ರವಿ ಕರಣಂ.
ಬೆಳಗಾವಿ ಮತ್ತು ಸುತ್ತ ಮುತ್ತಲ ಮಂದಿಗೆ ಹಂಡಿ ಭಡಂಗನಾಥ್ ಜೀ ಗಿರಿಯು ಹೊಸತು ಮತ್ತು ವಿಶೇಷವೆನಿಸಲ್ಲ. ಕಾರಣ ಅವರು ಮೇಲಿಂದ ಮೇಲೆ, ನಾಥ ಪರಂಪರೆಯ ಈ ಶಕ್ತಿ ಸ್ಥಳಕ್ಕೆ ಬರುತ್ತಲೇ ಇರುತ್ತಾರೆ. ಇದೊಂದು ನಂಬಿಕೆಯ, ಧಾರ್ಮಿಕ ಶ್ರದ್ಧಾ ಕೇಂದ್ರ. ಈ ಗಿರಿಯ ಮೇಲೆ ನಿಂತು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದಾಗ, ಹಸಿರ ಸ್ವರ್ಗದ ಅನುಭವವನ್ನು ನೀವು, ನಿಮ್ಮ ಇಡೀ ಜೀವ ಮಾನದಲ್ಲೆಂದು ಮರೆಯಲು ಅಸಾಧ್ಯ. ಅಷ್ಟರ ಮಟ್ಟಿಗೆ ರಮ್ಯ ಮನೋಹರ ಸ್ಥಳವದು. ಸಹ್ಯಾದ್ರಿ ಪರ್ವತ ಸಾಲನ್ನು ಒಮ್ಮೆ ಅನುಭವಿಸಬೇಕು. ನಿಮ್ಮ ಕಣ್ಣ ದೃಷ್ಟಿ ಎಷ್ಟು ದೂರದ ತನಕ ಹೋಗಬಲ್ಲದೋ, ಅದನ್ನು ದಾಟಿ ಬರೀ ಹಸಿರೇ ಹಸಿರು. ನಿಮಗೆಲ್ಲೂ ಒಂಚೂರು ಬಯಲು ಭೂಮಿ ಕಾಣಲು ಸಾಧ್ಯವಿಲ್ಲ. ಜೀವಮಾನದಲ್ಲಿ ಒಮ್ಮೆ ನೋಡಲೇಬೇಕು.
ಯಾಕಾಗಿ ಇಲ್ಲಿಗೆ ಪಯಣ ?
ಬಹಳಷ್ಟು ಜನ ಇಲ್ಲಿಗೆ ಬರುತ್ತಾರೆ. ಕಾರಣ, ತಮ್ಮ ಜೀವನದಲ್ಲಿನ ಕಷ್ಟ ಕೋಟಲೆಗಳಿಗೆ ಪರಿಹಾರ ದೊರಕುವುದೆಂಬ ಅಗಾಧ ನಂಬಿಕೆ.
ಇಲ್ಲಿಗೆ ಬಂದು ನಾಥ ಪರಂಪರೆಯ ಗುರುಗಳಿದ್ದಾಗ, ಅವರ ಮುಂದೆ ತಮ್ಮ ಕಷ್ಟಗಳಿಗೆ ಪರಿಹಾರದ ದಾರಿ, ಹಾಗೂ ಈಡೇರಿಕೆಯ, ಫಲಿತಾಂಶದ ಬಗ್ಗೆ ತಮ್ಮೆಲ್ಲ ಅನುಮಾನಗಳಿಗೆ ಉತ್ತರ ಕೇಳಿಕೊಂಡು ಹೋಗುತ್ತಾರೆ. ಹಾಗಾಗಿ ದೂರ ದೂರದ ಪ್ರದೇಶಗಳಿಂದ ಇಲ್ಲಿಗೆ ಬರುವವರ ಭಕ್ತರ ಸಂಖ್ಯೆಯೊಂದಿದೆ. ಬೆಳಗಾವಿ ಅಲ್ಲದೇ ಕೊಲ್ಲಾಪುರ, ಕರಾಡ, ಸಾತಾರ, ಪುಣೆ, ಮೀರಜ್, ಸಾಂಗ್ಲಿಯಿಂದಲೂ ಬರುವವರಿದ್ದಾರೆ.
ತಲುಪುವುದು ಹೇಗೆ ?
ಇದಕ್ಕೆ ತಲುಪಬೇಕೆಂದರೆ ಕಡ್ಡಾಯವಾಗಿ ಕುಂಬಾರ್ಡ ಗ್ರಾಮದ ಮೂಲಕವೇ ಸಾಗಬೇಕು. ಕುಂಬಾರ್ಡ ಗ್ರಾಮವು, ಧಾರವಾಡ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತದೆ. ಕುಂಬಾರ್ಡ ದಿಂದ ಎಡಗಡೆಗೆ ಹೊರಳಿ, ಕಾಡಿನ ನಡುವಿನ ಹಾದಿಗುಂಟ ನಾಲ್ಕು ಕಿಮೀ ಸಾಗಬೇಕು. ಅರ್ಧ ರಸ್ತೆ ಕಲ್ಲು ಮಣ್ಣಿನಿಂದ ಮತ್ತೆ ಅರ್ಧ ರಸ್ತೆ ಸಾಧಾರಣ ಡಾಂಬರು ರಸ್ತೆಯಿದೆ. ಮಳೆಗಾಲದಲ್ಲಿ ವಿಪರೀತ ಮಳೆ ಬೀಳುವ ಪರಿಣಾಮ ಪ್ರಯಾಣ ಕಷ್ಟವಾಗುತ್ತದೆ.
ಅಲ್ಲಲ್ಲಿ ಬೆಟ್ಟ ಹತ್ತುವಾಗ ಧಾರಾಕಾರ ನೀರು ಹರಿದು ಬರುತ್ತಿರುತ್ತದೆ. ಕತ್ತಲಲ್ಲಿ ನಡೆದು ಹೋಗುವುದು ಅಸಾಧ್ಯ ಮಾತು. ಕಾಡು ಪ್ರಾಣಿಗಳು ಇದ್ದೇ ಇರುತ್ತವೆ. ತುಸು ಅಪಾಯಕಾರಿ. ಗುಂಪುಗಳಲ್ಲಿ ಹೋಗಿ ಆನಂದ ಅನುಭವಿಸುವುದೊಳಿತು. ಅದಕ್ಕಾಗಿ ಶಾಲಾ ಮಕ್ಕಳನ್ನು ಶಿಕ್ಷಕರು ಬಸ್ ಗಳಲ್ಲಿ ಕರೆದುಕೊಂಡು ಹೋಗುತ್ತಿರುತ್ತಾರೆ. ನೀವೂ ಒಮ್ಮೆ ಹೋಗಿ ಬನ್ನಿ.
ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ: ಡಿ.8ರಂದು ಸುಪ್ರಿಂನಲ್ಲಿ ವಿಚಾರಣೆ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ