ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು: ಭಾರತದ ಅತೀ ಹಳೆಯ ಮತ್ತು ಅತೀ ದೊಡ್ಡ ಉದ್ದಿಮೆಗಳ ಸಂಸ್ಥೆ ಟಾಟಾ ಹೆಸರು ಕೇಳದವರು ವಿಶ್ವದಲ್ಲೇ ಯಾರೂ ಇರಲಿಕ್ಕಿಲ್ಲ. ಟಾಟಾ ಮೋಟರ್ಸ್ ಸೇರಿದಂತೆ ಹಲವು ಬಗೆಯ ಉದ್ದಿಮೆಗಳಲ್ಲಿ ತೊಡಿಗಿಸಿಕೊಂಡು ಅತ್ಯಂತ ಯಶಸ್ವಿ ಕಂಡ ಸಂಸ್ಥೆ ಎಂಬುದಷ್ಟೇ ಅಲ್ಲ, ದೇಶಪ್ರೇಮ, ಸ್ವಾಭಿಮಾನದ ವಿಷಯ ಬಂದಾಗಲೂ ಟಾಟಾ ಮುಂಚೂಣಿಯಲ್ಲಿ ನಿಂತಿದೆ.
ಟಾಟಾ ಸಂಸ್ಥೆಗೆ 1991ರಲ್ಲಿ ರತನ್ ಟಾಟಾ ಅಧ್ಯಕ್ಷರಾದರು. ಅಲ್ಲಿಯವರೆಗೆ ಸರಕು ಸಾಗಣೆ ವಾಹನಗಳಲ್ಲಿ ಮುಂಚೂಣಿಯಲ್ಲಿದ್ದ ಟಾಟಾ ಮೋಟರ್ಸ್ ಅನ್ನು ಪ್ರಯಾಣಿಕರ ಕಾರ್ ತಯಾರಿಕೆಯಲ್ಲೂ ಮುಂಚೂಣಿಗೆ ತರುವ ಉದ್ದೇಶವನ್ನು ರತನ್ ಟಾಟಾ ಹೊಂದಿದ್ದರು.
1998 ರಲ್ಲಿ ಟಾಟಾ ಮೋಟರ್ಸ್ ಮಹತ್ವಾಕಾಂಕ್ಷೆಯ ಟಾಟಾ ಇಂಡಿಕಾ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆ ಸಂದರ್ಭದಲ್ಲಿ ಅಂಬಾಸೆಡಾರ್ ಕಾರುಗಳು ಜನಪ್ರಿಯತೆ ಕಳೆದುಕೊಳ್ಳುವ ಹಂತದಲ್ಲಿದ್ದು, ಮಾರುತಿ ಕಾರುಗಳು ಹೆಚ್ಚು ಜನಪ್ರಿಯಗೊಳ್ಳುತ್ತಿದ್ದವು. ಈ ಎರಡೂ ಕಾರಿನ ಉತ್ತಮ ಗುಣಗಳನ್ನು ಟಾಟಾ ಇಂಡಿಕಾ ಕಾರಿನಲ್ಲಿ ಅಳವಡಿಸುವ ಗುರಿಯನ್ನು ರತನ್ ಟಾಟಾ ಹೊಂದಿದ್ದರು.
ಹೊರಗಿನ ಗಾತ್ರದಲ್ಲಿ ಮಾರುತಿ ಕಾರಿನಷ್ಟು ಕಿರಿದಾಗಿ ಮತ್ತು ಒಳಭಾಗದಲ್ಲಿ ಅಂಬಾಸೆಡಾರ್ ಕಾರಿನಷ್ಟು ವಿಶಾಲವಾಗಿ ಫೀಲ್ ಆಗುವ ವಿಶಿಷ್ಟ ಕಾರ್ ಎಂಬ ಹೆಗ್ಗಳಿಕೆ ಹೊತ್ತೇ ಟಾಟಾ ಇಂಡಿಕಾ ಮಾರುಕಟ್ಟೆಗೆ ಬಿಡುಗಡೆಗೊಂಡಿತು.
ಆದರೆ ಟಾಟಾ ಇಂಡಿಕಾ ನಿರೀಕ್ಷೆಯಷ್ಟು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲೇ ಇಲ್ಲ. ಇದರಿಂದ ಟಾಟಾ ಕಂಪನಿಗೆ ಸಾಕಷ್ಟು ನಷ್ಟವೂ ಆಯಿತು. ಹಾಗಾಗಿ ರತನ್ ಟಾಟಾ ಕಾರ್ ವಿಭಾಗವನ್ನು ಮಾರಲು ನಿರ್ಧರಿಸಿದರು.
ಇತ್ತ ಫೋರ್ಡ್ ಕಂಪನಿ ಟಾಟಾ ಕಾರ್ ವಿಭಾಗವನ್ನು ಖರೀದಿಸಲು ಆಸಕ್ತಿ ತಳೆಯಿತು. ಅಮೇರಿಕದಲ್ಲಿರುವ ಫೋರ್ಡ್ ಕಂಪನಿಯ ಕಚೇರಿಗೆ ರತನ್ ಟಾಟಾ ಮತ್ತು ತಂಡವನ್ನು ಆಹ್ವಾನಿಸಲಾಯಿತು. ರತನ್ ಟಾಟಾ ತಮ್ಮ ತಂಡದೊಂದಿಗೆ ಅಮೇರಿಕದ ಡೆಟ್ರಾಯ್ಟ್ನಲ್ಲಿರುವ ಫೋರ್ಡ್ ಕಂಪನಿಯ ಕಚೇರಿಗೆ ತೆರಳಿದರು.
ಪ್ರಯಾಣಿಕರ ಕಾರ್ ವಿಭಾಗದ ಮಾರಾಟ ಕುರಿತು ಮಾತುಕತೆಗಳು ಪ್ರಾರಂಭಗೊಂಡವು. ಸುಧೀರ್ಘ ಮಾತುಕತೆಯ ಬಳಿಕ ಟಾಟಾ ಪ್ರಯಾಣಿಕರ ಕಾರ್ ವಿಭಾಗವನ್ನು ಫೋರ್ಡ್ಗೆ ಮಾರಾಟ ಮಾಡುವ ಮಾತುಕತೆ ಕೊನೇಯ ಹಂತ ತಲುಪಿತ್ತು. ಆದರೆ ಫೋರ್ಡ್ ಕಂಪನಿಯ ಮಾಲೀಕ ಬಿಲ್ ಫೋರ್ಡ್ ಅವರ ಮಾತೊಂದು ರತನ್ ಟಾಟಾ ಅವರ ಆತ್ಮಾಭಿಮಾನವನ್ನೇ ಕೆಣಕಿತ್ತು.
ರತನ್ ಟಾಟಾಗೆ ಬಿಲ್ ಫೋರ್ಡ್, ನಿಮ್ಮದು ಪ್ರಯಾಣಿಕರ ಕಾರ್ ತಯಾರಿಸುವಷ್ಟು ಸಶಕ್ತ ಕಂಪನಿಯಲ್ಲ ಎಂಬ ಅರ್ಥದಲ್ಲಿ ಮಾತಾಡಿದ್ದರು. ಇದನ್ನು ರತನ್ ಟಾಟಾಗೆ ಸಹಿಸಲು ಸಾಧ್ಯವಾಗಲಿಲ್ಲ. ಆ ಕ್ಷಣದಲ್ಲೇ ಅವರು ಟಾಟಾ ಕಾರ್ ವಿಭಾಗವನ್ನು ಮಾರಾಟ ಮಾಡದಿರಲು ನಿರ್ಧರಿಸಿದರು. ಮಾತುಕತೆ ಮುರಿದು ಬಿತ್ತು.
ರತನ್ ಟಾಟಾ ಅವರ ನೇತೃತ್ವದಲ್ಲಿ ಟಾಟಾ ಕಾರ್ ಕಂಪನಿ ಹೆಚ್ಚು ಗಮನ ಹರಿಸಿ ಉತ್ಪಾದನೆ ಕೈಗೊಂಡ ಪರಿಣಾಮ ಟಾಟಾ ಕಾರ್ ಕಂಪನಿ ಯಶಸ್ಸಿನ ಹಾದಿಗೆ ಮರಳಿತು.
ಆದರೆ ಫೋರ್ಡ್ ಕಂಪನಿಯ ದುರಹಂಕಾರಕ್ಕೆ ಕಾಲವೇ ತಕ್ಕ ಪಾಟ ಕಲಿಸಿತು. ಮುಂದೆ ಭಾರತದಲ್ಲಿ ಫೋರ್ಡ್ ಕಂಪನಿಯ ಕಾರುಗಳು ಜನಪ್ರಿಯತೆ ಕಳೆದುಕೊಂಡು ಮಾರುಕಟ್ಟೆ ನೆಲಕಚ್ಚಿತು. ಫೋರ್ಡ್ ತನ್ನ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರುಗಳ ಬ್ರ್ಯಾಂಡನ್ನು ಮಾರಲು ನಿರ್ಧರಿಸಿತು. 1998 ರಲ್ಲಿ ರತನ್ ಟಾಟಾರನ್ನು ಅವಮಾನಿಸಿದ್ದ ಬಿಲ್ ಫೋರ್ಡ್ ಮುಂದೆ ಹತ್ತೇ ವರ್ಷದಲ್ಲಿ ( 2008 ರ ವೇಳೆಗೆ ) ರತನ್ ಟಾಟಾರನ್ನು ಹುಡುಕಿಕೊಂಡು ಮುಂಬೈಗೆ ಬರುವಂತಾಯಿತು.
ಈ ಎರಡೂ ಬ್ರ್ಯಾಂಡ್ಗಳನ್ನು ಟಾಟಾ ಕಂಪನಿ ಖರೀದಿಸಿ ಯಶಸ್ಸಿನ ದಾರಿಗೆ ತಂದರು. ಆದರೆ ಬಿಲ್ ಫೋರ್ಡ್ ಮಾಡಿದಂತೆ ರತನ್ ಟಾಟಾ ಫೋರ್ಡ್ರನ್ನು ಅವಮಾನ ಮಾಡಲಿಲ್ಲ. ಗೌರವದಿಂದ ವ್ಯವಹಾರ ನಡೆಸಿ ಹೃದಯ ವೈಶಾಲ್ಯತೆ ಮೆರೆದರು. ಇಂಥಹ ನೂರಾರು ಕಾರಣಗಳಿಂದ ರತನ್ ಟಾಟಾ ದೊಡ್ಡ ವ್ಯಕ್ತಿಯಾಗಿ ನಿಲ್ಲುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ