ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಾಲ್ಕಿ ಜಾಗಾದಲ್ಲಿ ಬೆಳೆದ ಸಾಗವಾನಿ ಕಟಾವು ಮಾಡಲು ಪಿಟಿ ಶೀಟ್ ನಲ್ಲಿ ದಾಖಲಿಸಲು ಲಂಚ ಪಡೆದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ನ್ಯಾಯಾಲಯ ಒಟ್ಟೂ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2015ರಲ್ಲಿ ಹಿರೇಮುನವಳ್ಳಿಯ ಬಾಹುಬಲಿ ಅರ್ಜುನ ಪಾಟೀಲ ಎನ್ನುವವರು ನೀಡಿದ ದೂರಿನನ್ವಯ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಪ್ರಥಮ ದರ್ಜೆ ಸಹಾಯಕ ಸಂತೋಷ ಕುಮಾರ ಭಗವಂತ ಕಾಂಬಳೆ ಎನ್ನುವಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಬಾಹುಬಲಿ 1.18 ಗುಂಟೆ ಜಾಗದಲ್ಲಿ ಬೆಳೆದ ಸಾಗವಾನಿ ಕಟಾವು ಮಾಡುವ ಸಂಬಂಧ ಖಾನಾಪುರ ತಹಸಿಲ್ದಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅದು ಅಲ್ಲಿಂದ ಎಸಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದಿತ್ತು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿಷಯ ನಿರ್ವಾಹಕರನ್ನು ಭೇಟಿಯಾಗಿ ವಿಚಾರಿಸಿದಾಗ ಅವರು ಸಾಗವಾನಿ ಗಿಡ ಕಟಾವ ಮಾಡಲು ಅನುಮತಿಗಾಗಿ ಶಿಫಾರಸ್ಸು ಮಾಡಲು 4 ಸಾವಿರ ರೂ. ಲಂಚ ಕೇಳಿದ್ದರು. ಇದರಲ್ಲಿ 3 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿತನನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಶಿಧರ ಶೆಟ್ಟಿ ಸಂತೋಷಕುಮಾರ ಭಗವಂತ ಕಾಂಬಳೆ ತಪ್ಪಿತಸ್ಥರೆಂದು ತೀರ್ಪು ನೀಡಿ ಕಲಂ 7, ಲಂಚ ಪ್ರತಿಬಂಧಕ ಕಾಯ್ದೆ 1988 ನೇದ್ದರಲ್ಲಿ ತಲಾ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕಲಂ 13(1) (ಡಿ) ಸಹ ಕಲಂ 13 (2) ಲಂಚ ಪ್ರತಿಬಂಧಕ ಕಾಯ್ದೆ 1988 ನೇದ್ದರಲ್ಲಿ ಪುನಃ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 8 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿದ್ದಾರೆ.
ಅಂದಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಿ.ಆರ್.ಪಾಟೀಲ್ ಪ್ರಕರಣ ದಾಖಲಿಸಿಕೊಂಡಿದ್ದು, ತದನಂತರ ಆರ್.ಆರ್.ಅಂಬಡಗಟ್ಟಿ, ಪೊಲೀಸ್ ಉಪಾಧೀಕ್ಷಕರು ಪ್ರಕರಣದ ತನಿಖೆ ಕೈಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ಕೆ.ಆರ್ ಎಕ್ಸಂಬಿ ಹಾಗೂ ಪ್ರವೀಣ ಅಗಸಗಿ ವಾದ ಮಂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ