೆ ಸಹಾಯವಾಗುತ್ತದೆ. ಹಾಗು ಅವರ ಜೀವನಕ್ಕೆಲ್ಲ ಶಾಶ್ವತ ಆರ್ಥಿಕ ಬಧ್ರತೆಯ ವ್ಯವಸ್ಥೆ ಆಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾಜಿಕ ಭದ್ರತೆಯಂತಹ (ಸೋಷಿಯಲ್ ಸೆಕ್ಯೂರಿಟಿ) ಸೌಲಭ್ಯಗಳು ನಮ್ಮ ದೇಶದ ನಾಗರಿಕನಿಗೂ ಸಿಕ್ಕರೆ ಆ ಭದ್ರತೆ ನಮ್ಮೆಲ್ಲರ ಜೀವನಕ್ಕೆ ಅತಿ ದೊಡ್ಡ ಸುರಕ್ಷತೆಯಾಗಬಲ್ಲದು. ಯಾವುದೇ ಒತ್ತಡ ಹೇರದೆಯೇ, ಯಾರು ಸ್ವ ಇಚ್ಛೆಯಿಂದ ನೋಂದಣಿ ಮಾಡಿಕೊಳ್ಳುತ್ತಾರೋ ಅವರಿಗೆ ಈ ಯೋಜನೆಯ ಅವಕಾಶ ಮಾಡಿಕೊಡುವಂತಾದರೆ ಒಳಿತು. ಈ ರೀತಿ ಮಾಡುವುದರಿಂದ ಸರಕಾರ ಅತೀ ಕಡಿಮೆ ಖರ್ಚಿನಲ್ಲಿ ಇಂತಹ ಸಣ್ಣ ಉದ್ದಿಮೆದಾರರಿಗೆ ಅವರವರ ಊರಿನಲ್ಲೇ ಉದ್ಯೋಗದೊಂದಿಗೆ ಜೀವನ ಸಾಗಿಸಲು ನೆರವಾಗುತ್ತದೆ. ಇವತ್ತಿನ ಸ್ಥಿತಿಯಲ್ಲಿ ಮಾಲಿಕರಿಗೆ ಕೆಲಸಗಾರರ ಅವಶ್ಯಕತೆ ಇದೆ, ಕೆಲಸಗಾರರಿಗೆ ಕೆಲಸದ ಅವಶ್ಯಕತೆ ಇದೆ. ಈ ತರಹದ ಒಂದು ಯೋಜನೆ ಸರಕಾರದಿಂದ ಸಿಕ್ಕಲ್ಲಿ ಈ ಎರಡೂ ಅವಶ್ಯಕತೆಗಳು ಸರಕಾರದ ಹೆಚ್ಚಿನ ಶ್ರಮವಿಲ್ಲದೆ ತನ್ನಿಂದ ತಾನೇ ನಡೆಯಲು ಸಾಧ್ಯವಾಗುತ್ತದೆ. ಕಾರಣ ಈ ನಿಟ್ಟಿನಲ್ಲಿ ಅನುಭವಸ್ತರಾದ ತಾವುಗಳು ದಯವಿಟ್ಟು ಆಳವಾದ ಅಧ್ಯಯನ ಮಾಡಿ ದೇಶಕ್ಕೆ ಒಂದು ಹೊಸ ದೃಷ್ಟಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
– ಕೃಷ್ಣ ಭಟ್
ಕರ್ನಾಟಕ ರಾಜ್ಯ ಟೇಲರ್ ಅಸ್ಸೋಸಿಯೇಶನ್ ಸಲಹಾ ಸದಸ್ಯ,
ಕ್ರೀಸ್ ವೈಸ್ ಟೇಲರ್ಸ್, ಬೆಳಗಾವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ