*ದೀಪಾವಳಿಗೆ ಸರ್ಕಾರದ ಬಂಪರ್ ಗಿಫ್ಟ್*: *100 ರೂಪಾಯಿಗೆ 10 ಬಗೆಯ ತರಕಾರಿ!*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇವಲ 100 ರೂಪಾಯಿಗೆ 10 ಬಗೆಯ ಅಗತ್ಯ ತರಕಾರಿಗಳನ್ನು ಒಳಗೊಂಡ ವಿಶೇಷ ಕಿಟ್ ವಿತರಿಸಲು ಮುಂದಾಗಿದೆ. ಇದರಿಂದ ಜನ ನೆಮ್ಮದಿಯಾಗಿ ಹಬ್ಬ ಆಚರಿಸಬಹುದಾಗಿದೆ.
ಅಂದ್ಹಾಗೆ ಈ ಯೋಜನೆ ಕೊಡ್ತಿರೋದು ತಮಿಳುನಾಡು ಸರ್ಕಾರ. ‘ವೆಟ್ರಿ ವಿಶೇಷ ತರಕಾರಿ ಕಿಟ್’ ಯೋಜನೆಯಡಿ ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ತರಕಾರಿಗಳನ್ನು ನೀಡಲಾಗುತ್ತಿದೆ. ಈ ಮೂಲಕ ಜನ ನೆಮ್ಮದಿಯಾಗಿ ಹಬ್ಬ ಆಚರಿಸಲು ಅವಕಾಶ ನೀಡಲಾಗುತ್ತಿದೆ.
ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರಿಕೆಯಾಗುವುದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ. ಚೆನ್ನೈನ ಪೂಂಗಾ ನಗರ ಸಹಕಾರಿ ಸಗಟು ಮಳಿಗೆಯಲ್ಲಿ ಸಹಕಾರ ಸಚಿವ ವಿ. ಗಾಂಧಿರಾಜ್ ಯೋಜನೆಗೆ ಚಾಲನೆ ನೀಡಿದ್ದು, ಮೊದಲ ಹಂತದ ತರಕಾರಿ ಕಿಟ್ಗಳ ವಿತರಣೆಯೂ ಆರಂಭವಾಗಿದೆ.
ನವೆಂಬರ್ 5ರಿಂದ 7ರವರೆಗೆ ಮೂರು ದಿನಗಳ ಕಾಲ ಈ ವಿಶೇಷ ಮಾರಾಟ ನಡೆಯಲಿದೆ. ಚೆನ್ನೈನಲ್ಲಿ ಆಯ್ಕೆ ಮಾಡಲಾದ 218 ಸಹಕಾರಿ ಮಾರಾಟ ಮಳಿಗೆಗಳಲ್ಲಿ ತರಕಾರಿ ಕಿಟ್ಗಳು ಲಭ್ಯವಾಗಲಿವೆ. ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಾಲ್ಕು ಸಂಚಾರಿ ತರಕಾರಿ ಮಾರಾಟ ವಾಹನಗಳನ್ನೂ ನಿಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು, 100 ರೂಪಾಯಿಯ ಒಂದು ಕಿಟ್ನಲ್ಲಿ ಸುಮಾರು 2.55ರಿಂದ 2.60 ಕೆ.ಜಿ.ವರೆಗೆ ತರಕಾರಿಗಳು ಸಿಗಲಿವೆ. ಈರುಳ್ಳಿ ಮತ್ತು ಟೊಮೆಟೊ ತಲಾ 500 ಗ್ರಾಂ, ಬದನೆಕಾಯಿ ಮತ್ತು ಆಲೂಗಡ್ಡೆ ತಲಾ 250 ಗ್ರಾಂ, ಕ್ಯಾರೆಟ್ ಮತ್ತು ಬೀನ್ಸ್ ತಲಾ 200 ಗ್ರಾಂ ಇರಲಿದೆ.
ಇದರ ಜೊತೆಗೆ 100 ಗ್ರಾಂ ಹಸಿ ಮೆಣಸಿನಕಾಯಿ, 100 ಗ್ರಾಂ ನಿಂಬೆಹಣ್ಣು, 50 ಗ್ರಾಂ ಶುಂಠಿ ಹಾಗೂ 400ರಿಂದ 450 ಗ್ರಾಂ ತೂಕದ ಒಂದು ತೆಂಗಿನಕಾಯಿ ಕಿಟ್ನಲ್ಲಿ ಇರಲಿದೆ.
ಹಬ್ಬದ ಸಮಯದಲ್ಲಿ ಮಾರುಕಟ್ಟೆ ಬೆಲೆ ಏರಿಳಿತದಿಂದ ಜನರಿಗೆ ಹೊರೆಯಾಗದಂತೆ ಕಡಿಮೆ ದರದಲ್ಲಿ ತಾಜಾ ತರಕಾರಿಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಒಟ್ಟಾರೆ, ದೀಪಾವಳಿಯ ಖರೀದಿಯ ನಡುವೆ ಕುಟುಂಬಗಳ ಅಡುಗೆ ಮನೆಯ ಖರ್ಚಿಗೆ ಸ್ವಲ್ಪಮಟ್ಟಿನ ನೆರವು ನೀಡಲು ತಮಿಳುನಾಡು ಸರ್ಕಾರ ಈ ಕ್ರಮ ಕೈಗೊಂಡಿದೆ.




