ಲೇಖನ: ರವಿ ಕರಣಂ
ಇದನ್ನು ದೊಡ್ಡ ರೀತಿಯಲ್ಲಿ ಪ್ರತಿಭಟಿಸಬೇಕು. ಕೃಷಿ ಭೂಮಿಯನ್ನು ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಳ್ಳಲು ಹವಣಿಸುತ್ತಿರುವುದು, ರೈತರಿಗಾಗಬಹುದಾದ ಅನ್ಯಾಯ. ಅಷ್ಟೇ ಅಲ್ಲ. ಇದು ದೇಶಕ್ಕುಂಟು ಮಾಡುವ ಭಾರೀ ನಷ್ಟ. ಕೃಷಿ ಭೂಮಿ ಯಾವುದೇ ಕಾರಣಕ್ಕೂ ವಾಣಿಜ್ಯ ಹಾಗೂ ಲಾಭದಾಯಕ ಚಟುವಟಿಕೆಗಳಿಗಾಗಿ ನಾಶ ಮಾಡುವುದು ನಾಗರಿಕ ಸತ್ಕಾರ್ಯ ಅಲ್ಲವೇ ಅಲ್ಲ. ವಿಚಾರ ಇಷ್ಟು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಫಲವತ್ತಾದ ಮಣ್ಣು ಹೊಂದಿದ, ಕೃಷಿಗೆ ಯೋಗ್ಯವಾದ ಭೂಮಿ. ಈ ಭಾಗದ ರೈತರು ಹಲವು ರೀತಿಯ ಬೆಳೆಗಳನ್ನು ಬೆಳೆದು,ನಾಡಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹ ಫಲವತ್ತಾದ ಎರೆಡು ಸಾವಿರ ಎಕರೆ ಭೂಮಿಯನ್ನು, ವಿಮಾನ ನಿಲ್ದಾಣ ಮಾಡಲು ಹೊರಟಿರುವುದು ಸಮ್ಮತವೇ? ವಿದ್ಯಾವಂತರು,ಸುಶಿಕ್ಷಿತರು, ದೇಶ ಪ್ರೇಮಿಗಳು, ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳು ತೀವ್ರವಾಗಿ ಪ್ರತಿ ಭಟಿಸಬೇಕು. ಕಾರಣ, ಭೂಮಿ ಬೆಳೆ ಕೊಡುತ್ತದೆ. ಹೊಟ್ಟೆಗೆ ಅನ್ನ ನೀಡುತ್ತದೆ. ಇವರು ಮಾಡ ಹೊರಟ ವಿಮಾನ ನಿಲ್ದಾಣ ಯಾರ ಹೊಟ್ಟೆ ತುಂಬಿಸುತ್ತದೆ? ಸರ್ಕಾರದ ಬೊಕ್ಕಸಕ್ಕೆ!ಹಾಗೆಂದು ರೈತರ ಹೊಟ್ಟೆಯ ಮೇಲೆ ಹೊಡೆಯುವುದು ಸರಕಾರಗಳ ಶುದ್ದ ಬದುಕಿನ ಸಂಸ್ಕೃತಿಯೇ ?
ಕೃಷಿ ಭೂಮಿಯು ಪ್ರಾಥಮಿಕ ವಲಯದಲ್ಲಿ ಬರುವ ಅಂಶ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರೋತ್ಪನ್ನಕ್ಕೆ ಭೂಮಿ ಅತೀ ಮಹತ್ವದ್ದು. ಅಂತಹ ಭೂಮಿಯನ್ನು ಐಷಾರಾಮಿ ಬದುಕಿಗಾಗಿ ಬಲಿ ಕೊಡುತ್ತಿರುವುದು ನ್ಯಾಯವೇ ? ಸರ್ಕಾರಕ್ಕೆ ತಿಳಿವಳಿಕೆ ಇಲ್ಲವೇ ? ಬಾದಾಮಿ, ಐಹೊಳೆ, ಪಟ್ಟದಕಲ್ಲು, ಪಂಚಕೂಟ, ಕೂಡಲ ಸಂಗಮ, ವಿಜಯಪುರ ಇಂತಹ ಐತಿಹಾಸಿಕ ಸ್ಶಳಗಳಿಗೆ ವಿದೇಶಿಗರನ್ನು ಕರೆತರಲು, ಪ್ರವಾಸೋದ್ಯಮವನ್ನು ಬೆಳೆಸಲು ಸರ್ಕಾರದ ಬರಡು ನೆಲವನ್ನು ಬಳಸಬಹುದಲ್ಲವೇ? ಅಷ್ಟಕ್ಕೂ ವಿಮಾನಯಾನ ಕೈಗೊಳ್ಳುವವರು ಸ್ಥಿತಿವಂತರು ಮಾತ್ರ. ಅವರ ಸಂಖ್ಯೆ ದೇಶದಲ್ಲಿ ಎಷ್ಟು? ಬಡ ಮತ್ತು ಮಧ್ಯಮ ವರ್ಗದವರು ಎಷ್ಟು? ಬಡತನ ರೇಖೆಗಿಂತ ಕೆಳಗಿರುವವರು, ಬಡ, ಹಾಗೂ ಮಧ್ಯಮ ವರ್ಗದವರು,ಹೆಚ್ಚಾಗಿ ರೈಲು ಪ್ರಯಾಣ ಕೈಗೊಳ್ಳಲು ಇಚ್ಚಿಸುತ್ತಾರೆ. ಕಾರಣ ಖರ್ಚು ಕಡಿಮೆ.
ಇಲ್ಲಿ ಯೋಚಿಸಿ ನೋಡಿ..ರೈಲ್ವೇ ವ್ಯವಸ್ಥೆಯನ್ನು ಮಾಡಿಕೊಡಲೂ ಸಾಧ್ಯವಿಲ್ಲವೆಂದ ಮೇಲೆ ವಿಮಾನ ನಿಲ್ದಾಣದ ಅವಶ್ಯಕತೆ ಇದೆಯೇ ? ಇದು ದೇಶದ ಹಿತ ದೃಷ್ಟಿಯಿಂದ ಮಾರಕ. ಯಾರು ಯಾರು ಇದರ ಹಿಂದೆ ಇದ್ದು, ಫಲವತ್ತಾದ ಭೂಮಿಯನ್ನು ನಾಶಪಡಿಸಲೆತ್ನಿಸುತ್ತಿದ್ದಾರೆಯೋ ಅಂತಹವರಿಗೆ ಉಚ್ಛ / ಸರ್ವೋಚ್ಛ ನ್ಯಾಯಾಲಯಗಳು ನೇರವಾಗಿ ಎಚ್ಚರಿಕೆ ಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳೋಣ. ಒಂದು ವೇಳೆ, ಈ ಪ್ರಕ್ರಿಯೆಯನ್ನು ಮುಂದುವರೆಸಿದಲ್ಲಿ, ಮುಂದೆ ಅವರ ಸರ್ಕಾರ ಅಧಿಕಾರಕ್ಕೆ ಬರದಂತೆ ಶಾಶ್ವತವಾಗಿ ತಡೆಗೋಡೆ ಕಟ್ಟಿ ಬಿಡಬೇಕು. ಇಲ್ಲಿ ಜಾತಿ ಮತ ಪಂಥ ಬೇಧಗಳನ್ನು ಬದಿಗಿಟ್ಟು ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಯ ದೃಷ್ಟಿಯಿಂದ ಒಂದಾಗಬೇಕು. ಸಂಘ ಸಂಸ್ಥೆಗಳು, ರಕ್ಷಣಾ ವೇದಿಕೆಗಳು, ಸಮಿತಿಗಳು, ಪರಿಸರ ಪ್ರೇಮಿಗಳು, ಯುವಶಕ್ತಿ ಎಲ್ಲವೂ ಅರ್ಥಮಾಡಿಕೊಂಡು ಕೃಷಿ ಭೂಮಿಯ ರಕ್ಷಣೆಗೆ ಮುಂದಾಗಬೇಕು. ಹಣವಂತರ, ಅಧಿಕಾರಶಾಹಿಗಳ ಮೋಜು ಮಸ್ತಿಗೆ ಕಡಿವಾಣ ಹಾಕಲೇಬೇಕು.
ವಿಮಾನ ನಿಲ್ದಾಣಕ್ಕಾಗಿ ರೈತರಿಂದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬ ವಿಷಯ ಹೊರ ಬಿದ್ದ ಕೂಡಲೇ. ರೈತರು ಕೆಲ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿಗೆ 80 ದಿನಗಳು ಕಳೆದರೂ ತಿರುಗಿ ನೋಡಿಲ್ಲವೆಂದು ಹೇಳಿ ಬಾದಾಮಿಯ ಹಲಕುರ್ಕಿ ಗ್ರಾಮದ ಜನ, ಸಧ್ಯದ ಬಾದಾಮಿ ಶಾಸಕರಾಗಿರುವ ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಎರಡು ದಿನಗಳ ಬಾದಾಮಿ ಪ್ರವಾಸದಲ್ಲಿ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಕಾರಣ ರೈತರ ಪರವಾಗಿ ನಿಲ್ಲದೇ ಮೌನ ವಹಿಸಿರುವುದು. ಅದು ತಪ್ಪೇ. ಜನಪರ ದನಿ ಎತ್ತದ ನಾಯಕ, ನಾಯಕನೇ ? ರೈತರು ವಿಮಾನ ನಿಲ್ದಾಣಕ್ಕಾಗಿ ಫಲವತ್ತಾದ ಕೃಷಿ ಭೂಮಿಯನ್ನು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆಂದೂ, ಈಗಾಗಲೇ ಕೆಐಎಡಿಬಿಯಿಂದ ರೈತರಿಗೆ ನೊಟೀಸ್ ನೀಡಲಾಗಿದೆ ಎಂದೂ ತಿಳಿದು ಬಂದಿದೆ.
ಈ ಹಿಂದೆ ಅರಣ್ಯ ನಾಶದ ಬಗ್ಗೆ ನಾಲ್ಕು ಸಾಲು ಬರೆದಿದ್ದೆ. ಇಂದು ಬೃಹತ್ ಪ್ರಮಾಣದಲ್ಲಿ ಭೂ ಮಾಫಿಯಾ ತಲೆಯೆತ್ತಿದೆ. ಭಯೋತ್ಪಾದನೆ ಎಷ್ಟು ಭೀಕರವೋ ಅದಕ್ಕಿಂತಲೂ ಘನ ಘೋರ ಕೃತ್ಯ ಈ ಭೂ ಕಬಳಿಕೆ. ಇದು ಕೇವಲ ಒಂದು ಭಾಗದ ಕಥೆಯಲ್ಲ. ಇಡೀ ದೇಶಾದ್ಯಂತ ರಾಜಕೀಯ ಧುರೀಣರು, ಅವರ ಪಟಾಲಂ ಗಳು, ಧನಿಕರು ತಮ್ಮ ಕಪ್ಪು ಹಣದ ಲೋಕವನ್ನು ಪರಿಶುದ್ದ ಮಾಡಿಕೊಳ್ಳಲು,ಈ ಭೂಮಿಯ ಮೇಲೆ ಕಣ್ಣು ಹಾಕಿದ್ದಿದೆ. ಅದರ ಮೇಲೆ ಯಾವ ಸರ್ಕಾರಗಳೂ ಯಾವ ಕ್ರಮವನ್ನು ತೆಗೆದುಕೊಳ್ಳದಷ್ಟು ಹೇಡಿತನದಲ್ಲಿವೆ. ಇನ್ನು ಪ್ರತಿಯೊಂದಕ್ಕೂ ನ್ಯಾಯಾಲಯದ ಬಾಗಿಲು ತಟ್ಟುವುದು ಹೇಗೆ ಸಾಧ್ಯ? ಜನಪರ ಹೋರಾಟಕ್ಕೆ ಮುಂದಾಗುವ ವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ, ಅವರನ್ನೇ ತಪ್ಪಿತಸ್ಥರನ್ನಾಗಿಸುವ ವ್ಯವಸ್ಥೆಯಲ್ಲಿ ಹೋರಾಟ ಮಾಡುವವರೂ ಸಹ ಹಿಂದೆ ಸರಿದು ಬಿಡುತ್ತಾರೆ. ತತ್ಪರಿಣಾಮವಾಗಿ ದೇಶ ಹೀನಾಯ ಸ್ಥಿತಿ ತಲುಪಿ ಬಿಡುತ್ತದೆ.
ಅಗಾಧ ಪ್ರಮಾಣದಲ್ಲಿ ನಿಷ್ಪ್ರಯೋಜಕವಾಗಿ ಬಿದ್ದ ಭೂಮಿಯನ್ನು ಹಸಿರುಮಯ ಗೊಳಿಸುವ ಸಾಮರ್ಥ್ಯ ಒಬ್ಬ ನಾಯಕನಿಗೂ ಇಲ್ಲ. ಪ್ರಕೃತಿಯ ಮಹತ್ವ ತಿಳಿಯದ ಅವಿವೇಕಿಗಳ ಕೈಯಲ್ಲಿ ಅಧಿಕಾರ ಕೊಡುವ ಜನರು ಸ್ವಲ್ಪ ಯೋಚಿಸಬೇಕು. ಸ್ವ ಹಿತಾಸಕ್ತಿಯನ್ನು ಬದಿಗಿಟ್ಟು, ಮುಂದಿನ ಪೀಳಿಗೆಗೆ ಕೊಡ ಮಾಡಬಹುದಾದ ಒಳ್ಳೆಯ ಕೆಲಸಗಳಿಗೆ ಬೆಂಬಲ ಕೊಡಬೇಕು. ಈಗಿನ ಕಾಲ ಕೇವಲ ಹಣದ ಮೇಲೆ ನಿಂತಿದೆ. ಮೌಲ್ಯಗಳ ಕಾಲ ಮುಗಿದು ಇನ್ನೇನು ಕೆಲವೇ ವರ್ಷಗಳಲ್ಲಿ ಅನ್ನ ನೀರಿಗಾಗಿ ಯುದ್ದಕ್ಕಿಳಿಯುವ ಸ್ಥಿತಿ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ. ಅದಕ್ಕಾಗಿ ಕೃಷಿಗಾಗಿ ಭೂಮಿಯನ್ನು ಜನಸಂಖ್ಯೆಗನುಗುಣವಾಗಿ, ಇಂತಿಷ್ಟು ಎಂದು ಮೀಸಲಿಡಲೇ ಬೇಕು. ಅದನ್ನು ಮಾರ್ಪಾಡು ಮಾಡುವುದಾಗಲೀ, ಮತ್ತಿತರ ಲಾಭದಾಯಕ ಕೃತ್ಯಗಳಿಗಾಗಿ ಬಳಸಬಾರದೆಂದು ಸರ್ವೋಚ್ಛ ನ್ಯಾಯಾಲಯ ಕಟ್ಟು ನಿಟ್ಟಿನ ಆದೇಶವನ್ನು ಜಾರಿಗೊಳಿಸಬೇಕು. ಹಾಗೊಂದು ವೇಳೆ ಅಂತಹ ಆದೇಶವಿದ್ದೂ, ಅದನ್ನು ಉಲ್ಲಂಘನೆ ಮಾಡಿದ್ದಲ್ಲಿ, ದೇಶದ್ರೋಹದ ಅಡಿಯಲ್ಲಿ ಶಿಕ್ಷಿಸಬೇಕು. ಅಂಡಮಾನ್ ದ್ವೀಪದಲ್ಲಿಡಬೇಕು. ಎಣ್ಣೆ ತೆಗೆಯುವ ಗಾಣಕ್ಕೆ ಅಂಥವರನ್ನೇ ಎತ್ತುಗಳನ್ನಾಗಿಸಬೇಕು.
ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಈಗ ರೈತರ ಪರವಾಗಿ ಪ್ರತಿಯೊಬ್ಬರೂ ಬೀದಿಗಿಳಿದು ಹೋರಾಟ ಮಾಡಲೇಬೇಕು. ಅನ್ನದಾತ ನೆಂದು ಪರಿಗಣಿಸಿದ್ದು ನಿಜವೇ ಆಗಿದ್ದಲ್ಲಿ, ಹಿರಿ ಕಿರಿಯರೆನ್ನದೇ ಕೃಷಿ ಭೂಮಿಯ ಉಳಿವಿಗಾಗಿ ಚಳುವಳಿ ಮಾಡಲೇಬೇಕು. ಮತ್ತು ಚುನಾವಣೆಯಲ್ಲಿ ತಕ್ಕುದಾದ ತೀರ್ಮಾನ ಕೈ ಗೊಂಡು ರೈತರನ್ನು ಉಳಿಸಬೇಕು.
ಗ್ರಾಮೀಣ ಮಟ್ಟಕ್ಕೂ ಸ್ಕೇಟಿಂಗ್ ವಿಸ್ತರಣೆ: ಸಿಎಂ ಬೊಮ್ಮಾಯಿ
https://pragati.taskdun.com/extension-of-skating-to-rural-level-cm-bommai/
*ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕಿಳಿಯಲು ಸಜ್ಜಾದ ಬಿ.ವೈ.ವಿಜಯೇಂದ್ರ?; ವರುಣ ನನ್ನ ಪಂಚಪ್ರಾಣ ಎಂದಿದ್ದೇಕೆ?*
https://pragati.taskdun.com/vidhanasabha-electionsiddaramaiahb-y-vijayendravaruna/
*ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಪಲ್ಟಿ; ಇಬ್ಬರು ವಿದಾರ್ಥಿಗಳು ದುರ್ಮರಣ*
https://pragati.taskdun.com/bus-accidentmaharashtratwo-studetns-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ