Latest

*ಮಠಾಧೀಶರ ವಾಸ್ತವ್ಯಕ್ಕೆ 2 ಎಕರೆ ಜಮೀನು: ಡಿಕೆಶಿ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸುವ ಮಠಾಧೀಶರು ಮತ್ತು ಭಕ್ತರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲು ಬೆಂಗಳೂರು ಹೊರವಲಯದಲ್ಲಿ ಸರ್ಕಾರದಿಂದ 2 ಎಕರೆ ಜಮೀನು ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಈ ಘೋಷಣೆ ಮಾಡಿದ್ದಾರೆ.

ಮಠಾಧೀಶರು ಬೆಂಗಳೂರಿಗೆ ಬಂದಾಗ ವಾಸ್ತವ್ಯ, ಪೂಜೆ, ಜಪ ಮತ್ತು ತಪಕ್ಕೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಬೇಕು ಎಂಬ ಮನವಿಗೆ ಸಿಎಂ ಸ್ಪಂದಿಸಿದ್ದಾರೆ. ಜಮೀನು ಸರ್ಕಾರದಿಂದ ನೀಡಲಾಗುವುದು, ಕಟ್ಟಡ ನಿರ್ಮಾಣವನ್ನು ಮಠಾಧೀಶರು ಹಾಗೂ ಸಮಾಜದ ಮುಖಂಡರು ಕೈಗೆತ್ತಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಟ್ಟಡಕ್ಕೆ ಯಾವ ಹೆಸರು ಇಡಬೇಕು ಎಂಬುದನ್ನು ಸಮಾಜವೇ ನಿರ್ಧರಿಸಬಹುದು ಎಂದಿದ್ದಾರೆ.

ಇದೇ ವೇಳೆ ಮಠಗಳ ಸೇವಾ ಪರಂಪರೆಯನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಸಿಎಂ ಹೇಳಿದ್ದಾರೆ. ಶಿಕ್ಷಣ, ದಾಸೋಹ, ಜ್ಞಾನ ಹಾಗೂ ಸಾಮಾಜಿಕ ಸೇವೆಯ ಮೂಲಕ ಮಠಗಳು ಎಲ್ಲ ಸಮುದಾಯಗಳಿಗೂ ನೆರವಾಗಬೇಕು. ವೀರಶೈವ ಲಿಂಗಾಯತ ಸಮಾಜ ತನ್ನೊಳಗೆ ಮಾತ್ರ ಒಗ್ಗಟ್ಟಾಗದೆ, ರಾಜ್ಯದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದ್ದಾರೆ.

ಸಮ್ಮೇಳನದಲ್ಲಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ ಎಂದು ಹೇಳಿದ್ದಾರೆ. ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಸಮುದಾಯದ ಎಲ್ಲ ಒಳಪಂಗಡಗಳು ಒಗ್ಗೂಡಿ ಸಂಘಟಿತರಾಗಬೇಕು ಎಂದು ಕರೆ ನೀಡಿದ್ದಾರೆ. ರಂಭಾಪುರಿ ಪೀಠದ ಜಗದ್ಗುರು ಸೇರಿದಂತೆ ವಿವಿಧ ಮಠಗಳ ಶಿವಾಚಾರ್ಯರು, ಸಚಿವರು ಹಾಗೂ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಎಲ್ಲ ಧರ್ಮಗಳಲ್ಲೂ ಅಡಗಿರುವ ಪರಮಸತ್ಯ ಒಂದೇ. ಧರ್ಮಗಳು ಹಲವು, ತತ್ತ್ವ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸ್ವಧರ್ಮ ಪಾಲನೆಯ ಜೊತೆಗೆ ಪರಧರ್ಮ ಸಹಿಷ್ಣುತೆಯನ್ನೂ ಬೆಳೆಸಿಕೊಂಡು, ಭಕ್ತಿ, ಸೇವೆ, ಸಹನೆ ಮತ್ತು ಕಾಯಕದ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಕರೆ ನೀಡಿದ್ದಾರೆ.

*ಸಮಯ ಪ್ರಜ್ಞೆ ಇಲ್ವಾ ಎಂದು ಗರಂ ಆದ ಶಾಸಕ: ಮನೆಯಲ್ಲಿ ಅಮ್ಮ ಇರ್ಲಿಲ್ಲ ಹಾಗಾಗಿ ಬರೋದು ತಡವಾಯ್ತು ಎಂದ ಸಚಿವ ಯತೀಂದ್ರ* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button