ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರಸಕ್ತ ವರ್ಗಾವಣೆ ನೀತಿ ವಿರುದ್ಧ ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಲಾಢ್ಯರ ರಕ್ಷಣೆಗೆ ಶಿಕ್ಷಣ ಇಲಾಖೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಸಾಕಷ್ಟು ಚರ್ಚೆಗೊಳಪಡುತ್ತಿದ್ದು, ಯಾವುದೇ ಇನಫ್ಲುಯೆನ್ಸ್ ಇಲ್ಲದ ಬಡ ಶಿಕ್ಷಕರು ಈಗಿನ ನೀತಿಯಿಂದ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಕಡ್ಡಾಯ ವರ್ಗಾವಣೆಯಲ್ಲಿ ಕೆಲವು ವರ್ಗದವರಿಗೆ ವಿನಾಯಿತಿ ನೀಡಿರುವುದು ಮತ್ತು ಜೀರೋ ವಿದ್ಯಾರ್ಥಿಗಳಿರುವ ಶಾಲೆಯ ಟಿಜಿಟಿಗಳಿಗೆ ಮೊದಲ ಆದ್ಯತೆ ನೀಡುವುದು -ಎರಡೂ ನಿಷ್ಠಾವಂತ ಮತ್ತು ಬಡ ಶಿಕ್ಷಕರಿಗೆ ಅನ್ಯಾಯವೆಸಗುತ್ತಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.
ಟಿಜಿಟಿ ಶಿಕ್ಷಕರು ಪ್ರಾಮಾಣಿಕವಾಗಿ ಮತ್ತು ಉತ್ತಮವಾಗಿ ಪಾಠ ಮಾಡುವಲ್ಲಿ ಮಕ್ಕಳ ಸಂಖ್ಯೆ ಜೀರೋ ಆಗಲು ಸಾಧ್ಯವೇ ಇಲ್ಲ. ಎಲ್ಲಿ ಶಿಕ್ಷಕರು ಸರಿ ಇಲ್ಲವೋ ಅಂತಲ್ಲಿ ಮಕ್ಕಳ ಸಂಖ್ಯೆ ಜೀರೋ ಆಗುತ್ತದೆ. ಈಗ ಅಂತಹ ಶಿಕ್ಷಕರಿಗೇ ವರ್ಗಾವಣೆಯಲ್ಲಿ ಆಧ್ಯತೆ ಸಿಗುತ್ತಿದೆ. ಅಂದರೆ ಪ್ರಾಮಾಣಿಕ, ಬಡ ಶಿಕ್ಷಕರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಅವರು ಸೇವೆ ಪೂರ್ಣ ಗ್ರಾಮೀಣ ಭಾಗದಲ್ಲೇ ಕಳೆಯಬೇಕಾಗುತ್ತದೆ. ನಗರ ವಲಯಕ್ಕೆ ಹೋಗಬೇಕೆಂದರೆ ಮಕ್ಕಳ ಟಿಸಿ ಕೊಟ್ಟು ಕಳಿಸಿ ಎಂದು ಸರಕಾರವೇ ಹೇಳಿಕೊಟ್ಟಂತಾಗುತ್ತದೆ ಎನ್ನುವುದು ಶಿಕ್ಷಕರ ಅಳಲು.
ತಕ್ಷಣ ಈ ನೀತಿ ಕೈಬಿಟ್ಟು ಎಲ್ಲ ಟಿಜಿಟಿಗಳನ್ನೂ ಒಂದೇ ರೀತಿ ಪರಿಗಣಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
ಇನ್ನು, ಕಡ್ಡಾಯ ವರ್ಗಾವಣೆಯಲ್ಲಿ ಎ ವಲಯದ ಶಿಕ್ಷಕರನ್ನು ಸಿ ವಲಯಕ್ಕೆ ವರ್ಗಾವಣೆ ಮಾಡುವುದು ಸರಿ. ಆದರೆ ಇದರಲ್ಲಿ ವಿನಾಯಿತಿ ಏಕೆ ? ಎಂದು ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ಈಗಾಗಲೇ ಎ ವಲಯದಲ್ಲಿ ವಿಕಲಚೇತನರು, ವಿಧವೆಯರು, ಮದುವೆಯಾಗದವರು, ಪತಿ ಪತ್ನಿ ಪ್ರಕರಣದ ಜೊತೆಗೆ ಸಂಘದ ಪದಾಧಿಕಾರಿಗಳೇ ಶೇ.90ರಷ್ಟು ಇದ್ದಾರೆ. ಇವರು ನಿವೃತ್ತಿಯಾಗುವವರೆಗೂ ಎ ವಲಯದಲ್ಲಿ ಇರುತ್ತಾರೆ. ಇವರಿಗೆ ವಿನಾಯಿತಿ ನೀಡಿದರೆ ಕೆಲವೇ ಜನ ಜನರಲ್ ಶಿಕ್ಷಕರು ಸಿ ವಲಯಕ್ಕೆ ಹೋಗಬೇಕಾಗುತ್ತದೆ ಎನ್ನುವುದು ಶಿಕ್ಷಕರ ಅಸಮಾಧಾನ.
ಪತಿ ಪತ್ನಿ ಪ್ರಕರಣದಲ್ಲಿ ಗಂಡ ಹೆಂಡತಿ ಯಾದವರು ಗಣಿತ, ವಿಜ್ಞಾನ, ಇಂಗ್ಲಿಷ್ ಮುಂತಾದ ವಿಷಯಗಳಿಗೆ ನೇಮಕ ಹೊಂದಿರುತ್ತಾರೆ. ಅವರು ಹೆಚ್ಚುವರಿಯಲ್ಲೂ ವಿನಾಯಿತಿ, ಕಡ್ಡಾಯದಲ್ಲಿ ವಿನಾಯಿತಿ ಪಡೆಯುತ್ತಾರೆ. ಈ ಎಲ್ಲ ಶಿಕ್ಷಕರು ಎ ವಲಯದಲ್ಲಿಯೇ ಇರಲು ಅವಕಾಶವೂ ಸಾಕಷ್ಟು ಇರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವವರು ಯಾವುದೇ ಕಾರಣಕ್ಕೂ ಜನರಲ್ ಶಿಕ್ಷಕರು ಎ ವಲಯ ಕ್ಕೆ ಹೋಗಲು ಸಾಧ್ಯವೇ ಆಗದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಶಿಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಹಳ್ಳಿ ಗಾದೆಯಂತೆ ಇವರು “ಇಟ್ ಮನಿ ಪಟ್ಟ” ಎಂಬುವಂತೆ ಒಂದೇ ಸ್ಥಳದಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆದು ನಿವೃತ್ತಿಯಾಗುವವರೆಗೂ ಅಲ್ಲೇ ಇರುವ ಅವಕಾಶ ಪಡೆಯುತ್ತಾರೆ. ಇವರ ಮಧ್ಯದಲ್ಲಿ ಜನರಲ್ ಶಿಕ್ಷಕರು ಒಂಥರಾ ಫುಟ್ಬಾಲ್ ಆಗಿಬಿಟ್ಟಿದ್ದಾರೆ. ಇವರು ಮಾಡಿದ ತಪ್ಪು ಎಂದರೆ ಸರ್ಕಾರಿ ನೌಕರಿ ಇದ್ದವರನ್ನೇ ಮದುವೆ ಮಾಡಿಕೊಳ್ಳದಿರುವುದು. ಪತಿ ಪತ್ನಿ ನೌಕರರಿಗೆ ಹಣವೂ ಹೆಚ್ಚು ಜೊತೆಗೆ ಅನುಕೂಲಕರ ಸ್ಥಳ, ತಮ್ಮ ಮಕ್ಕಳ ಭವಿಷ್ಯವೂ ಕೂಡ ಎ ವಲಯದಲ್ಲಿ ಆಗುತ್ತದೆ. ಆದರೆ ತಾನು ನೌಕರಿ ಹೊಂದಿ ನೌಕರಿ ಇಲ್ಲದ ಇನ್ನೊಂದು ಕುಟುಂಬಕ್ಕೆ ಆಸರೆಯಾಗಿ ಜೀವನ ಪೂರ್ತಿ ಕಷ್ಟಪಡುವವರು ಕಷ್ಟಪಡುವಂತೆ ಸರ್ಕಾರವೇ ನೀತಿ ನಿಯಮಗಳನ್ನು ಮಾಡುತ್ತದೆ ಎಂದು ಶಿಕ್ಷಕರು ಕಿಡಿ ಕಾರುತ್ತಿದ್ದಾರೆ.
ಎಲ್ಲರಿಗೂ ನ್ಯಾಯ ಒಂದೇ ಆಗಿರಲಿ ಎಂಬುದು ನಮ್ಮ ಅಭಿಪ್ರಾಯ. ಇನ್ನು ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಆಗಬಾರದೆಂದರೆ ನೌಕರರ ಸಂಘಕ್ಕೆ ಚುನಾವಣೆಗೆ ನಿಲ್ಲಬೇಕು. ಅಲ್ಲಿ ರಾಜಕೀಯ ಪಕ್ಷಗಳನ್ನು ಮೀರುವಂತೆ ಚುನಾವಣೆ ನಡೆಯಲು ಇದೇ ಕಾರಣವಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಿ ಹಾಗೂ ಸೂಕ್ತ ನ್ಯಾಯ ಸಮ್ಮತವಾದ ವರ್ಗಾವಣೆ ನೀತಿಯನ್ನು ಜಾರಿಗೆ ತನ್ನಿ ಎಂದು ಶಿಕ್ಷಕರು ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ