Kannada NewsKarnataka NewsLatest

‘ಮಹಾ’ತಿರುಮಂತ್ರ ಪ್ರಯೋಗಿಸಲು ಮುಖ್ಯಮಂತ್ರಿಗೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸಲಹೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಡಿ ವಿವಾದ ಮುಂದಿಟ್ಟುಕೊಂಡು ಬರುವ ಡಿಸೆಂಬರ್ 3ರಂದು ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಇಬ್ಬರು ಹಿರಿಯ ಸಚಿವರನ್ನು ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂ ದಕ್ಷಿಣ ಸೋಲಾಪುರ ಪ್ರದೇಶಗಳಿಗೆ ಕಳುಹಿಸುವಂತೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದೆ.

ಈ ಕುರಿತು ಸಂಘಟನೆಯ ಅಧ್ಯಕ್ಷ ಅಶೋಕ ಚಂದರಗಿಯವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವು ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗಡಿ ಭಾಗದಲ್ಲಿ ಸೌಹಾರ್ದ ವಾತಾವರಣವನ್ನು ಹದಗೆಡಿಸಲು ಎಲ್ಲ ಪ್ರಯತ್ನಗಳನ್ನು ಮಹಾರಾಷ್ಟ್ರ ಬೆಂಬಲಿತ ಶಕ್ತಿಗಳು ನಡೆಸುತ್ತಿವೆ. ಇದರ ಭಾಗವಾಗಿ ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ ದೇಸಾಯಿ ಅವರು ಡಿಸೆಂಬರ್ 3 (ಶನಿವಾರ) ರಂದು ಬೆಳಗಾವಿಗೆ ಬರಲಿದ್ದು ಇಲ್ಲಿಯ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಯ ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ. ಇಂತಹ ವಾತಾವರಣದಲ್ಲಿ ಸಚಿವದ್ವಯರು ಬೆಳಗಾವಿಗೆ ಆಗಮಿಸುತ್ತಿರುವುದು ಗಂಭೀರ ವಿಷಯವಾಗಿದೆ.

ಮಹಾರಾಷ್ಟ್ರದ ಅಚ್ಚ ಕನ್ನಡ ಪ್ರದೇಶಗಳಾದ ಜತ್ತ, ಅಕ್ಕಲಕೋಟ, ದಕ್ಷಿಣ ಸೋಲಾಪುರ ಮತ್ತು ಪಂಢರಪುರ ಕನ್ನಡಿಗರು ಅಲ್ಲಿನ ಸರಕಾರದ ವಿರುದ್ಧ ಕಹಳೆ ಊದಿದ್ದು ಕರ್ನಾಟಕಕ್ಕೆ ಸೇರುವ ತಮ್ಮ ಪ್ರಬಲವಾದ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಕರ್ನಾಟಕ ಸರಕಾರ ಎಲ್ಲ ರೀತಿಯ ಬೆಂಬಲ ನೀಡಬೇಕು. ನೈತಿಕ ಸ್ಥೈರ್ಯ ತುಂಬಬೇಕು.

ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ಇಬ್ಬರು ಹಿರಿಯ ಸಚಿವರನ್ನು ಆ ಪ್ರದೇಶಗಳ ಕನ್ನಡಿಗರ ಭೇಟಿ ಹಾಗೂ ಚರ್ಚೆಗಾಗಿ ಕಳುಹಿಸಬೇಕು. ಇಂತಹ ಕ್ರಮ ಮಾತ್ರ ಮಹಾರಾಷ್ಟ್ರಕ್ಕೆ ತಕ್ಕ ಉತ್ತರವಾದೀತು ಎಂದು ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಳ ಅಧಿವೇಶನದ ಕಾಲಕ್ಕೆ ಕಳೆದ ವರ್ಷದಂತೆ ಭಾಷಾ ಸೌಹಾರ್ದವನ್ನು ಹದಗೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಮುಖ್ಯಮಂತ್ರಿಗಳು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ; ಕರ್ನಾಟಕಕ್ಕೆ ಸೇರಿಸಿ; ಜತ್ ತಾಲೂಕು ಕನ್ನಡ ಸಮಿತಿ ಮನವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button