*ಬಿಡದಿ ಟೌನ್ ಶಿಪ್ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಗೆ ಪ್ರಧಾನಿ ಮೋದಿ ಹೇಳಿದ ಕಿವಿಮಾತೇನು?*

ರಾಜ್ಯದಲ್ಲಿ ನಕಲಿ ಫೈನಾನ್ಸ್ ಸ್ಕೀಂ, ರೌಡಿಗಳು ಹಾಗೂ ಡ್ರಗ್ಸ್ ಜಾಲ ನಿಗ್ರಹಕ್ಕೆ ಕ್ರಮ
ಪ್ರಗತಿವಾಹಿನಿ ಸುದ್ದಿ: ಭ್ರಷ್ಟಾಚಾರ ಮುಕ್ತ ಕರ್ನಾಟಕ, ಎಸ್ಐಆರ್ ನಲ್ಲಿ ಮತದಾನದ ಹಕ್ಕು ರಕ್ಷಣೆ, ತಾಲ್ಲೂಕು ಮಟ್ಟದಲ್ಲಿ ರಿಂಗ್ ರಸ್ತೆ ಗ್ರಿಡ್ ನಿರ್ಮಾಣ, ಮಳೆ ಕೊರತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ, ಯುವ ಯುಗ ಸ್ಥಾಪನೆ, ನಕಲಿ ಫೈನಾನ್ಸ್ ಸ್ಕೀಂ, ರೌಡಿಗಳು ಹಾಗೂ ಡ್ರಗ್ಸ್ ಜಾಲ ನಿಗ್ರಹ, ಗ್ರಾಮೀಣ ಶಿಕ್ಷಣಕ್ಕೆ ಸಿಎಸ್ಆರ್ ನೀತಿ ರಚನೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿ, ಸಿಇಒ, ಡಿಎಫ್ಒ ಹಾಗೂ ಸರ್ಕಾರಿ ಹಿರಿಯ ಅಧಿಕಾರಿಗಳೊಂದಿಗೆ 7 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಶನಿವಾರ ಮಾಹಿತಿ ನೀಡಿದರು.
“ನಾವೆಲ್ಲರೂ ಒಂದೇ ತಂಡ, ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ ಎಂದು ಅಧಿಕಾರಿಗೆಳಿಗೆ ಮನವಿ ಮಾಡಲಾಗಿದೆ. ಸಮಸ್ಯೆ ಕಾರಣಕ್ಕೆ ಜನ ನಮ್ಮ ಬಳಿಗೆ ಬರುತ್ತಾರೆ. ಸಮಸ್ಯೆ ಇಲ್ಲವಾದರೆ ಯಾರೂ ಡಿಸಿ, ತಾಲ್ಲೂಕು ಕಚೇರಿಗೆ ಬರುವುದಿಲ್ಲ. ಸಮಸ್ಯೆಯೊಂದಿಗೆ ಬಂದ ಜನರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು, ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಲಾಗಿದೆ. ಎಲ್ಲರೂ 10 ಗಂಟೆಗೆ ಕಚೇರಿಗೆ ಹಾಜರಾಗಬೇಕು, ಜಿಲ್ಲಾ ಕಚೇರಿಗಳಲ್ಲಿ ಅಧಿಕಾರಿಗಳು ಹಾಜರಾದ ಕೂಡಲೆ ಅವರ ಹೆಬ್ಬೆರಳು ಗುರುತು ಮುಖ್ಯ ಕಾರ್ಯದರ್ಶಿಗಳಿಗೆ ಸಂದೇಶ ರವಾನೆಯಾಗಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. ಗ್ರಾಮ ಲೆಕ್ಕಿಗ, ಕಂದಾಯ ಅಧಿಕಾರಿ, ಪಿಡಿಒಗಳಿಂದ ಯಾವುದೇ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳವರೆಗೂ ಎಲ್ಲರೂ ತಮ್ಮ ಕೇಂದ್ರ ಕಚೇರಿಯಲ್ಲಿ ಕಡ್ಡಾಯವಾಗಿ ಇರಬೇಕು. ಅವರ ವಿಳಾಸ, ದೂರವಾಣಿ ಸಂಖ್ಯೆ ವೆಬ್ ಸೈಟ್ ಗಳಲ್ಲಿ ಲಭ್ಯವಾಗಿರಬೇಕು ಎಂದು ಸೂಚಿಸಿರುವುದಾಗಿ” ತಿಳಿಸಿದರು .
ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ
“ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಸರ್ಕಾರದ ಗುರಿಯಾಗಿದೆ. ಯಾರು ಕೂಡ ತಾಲ್ಲೂಕು ಹಾಗೂ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ 10 ರೂಪಾಯಿ ಲಂಚ ನೀಡಬಾರದು. ಇದರ ವಿರುದ್ಧ ದೂರು ನೀಡಲು ಸರ್ಕಾರಿ ಕಚೇರಿಗಳಲ್ಲಿ ದೂರವಾಣಿ ಸಂಖ್ಯೆ ಹಾಕಲಾಗಿರುತ್ತದೆ. ಕೆಲವರು ಸುಳ್ಳು ಪ್ರಕರಣ ದಾಖಲಿಸಿ ಸುಲಿಗೆ ಮಾಡುವವರು ಇದ್ದಾರೆ. ಅದರ ಬಗ್ಗೆಯೂ ನಾವು ಪರಿಶೀಲನೆ ಮಾಡುತ್ತೇವೆ. ನಾನೇ ಆಗಲಿ, ನಮ್ಮ ಸಚಿವರುಗಳೇ ಆಗಲಿ, ಶಾಸಕರುಗಳೇ ಆಗಲಿ ಯಾವುದಾದರೂ ತಪ್ಪನ್ನು ಮಾಡು ಎಂದರೆ ಮಾತು ಕೇಳಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಯಾರಾದರೂ ಕಾನೂನು ವಿರುದ್ಧ ಕೆಲಸ ಮಾಡಲು ಒತ್ತಡ ಹಾಕಲು ಬಂದರೆ ಕೂಡಲೇ ನನಗೆ ಮಾಹಿತಿ ನೀಡಿ ಎಂದು ತಿಳಿಸಿದ್ದೇನೆ. ನಾನು ಏಕಾಏಕಿ ಎಲ್ಲವನ್ನು ಒಂದೇ ಬಾರಿಗೆ ಬದಲಿಸುತ್ತೇನೆ ಎಂದು ಹೇಳುತ್ತಿಲ್ಲ. ಈ ಪ್ರಯತ್ನದಲ್ಲಿ ನಿಮ್ಮ ಸಹಕಾರ ಬೇಕಿದೆ ಎಂದು ಮನವಿ ಮಾಡಿದ್ದೇನೆ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಹ ಕೆಲಸಕ್ಕೆ ಅವಕಾಶ ನೀಡಬೇಡಿ. ಅಧಿಕಾರಿಗಳ ವರ್ಗದಲ್ಲಿ ನಾವು ಸಾಮಾಜಿಕ ನ್ಯಾಯವನ್ನು ಪಾಲಿಸುತ್ತೇವೆ” ಎಂದು ಹೇಳಿದರು.
ತಾಲ್ಲೂಕು ಮಟ್ಟದಲ್ಲಿ ರಿಂಗ್ ರಸ್ತೆ ಗ್ರಿಡ್ ನಿರ್ಮಾಣಕ್ಕೆ ಸೂಚನೆ
“ಸಂಚಾರ ಯೋಜನೆ ಸುಲಭಗೊಳಿಸಲು ಈಗಿನಿಂದಲೇ ಎಲ್ಲಾ ತಾಲ್ಲೂಕುಗಳಲ್ಲಿ ವರ್ತುಲ ರಸ್ತೆ ನಿರ್ಮಿಸಲು ಯೋಜನೆ ರೂಪಿಸಬೇಕು. ನಾವು ಕೂಡಲೇ ರಸ್ತೆ ಮಾಡದಿದ್ದರೂ ಇದಕ್ಕಾಗಿ ಗ್ರಿಡ್ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರ ಪ್ರದೇಶಗಳಲ್ಲಿ ಇದಕ್ಕೆ ಯೋಜನೆ ರೂಪಿಸಲು ನಿರ್ದೇಶನ ನೀಡಲಾಗಿದೆ” ಎಂದರು.
ಒಂದು ತಿಂಗಳಲ್ಲಿ ಮಕ್ಕಳಿಗೆ ಸಮವಸ್ತು, ಶೂ, ಪಠ್ಯಪುಸ್ತಕ ವಿತರಣೆ
“ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತರುವಂತೆ ಮಾಡಬೇಕು. ಎಷ್ಟು ಶಾಲೆಗಳಲ್ಲಿ ಶೂನ್ಯ ಹಾಜರಾತಿಗಳಿವೆ ಎಂಬ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ವಿದ್ಯಾರ್ಥಿಗಳ ಸಮವಸ್ತ್ರ, ಶೂ, ಪಠ್ಯ ಪುಸ್ತಕ ಮುಂದಿನ ಒಂದು ತಿಂಗಳಲ್ಲಿ ವಿತರಣೆಯಾಗಬೇಕು. ಶೂನ್ಯ ದಾಖಲಾತಿ 964 ಶಾಲೆಗಳಿವೆ. 1-5 ಮಕ್ಕಳ ದಾಖಲಾತಿ ಇರುವ ಶಾಲೆಗಳು 3,542 ಶಾಲೆಗಳು, 6-20 ವಿದ್ಯಾರ್ಥಿಗಳ ದಾಖಲಾತಿ ಇರುವ ಶಾಲೆಗಳ ಪ್ರಮಾಣ 12,696 ಶಾಲೆಗಳಿವೆ. 21-30 ಮಕ್ಕಳ ದಾಖಲಾತಿ ಇರುವ 4,997 ಶಾಲೆಗಳಿರುವ ಮಾಹಿತಿ ನಮ್ಮ ಬಳಿ ಇದೆ” ಎಂದರು.
ಮಳೆ ಕೊರತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ
“ಮಳೆಗಾಲ ಆರಂಭವಾಗುತ್ತಿದ್ದು, ಬಿತ್ತನೆ ಕಾರ್ಯ ಶುರುವಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆಗೆ ಕ್ರಮವಹಿಸಬೇಕು. ಎಲ್ ನಿನೋ ಪ್ರಭಾವ ಬೀರುವ ಸಾಧ್ಯತೆ ಇದ್ದು, ಅಲ್ಪಾವಧಿ ಮಳೆ ಮುನ್ಸೂಚನೆ ಇದೆ. ಇದನ್ನು ನಿಭಾಯಿಸಲು ಕ್ರಮ ವಹಿಸಬೇಕು. ಮಳೆ ಕೊರತೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. 30% ಮಳೆ ಕೊರತೆ ಇದ್ದು, ಮೇವಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಪ್ರತಿ ಹಾಸ್ಟೆಲ್ ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಅಲ್ಲಿನ ಆಹಾರ ಗುಣಮಟ್ಟ ಪರಿಶೀಲಿಸಲು ಸೂಚಿಸಲಾಗಿದೆ” ಎಂದರು.
ನಕಲಿ ಫೈನಾನ್ಸ್ ಸ್ಕೀಂ, ರೌಡಿಗಳು ಹಾಗೂ ಡ್ರಗ್ಸ್ ಜಾಲ ನಿಗ್ರಹಕ್ಕೆ ಕ್ರಮ
“ನಕಲಿ ಫೈನಾನ್ಸ್ ಗಳ ನಿಗ್ರಹಕ್ಕೆ ಸರ್ಕಾರ ಮಸೂದೆ ಜಾರಿಗೆ ತಂದಿದ್ದರೂ ಇಂತಹ ಪ್ರಕರಣ ಬೆಳಕಿಗೆ ಬರುತ್ತಿದ್ದು, ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಗುಪ್ತಚರವನ್ನು ಬಳಸಿ ಇಂತಹ ಸ್ಕೀಂಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಲಾಗಿದೆ. ಗಾಂಜಾ, ಡ್ರಗ್ಸ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ತೀರ್ಮಾನಿಸಿದೆ. ನಮ್ಮ ಪೊಲೀಸ್ ಅಧಿಕಾರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಡ್ರಗ್ ಪೆಡ್ಲರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ” ಎಂದು ವಿವರಿಸಿದರು.
“ಪ್ರತಿ ಪೊಲೀಸ್ ಠಾಣೆಯಲ್ಲಿ ಐದು ಪೊಲೀಸರ ತಂಡವನ್ನು ರಚಿಸಿ ರೌಡಿಗಳನ್ನು ನಿಗ್ರಹಿಸಲು ಸೂಚಿಸಲಾಗಿದೆ. ಸೈಬರ್ ಅಪರಾಧ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಜಿಲ್ಲಾ ಮಟ್ಟದಲ್ಲೇ ಜನರ ಸಮಸ್ಯೆ ಬಗೆಹರಿಸಿ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಜನಸಂಪರ್ಕ ಸಭೆಯಲ್ಲಿ ಭಾಗವಹಿಸಬೇಕು. ಶಾಸಕರು ಪಂಚಾಯ್ತಿ ಹಾಗೂ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ಮಾಡಬೇಕು. ಅದಕ್ಕೆ ಅಗತ್ಯವಿರುವ ಆರ್ಥಿಕ ವ್ಯವಸ್ಥೆ ಮಾಡಲಾಗುವುದು. ಆಗ ಜನ ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿಗೆ ಬರುವುದು ಕಡಿಮೆಯಾಗುತ್ತದೆ. ಇದರಿಂದ ಈ ಜನಪರ ಸರ್ಕಾರ ಜನರ ಬಳಿಗೆ ಹೋಗಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಎಸ್ಐಆರ್ ನಲ್ಲಿ ಮತದಾನದ ಹಕ್ಕು ರಕ್ಷಣೆಗೆ ಜಾಗೃತಿ
“ಎಸ್ಐಆರ್ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಪ್ರತಿ ತಾಲ್ಲೂಕಿಗೆ ಹೋಗಿ, ಬಿಎಲ್ಒಗಳಿಗೆ ಮಾರ್ಗದರ್ಶನ ನೀಡಿ, ಎಲ್ಲಾ ಪಕ್ಷಗಳ ಬಿಎಲ್ಎಗಳ ಜೊತೆ ಸಂಪರ್ಕ ಇಟ್ಟುಕೊಂಡು ಜನರ ಮತದಾನದ ಹಕ್ಕು ರಕ್ಷಣೆ ಮಾಡಬೇಕು. ಮ್ಯಾಪಿಂಗ್ ಕೇವಲ ಅಧಿಕಾರಿಗಳಿಗೆ ಮಾತ್ರ. ಅದು ನಮಗೆ ಲೆಕ್ಕವಿಲ್ಲ. ನಾನು ಹಾಗೂ ನಮ್ಮ ಸಚಿವರುಗಳೂ ಸೇರಿದಂತೆ ಪ್ರತಿಯೊಬ್ಬ ಮತದಾರರು ತಮ್ಮ ಮತ ಉಳಿಸಿಕೊಳ್ಳಬೇಕಾದರೆ, ಕಡ್ಡಾಯವಾಗಿ ಬಿಎಲ್ಒಗಳು ನೀಡುವ ಎನ್ಯುಮರೇಷನ್ ಅರ್ಜಿಯನ್ನು ತುಂಬಿ ಸಲ್ಲಿಸಬೇಕು. ಆಗ ಮಾತ್ರ ಮತದಾನದ ಹಕ್ಕು ಉಳಿಯುತ್ತದೆ. ಬಿಎಲ್ಎಗಳು ಮನೆ ಬಾಗಿಲಿಗೆ ಬಂದು ಭೇಟಿ ನೀಡುತ್ತಾರೆ. ನೀವು ಭೇಟಿಯಾಗದಿದ್ದರೆ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸುತ್ತಾರೆ. ಇದಕ್ಕೆ ಅವಕಾಶ ನೀಡಬೇಡಿ. ಯಾರೇ ಆಗಲಿ ತಮ್ಮ ಊರಿನಿಂದ ಹೊರಗೆ ಕೆಲಸ ಮಾಡುತ್ತಿದ್ದರೆ, ಅವರ ದಾಖಲೆಗಳನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಬೇಕು” ಎಂದು ವಿವರಿಸಿದರು.
“ಯಾರಿಗೆ ವಾಸ ಪ್ರಮಾಣ ಪತ್ರವಿಲ್ಲವೋ ಅವರಿಗೆಲ್ಲಾ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಲಾಗಿದೆ. ಮತದಾನದ ಹಕ್ಕಿಲ್ಲವಾದರೆ, ಸರ್ಕಾರದ ಐದು ಗ್ಯಾರಂಟಿಗಳು, ಸರ್ಕಾರದ ಪಿಂಚಣಿ ಹಾಗೂ ಇತರೆ ಸೌಲಭ್ಯಗಳು ತಲುಪುವುದಿಲ್ಲ. ಹೀಗಾಗಿ ಕಡ್ಡಾಯವಾಗಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಹೋಗಬೇಕು. ಎಸ್ಐಆರ್ ವಿಚಾರದಲ್ಲಿ ಪ್ರತಿ ಪಂಚಾಯ್ತಿ ಹಾಗೂ ಬೂತ್ ಮಟ್ಟದಲ್ಲಿ ಮಾರ್ಗದರ್ಶನ ನೀಡಲು ಸೂಚಿಸಿದ್ದೇನೆ” ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ
“ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಪ್ರಕ್ರಿಯೆ ಆರಂಭವಾಗಿದೆ. ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಕೆಲವರು ನಿಧನರಾಗಿದ್ದು, ಅವರ ಹೆಸರಲ್ಲಿ ಬೇರೆಯವರು 100 ಕೋಟಿಗೂ ಹೆಚ್ಚು ಹಣ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದೆಯೇ ಇಲ್ಲವೇ ಎಂದು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಎಲ್ಲಾ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸಬೇಕಾಗಿದೆ. ನಾವು ಈ ಯೋಜನೆಯನ್ನು ನಿಲ್ಲಿಸುವುದಿಲ್ಲ. ಯಾರನ್ನೂ ತೆಗೆದುಹಾಕುವ ಉದ್ದೇಶ ಸರ್ಕಾರಕ್ಕಿಲ್ಲ. ಸರಿಯಾದ ಮಾಹಿತಿ ನೀಡುವ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶ. ಗೃಹಲಕ್ಷ್ಮಿ ಯೋಜನೆಯಲ್ಲೂ 1.64 ಲಕ್ಷ ಫಲಾನುಭವಿಗಳಿದ್ದು, ಅವರು ಮತ್ತೆ ಅರ್ಜಿ ಹಾಕಬೇಕಿದೆ. ಒಬ್ಬರ ಹೆಸರಿನಲ್ಲಿ ಐದಾರು ಮೀಟರ್ ಗಳಿದ್ದು, ಆ ಮನೆಯಲ್ಲಿ ಅವರೇ ವಾಸವಿದ್ದಾರಾ? ಬೇರೆಯವರು ಇದ್ದಾರ? ಈ ಯೋಜನೆ ನಮ್ಮ ರಾಜ್ಯದವರಿಗೆ ಸಿಗುತ್ತಿದೆಯೇ, ಬೇರೆ ರಾಜ್ಯದವರಿಗೆ ಸಿಗುತ್ತಿದೆಯೇ ಎಂದು ಪರಿಶೀಲನೆ ಮಾಡಬೇಕಿದೆ. ಫಲಾನುಭವಿಗಳಿಗೆ ನಾವು ಗುರುತಿನ ಚೀಟಿ ನೀಡಬೇಕಾಗಿದೆ. ಕೆಲವೇ ದಿನಗಳಲ್ಲಿ ಅರ್ಜಿ ನೀಡಲಾಗುವುದು” ಎಂದು ಮಾಹಿತಿ ನೀಡಿದರು.
ಗ್ರಾಮೀಣ ಭಾಗದ ಶಿಕ್ಷಣಕ್ಕೆ ಸಿಎಸ್ಆರ್ ನಿಧಿ ಬಳಕೆಗೆ ನೀತಿ ರಚನೆ
“ನಾವು ನೂತನ ಸಿಎಸ್ಆರ್ ನೀತಿ ತರುತ್ತಿದ್ದೇವೆ. ಕಂಪನಿಗಳು ತಮ್ಮ ವಾರ್ಷಿಕ ಆದಾಯದ 2% ಹಣವನ್ನು ಸಿಎಸ್ಆರ್ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬ ನಿರ್ದೇಶನವಿದೆ. ಈ ನಿಧಿಯನ್ನು ಗ್ರಾಮೀಣ ಭಾಗದ ಶಾಲೆಗಳ ನಿರ್ಮಾಣಕ್ಕೆ ಬಳಸಲು ತೀರ್ಮಾನಿಸಲಾಗಿದೆ. ಹಳ್ಳಿಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯ ಒದಗಿಸಲು ತೀರ್ಮಾನಿಸಲಾಗಿದೆ. ಖಾಸಗಿ ಶಾಲೆಗಳು ಈ ಗ್ರಾಮೀಣ ಭಾಗದ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ನಗರ ಪ್ರದೇಶದಲ್ಲಿ ಸಿಗುವ ಶಿಕ್ಷಣ, ಸಿಗುವಂತೆ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ 20 ಶಾಲೆಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯ ಹಣವನ್ನು ಸರ್ಕಾರಕ್ಕೆ ನೀಡುವುದು ಬೇಡ, ಸರ್ಕಾರ ನೀಡುವ ಮಾದರಿಯಲ್ಲಿ ಶಾಲೆಗಳನ್ನು ನಿರ್ಮಿಸಿಕೊಟ್ಟರೆ ಸಾಕು. ಇದು ಸಂಪೂರ್ಣ ಸರ್ಕಾರಿ ಶಾಲೆಯಾಗಿರುತ್ತವೆ” ಎಂದರು.
ಯುವ ಯುಗ ನಿರ್ಮಾಣ
“ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಖಾಸಗಿ ಉದ್ಯೋಗ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಖಾಸಗಿ ವಲಯದಲ್ಲಿ ಉದ್ಯೋಗ ಬಯಸುವವರು ಇಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಉದ್ಯೋಗಿಗಳು ಅಗತ್ಯವಿರುವ ಕಂಪನಿಗಳು ಕೂಡ ತಮಗೆ ಬೇಕಾಗಿರುವ ಉದ್ಯೋಗಿಗಳ ಅರ್ಹತೆ ಮತ್ತು ಸಂಖ್ಯೆಯ ಮಾಹಿತಿ ನೀಡುತ್ತಾರೆ. ಇಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮಾಡಲಾಗುವುದು. ಕಂಪನಿಗಳಿಗೆ 100% ಸ್ಥಳೀಯರನ್ನೇ ತೆಗೆದುಕೊಳ್ಳಿ ಎಂದು ಹೇಳಲು ಆಗುವುದಿಲ್ಲ. ಇದಕ್ಕಾಗಿ ನಿರ್ದಿಷ್ಟ ಪ್ರಮಾಣ ನಿಗದಿ ಮಾಡಲಾಗುವುದು. ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸಲು ಸೇತುವೆ ನಿರ್ಮಿಸಲಾಗುವುದು. ಆಮೂಲಕ ಯುವ ಯುಗವನ್ನು ಆರಂಭಿಸುತ್ತಿದ್ದೇವೆ” ಎಂದು ತಿಳಿಸಿದರು.
“ಇನ್ನು ನನ್ನ ಕನಸಿನ ಕಾರ್ಯಕ್ರಮ ಭಾರತ ಜೋಡೋ ಯುವಕರ ಸಂಘ ನಿರ್ಮಿಸಲು ಮುಂದಾಗಿದ್ದೇವೆ. ರಾಜ್ಯದಲ್ಲಿ 6000 ಗ್ರಾಮ ಪಂಚಾಯ್ತಿಗಳಿದ್ದು, 4 ಸಾವಿರ ನಗರ ಪ್ರದೇಶದ ವಾರ್ಡ್ ಗಳಿವೆ. ಈ ಭಾಗದಲ್ಲಿ ಯುವಕರ ಸೌಹಾರ್ದತೆಗೆ ಹಾಗೂ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಇದು ರಾಜಕೀಯೇತ್ತರ ಸಂಘಗಳಾಗಿದ್ದು, 16 ವರ್ಷಗಳಿಂದ 35 ಅತವಾ 40 ವರ್ಷವರೆಗಿನವರು ಈ ಸಂಘಗಳ ಸದಸ್ಯರಾಗಬಹುದು. ವಯೋಮಿತಿಯನ್ನು ಶೀಘ್ರವೇ ತೀರ್ಮಾನಿಸಲಾಗುವುದು. ಕ್ರೀಡೆ, ಸಾಂಸ್ಕೃತಿಕ, ನಾಯಕತ್ವ ಪ್ರತಿಭೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗುವುದು. ರಾಜಕೀಯ ಹಸ್ತಕ್ಷೇಪವಿಲ್ಲದೇ ಸಂಘಗಳ ರಚನೆಗೆ ಶೀಘ್ರವೇ ಮಾರ್ಗಸೂಚಿ ಹೊರಡಿಸಲಾಗುವುದು. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ಅನುದಾನ ನೀಡಲಾಗುವುದು” ಎಂದು ಹೇಳಿದರು.
ಪ್ರಶ್ನೋತ್ತರ
ಭ್ರಷ್ಟಾಚಾರ ನಿಯಂತ್ರಿಸುವ ಕ್ರಮವನ್ನು ಮೇಲ್ವಿಚಾರಣೆ ಮಾಡುವವರು ಯಾರು ಎಂದು ಕೇಳಿದಾಗ “ತಳಮಟ್ಟದಿಂದ ಸರಿಪಡಿಸಬೇಕಾಗಿದೆ. ಹಳ್ಳಿಯಿಂದ ವಿಧಾನಸೌಧದವರೆಗೆ ಅದೇ ಪದ್ಧತಿಯಲ್ಲಿ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.
ಅಧಿಕಾರಿಗಳಲ್ಲಿ ಪರ್ಸೆಂಟೇಜ್ ಮಟ್ಟದಲ್ಲಿ ಕಮಿಷನ್ ಪಡೆಯಲಾಗುತ್ತಿದ್ದು, ನೀವು ಇದನ್ನು ಎಷ್ಟು ಪರ್ಸೆಂಟ್ ಗೆ ನಿಯಂತ್ರಿಸುತ್ತೀರಿ ಎಂದು ಕೇಳಿದಾಗ, “ಯಾವ ಪರ್ಸೆಂಟೇಜ್ ಇಲ್ಲ, 0 ಪರ್ಸೆಂಟೇಜ್ ಗೆ ತರುತ್ತೇವೆ” ಎಂದು ತಿಳಿಸಿದರು.
ಭಾರತ ಜೋಡೋ ಎಂಬುದೇ ರಾಜಕೀಯ ಕಾರ್ಯಕ್ರಮವಾಗಿದ್ದು, ಇದರ ಸಂಘಗಳು ಹೇಗೆ ರಾಜಕೀಯೇತ್ತರವಾಗುತ್ತದೆ ಎಂದು ಕೇಳಿದಾಗ, “ಭಾರತ ಜೋಡೋ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮ ಎಂದು ಹೇಳಿದ್ದು ಯಾರು? ದೇಶವನ್ನು ಹಾಗೂ ಜನರ ಹೃದಯ ಒಂದುಗೂಡಿಸುವುದು, ಸಮಾಜವನ್ನು ಶಾಂತಿಯ ತೋಟವಾಗಿ ಮಾಡುವುದು ರಾಜಕೀಯ ಕ್ರಮವೇ? ಕುವಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶ ರಾಜಕೀಯ ಕ್ರಮವೇ?” ಎಂದು ಪ್ರಶ್ನಿಸಿದರು.
ಯುವಕರಿಗೆ ಪ್ರೋತ್ಸಾಹ ನೀಡಲು ವಿವಿಧ ಇಲಾಖೆಗಳಿವೆ. ಆದರೂ ಈ ಸಂಘಗಳೇಕೆ ಎಂದು ಕೇಳಿದಾಗ “ಈ ಎಲ್ಲಾ ಇಲಾಖೆಗಳು ಈ ಕಾರ್ಯಕ್ರಮದಲ್ಲಿ ಕೈಜೋಡಿಸಲಿವೆ. ಈ ಕಾರ್ಯಕ್ರಮಕ್ಕೆ ರೂಪುರೇಷ ಕೊಟ್ಟ ಬಳಿಕ ಎಲ್ಲವನ್ನು ವಿವರವಾಗಿ ತಿಳಿಸುತ್ತೇನೆ” ಎಂದರು.
ಜನರನ್ನು ವಂಚಿಸುವ ಸ್ಕೀಂಗಳ ಬಗ್ಗೆ ಕೇಳಿದಾಗ, “ನಾನು ಈ ವಿಚಾರವಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದ ಬಳಿಕ ಯಾರು ಕಾನೂನು ಬಾಹೀರವಾಗಿ ನಡೆಸುತ್ತಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಕಾನೂನು ಚೌಕಟ್ಟಿನಲ್ಲಿ ನಡೆಸುವವರಿಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಕೆಲವು ತೀರ್ಮಾನ ಮಾಡಿ ಅವಕಾಶ ಕೊಟ್ಟಿದೆ. ಅದರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರಾ ಇಲ್ಲವೇ ಎಂದು ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸುತ್ತೇವೆ” ಎಂದು ತಿಳಿಸಿದರು.
ರಸಗೊಬ್ಬರ ಪೂರೈಕೆಯಾಗಿಲ್ಲ ಎಂದು ಕೇಳಿದಾಗ “ಈ ವಿಚಾರವಾಗಿ ನಾವು ಚರ್ಚೆ ಮಾಡಿದ್ದು, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತೇವೆ. ಪ್ರಧಾನಮಂತ್ರಿಗಳು ಈ ವಿಚಾರವಾಗಿ ಹೇಳಿದ್ದಾರೆ. ನಾವು ಈ ಬಗ್ಗೆ ಸಭೆ ಮಾಡಿದ್ದೇವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡಬೇಕು. ನಾವು ಅವರೊಂದಿಗೆ ಸಂಪರ್ಕ ಹೊಂದಿದ್ದು, ಒತ್ತಡ ಹಾಕುತ್ತಿದ್ದೇವೆ. ಅವರು ಯುದ್ಧದ ಕಾರಣ ಹೇಳುತ್ತಿದ್ದಾರೆ. ಇದಕ್ಕಾಗಿ ಪ್ರಧಾನಿ ಸಾವಯವ ಗೊಬ್ಬರ ಬಳಕೆಗೆ ಕರೆ ನೀಡಿದ್ದಾರೆ. ರಸಗೊಬ್ಬರ ಕಡಿಮೆ ಬಳಕೆಗೆ ಸಲಹೆ ನೀಡಿದ್ದಾರೆ. ಅವರು ತಮ್ಮದೇ ಆದ ಕ್ರಮಗಳನ್ನು ತಿಳಿಸಿದ್ದಾರೆ” ಎಂದರು.
ಗ್ಯಾರಂಟಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಸುವ ಬಗ್ಗೆ ಕೇಳಿದಾಗ, “ಈ ಯೋಜನೆ ಲಾಭ ಪಡೆಯುತ್ತಿರುವವರು ಮನೆಯ ನಿಜವಾದ ಯಜಮಾನಿಯೇ ಎಂದು ತಿಳಿದುಕೊಳ್ಳಬೇಕಲ್ಲವೇ? ಒಂದು ಮನೆಗೆ ಒಬ್ಬರು ಮನೆ ಯಜಮಾನಿಯರನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದೇ ಮನೆಯಲ್ಲಿ ಇಬ್ಬರು ಮೂವರು ಯಜಮಾನಿಯರಿದ್ದಾರೆ ಅದನ್ನು ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದರು.
ಬಿಡದಿ ಟೌನ್ ಶಿಪ್ ಬಗ್ಗೆ ಪ್ರಧಾನಿ ಮೋದಿ ಅವರ ಕಿವಿಮಾತು
ಬಿಡದಿ ಟೌನ್ ಶಿಪ್ ವಿಚಾರವಾಗಿ ಕಾನೂನು ಹೋರಾಟ ಮಾಡವ ಬಗ್ಗೆ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ಕೇಳಿದಾಗ, “ಅವರಿಗೆ ಶುಭ ಕೋರುತ್ತೇನೆ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲೇ ಈ ಟೌನ್ ಶಿಪ್ ಆಗುತ್ತಿದೆ. ನಿನ್ನೆ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದಾಗ ಅವರು, ನಾನು ಕೂಡ ಏಳೆಂಟು ಟೌನ್ ಶಿಪ್ ಮಾಡಿದ್ದೆ. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಬೆಂಗಳೂರಿನ ಒತ್ತಡ ಕಡಿಮೆ ಮಾಡುತ್ತಿದ್ದೀರಿ ಎಂದು ನನಗೆ ಕಿವಿಮಾತು ಹೇಳಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ” ಎಂದರು.
ನೀತಿ ಆಯೋಗ ಸಭೆಯಲ್ಲಿ ಭಾಗಿಯಾಗಿದ್ದರ ಬಗ್ಗೆ ಕೇಳಿದಾಗ, “ನಿಮ್ಮೆಲ್ಲರ ಭಾವನೆಯಂತೆ ಸಭೆಯಲ್ಲಿ ಭಾಗವಹಿಸಿದ್ದೇನೆ. ನಮ್ಮ ವಿಚಾರ ತಿಳಿಸಿದ್ದು, ನಮ್ಮ ವಿಚಾರಗಳಿಗೆ ಸ್ಪಂದಿಸಿದ್ದಾರೆ. ನಮ್ಮ ಆಚಾರ ವಿಚಾರವನ್ನು ಪ್ರಧಾನಮಂತ್ರಿಗಳು ಯಾವ ರೀತಿ ಒಪ್ಪಿಕೊಂಡಿದ್ದಾರೆ, ನಮ್ಮ ಮಾತನ್ನು ಹೇಗೆ ಉದಾಹರಣೆ ತೆಗೆದುಕೊಂಡಿದ್ದಾರೆ ಎಂದು ಅಲ್ಲಿದ್ದ ನಮ್ಮ ರಾಜ್ಯದ ಬೇರೆ ನಾಯಕರನ್ನು ಕೇಳಿ. ನಮ್ಮ ವಿರುದ್ಧ ಟೀಕೆ ಮಾಡುವ ನಾಯಕರು ಅಲ್ಲಿದ್ದರು ಅವರನ್ನು ಕೇಳಿ ಅವರೇ ಹೇಳುತ್ತಾರೆ” ಎಂದು ತಿಳಿಸಿದರು.
ನೀತಿ ಆಯೋಗದಲ್ಲಿ ಗ್ಯಾರಂಟಿ ಯೋಜನೆ ಪ್ರಶಂಸೆ ಮಾಡಿ, ಈಗ ಪರಿಷ್ಕರಣೆ ಮಾಡುತ್ತಿದ್ದೀರಿ ಎಂದು ಕೇಳಿದಾಗ, “ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರು ಅವರು. ನಂತರ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಬೇರೆ ರಾಜ್ಯಗಳಲ್ಲಿ ಹಂಚಿದ್ದಾರೆ” ಎಂದರು.



