ಕಾಂಗ್ರೆಸ್ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರ ಮಾತುಗಳು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಿಜೆಪಿ ಯಾವ ರೀತಿ ದೇಶದಲ್ಲಿ ದ್ವೇಷ ಹರಡಿ, ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸಿಗರಾಗಿ ಈ ದೇಶದ ರಕ್ಷಣೆ ನಮ್ಮ ಜವಾಬ್ದಾರಿ. ಆರ್ ಎಸ್ಎಸ್ ಹಾಗೂ ಬಿಜೆಪಿಯಿಂದ ನವ ಭಾರತವನ್ನು ರಕ್ಷಣೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಟ್ಟಡ “ಇಂದಿರಾ ಗಾಂಧಿ ಭವನ” ವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ “ಭಾರತ ಜೋಡೋ ಸಭಾಂಗಣ”ವನ್ನು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಸಂಜೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಸದ್ಯದಲ್ಲೇ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮ ಪಕ್ಷದ ನಾಯಕರಲ್ಲಿ ಒಗ್ಗಟ್ಟು ಕಾಣಿಸುತ್ತಿದೆ. ರಾಜ್ಯದ ಎಲ್ಲಾ ನಾಯಕರು ಭಾರತ ಜೋಡೋ ಯಾತ್ರೆ ಸಮಯದಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದರು. ಇದೇ ರೀತಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಬಿರುದು ಪಡೆದಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹೆಗ್ಗುರುತಾಗಿದೆ. ಪ್ರಧಾನಮಂತ್ರಿಗಳು, ಬಿಜೆಪಿ ನಾಯಕರು ಏನೇ ಹೇಳಿದರೂ ಅವರು ಕಳೆದ ಐದು ವರ್ಷಗಳಲ್ಲಿ ಏನ್ನನೂ ಮಾಡಿಲ್ಲ ಎಂದು ರಾಜ್ಯದ ಜನರಿಗೆ ಅರಿವಾಗಿದೆ. ಈ ಸರ್ಕಾರಕ್ಕೆ ಪಾಠ ಕಲಿಸಲು ಜನ ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಾಲ್ಕು ಯೋಜನೆ ಜಾರಿ ಮಾಡುವ ಘೋಷಣೆ ಮಾಡಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿಯನ್ನು ಜನರಿಗೆ ಮುಟ್ಟಿಸಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ನಂತರ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತ ಉತ್ತಮ ಆಡಳಿತ ನೀಡಲಾಗುವುದು. ಹಾಲಿ ಬಿಜೆಪಿ ಸರ್ಕಾರದ ವರ್ತನೆಯನ್ನು ನಮ್ಮ ಸರ್ಕಾರ ಮುಂದುವರಿಸುವುದಿಲ್ಲ. ಸ್ವಚ್ಛ, ಜನರ ಕಷ್ಟ ಆಲಿಸುವ, ಅವರ ಬದುಕು ಬದಲಿಸುವ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾನು ಖರ್ಗೆ, ಸಿದ್ದರಾಮಯ್ಯ, ಶಿವಕುಮಾರ್ ಅವರಿಗೆ ನಾನು ಯಾವುದೇ ಕ್ಷಣದಲ್ಲಿ ಇಲ್ಲಿಗೆ ಬಂದು ಕೆಲಸ ಮಾಡಲು ಸಿದ್ಧನಿರುವುದಾಗಿ ಹೇಳಿದ್ದೇನೆ. ಕರ್ನಾಟಕ ರಾಜ್ಯಕ್ಕೆ ಬರಲು ನನಗೆ ಬಹಳ ಇಷ್ಟ. ನಾನು ಕಾಂಗ್ರೆಸ್ ಪಕ್ಷ ಹೆಚ್ಚಿನ ಬಹುಮತ ಪಡೆಯಲು ಎಲ್ಲ ಸಹಾಯ ಮಾಡಲು ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿದರು.
ಚುನಾವಣೆಯನ್ನು ಅಲ್ಪ ಬಹುಮತದಿಂದ ಗೆಲ್ಲುವುದರಲ್ಲಿ ಅರ್ಥವಿಲ್ಲ. ನಾವು ಕನಿಷ್ಠ 150 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಬಿಜೆಪಿ ಸರ್ಕಾರ ರಾಜ್ಯದ ಜನರನ್ನು ಲೂಟಿ ಮಾಡಿದ್ದು, ಮುಂದಿನ ಸರ್ಕಾರವನ್ನು ಬೀಳಿಸಲು ಅದೇ ಹಣ ಬಳಸುತ್ತಾರೆ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಹುಮತದ ಗೆಲುವು ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಕಾರ್ಯಕರ್ತರನ್ನು ನಾಯಕರೆಂದು ಪರಿಗಣಿಸಿ ಅವರ ಧ್ವನಿಯು ಸರ್ಕಾರದ ಭಾಗವಾಗುವಂತೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಹಿಡಿದ ಕೆಲಸ ಮಾಡಿಯೇ ತೀರುವ ಗುಣ ಡಿ.ಕೆ. ಶಿವಕುಮಾರ್ ಅವರದ್ದು: ಮಲ್ಲಿಕಾರ್ಜುನ ಖರ್ಗೆ ಪ್ರಶಂಸೆ*
‘ಡಿ.ಕೆ. ಶಿವಕುಮಾರ್ ಅವರು ಪಕ್ಷದ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುತ್ತಾರೆ. ತಾವು ಹಿಡಿದ ಕೆಲಸವನ್ನು ಮಾಡಿಯೇ ತೀರುವ ಗುಣ ಅವರದ್ದು. ಪಕ್ಷದ ಎಲ್ಲ ನಾಯಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ಅವರು ಯಶಸ್ವಿಯಾಗಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರ ಕಾರ್ಯವೈಖರಿಯನ್ನು ಗುಣಗಾನ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ನೂತನ ಕಟ್ಟಡ ಇಂದಿರಾ ಗಾಂಧಿ ಭವನ ಹಾಗೂ ಭಾರತ ಜೋಡೋ ಸಭಾಂಗಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;
‘ಇದು ವಿಶೇಷ ಹಾಗೂ ಚಿಕ್ಕ ಕಾರ್ಯಕ್ರಮವಾದರೂ ಇಂದಿರಾ ಗಾಂಧಿ ಅವರ ಹೆಸರಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಿರುವುದು ದೊಡ್ಡ ವಿಚಾರ. ದೆಹಲಿ ಕಾಂಗ್ರೆಸ್ ಕಚೇರಿ ಬಿಟ್ಟರೆ ನಂತರದ ದೊಡ್ಡ ಕಾಂಗ್ರೆಸ್ ಕಚೇರಿ ಇರುವುದು ಬೆಂಗಳೂರಿನಲ್ಲಿ. ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಭವ್ಯವಾಗಿ ಈ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅವರು ಯಾವ ಕೆಲಸವನ್ನು ಹಿಡಿಯುತ್ತಾರೋ ಆ ಕೆಲಸವನ್ನು ಅವರು ಮಾಡಿಯೇ ತೀರುತ್ತಾರೆ. ಕೆಲವೊಮ್ಮೆ ಸಿಟ್ಟು ಮಾಡಿಕೊಂಡರೂ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಅವರ ಈ ಗುಣವನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಮೆಚ್ಚಿದ್ದಾರೆ.
ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡುವಾಗ ನಾನು ತಲೆ ಕೆರೆದುಕೊಳ್ಳುತ್ತಿದ್ದೆ. ಆಗ ಸೋನಿಯಾ ಗಾಂಧಿ ಅವರು ಯಾಕೆ ಎಂದು ಕೇಳಿದರು. ನಾನು ಆಗ ಈ ಆಯ್ಕೆ ಬಗ್ಗೆ ಅನುಮಾನವಿದೆ ಎಂದು ಹೇಳಿದೆ. ಆದರೆ ಸೋನಿಯಾ ಗಾಂಧಿ ಅವರು ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು. ಆದರೆ ಅಧ್ಯಕ್ಷರಾದ ನಂತರ ಡಿ.ಕೆ. ಶಿವಕುಮಾರ್ ಅವರು ತಾವು ಎಲ್ಲರೂನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿ, ಎಲ್ಲರ ಜತೆ ಸಾಗುವುದಾಗಿ ಸಾಬೀತು ಮಾಡಿ ತೋರಿಸಿದ್ದಾರೆ. ಎಲ್ಲ ನಾಯಕರ ಜತೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಅವರು ಇದೇ ಕೆಲಸವನ್ನು ಮುಂದುವರಿಸಲಿ.
ಈ ಕಟ್ಟಡಕ್ಕೆ ಯಾವ ಹೆಸರು ಇಡಬೇಕು ಎಂದು ಶಿವಕುಮಾರ್ ಅವರು ನನಗೆ ಕೇಳಿದಾಗ, ಇಂದಿರಾ ಗಾಂಧಿ ಅವರ ಹೆಸರಿಡುವಂತೆ ಸಲಹೆ ನೀಡಿದೆ. ಕಾರಣ, ನನ್ನ ಸಕ್ರಿಯ ರಾಜಕಾರಣ ಪ್ರಾರಂಭವಾಗಿದ್ದು ಇಂದಿರಾ ಗಾಂಧಿ ಅವರ ಕಾಲದಲ್ಲಿ. ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದು ಅವರ ಕಾಲದಲ್ಲೇ. ಈ ಒಂದು ಸ್ವಾರ್ಥದಿಂದ ನಾನು ಈ ಸಲಹೆ ನೀಡಿದೆ.
ನಾವು ಒಟ್ಟಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷದ 4 ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಬೇಕು. ನಂತರ ನುಡಿದಂತೆ ನಡೆಯಬೇಕು. ನಾವು ಈಗಲೂ ಇಂದಿರಾ ಗಾಂಧಿ ಅವರನ್ನು ಯಾಕೆ ಸ್ಮರಿಸುತ್ತೇವೆ ಎಂದರೆ, ಅವರು ಭೂಸುಧಾರಣೆ ಕಾಯ್ದೆ, 10 ಅಂಶಗಳ ಕಾರ್ಯಕ್ರಮ ಜಾರಿ ಮಾಡಿ ಪಕ್ಷಕ್ಕೆ ಮರುಚೈತನ್ಯ ತುಂಬಿದರು. ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ಆಮೂಲಕ ಬಡವರಿಗೆ ನಿರಾಳತೆ ಕೊಟ್ಟರು. ಇದೇ ಕಾರಣಕ್ಕೆ ದೇಶದ ಜನ ಇಂದಿರಾ ಗಾಂಧಿ ಅವರ ಜತೆ ನಿಂತರು. ಮುಂದಿನ ದಿನಗಳಲ್ಲಿ ನಿಮ್ಮ ಸರ್ಕಾರ ಬಂದಾಗ ಇಂದಿರಾ ಅವರ ಹಾದಿಯಲ್ಲೇ ಸಾಗಬೇಕು.
ಮುಂದಿನ ದಿನಗಳಲ್ಲಿ ಬರುತ್ತಿರುವ ಯುದ್ಧವನ್ನು ನಾವು ಗೆಲ್ಲಬೇಕು. ನಾವು ನಮ್ಮ ಗುರಿ ತಲುಪದಿದ್ದರೆ ಯಾವುದೇ ಪ್ರಯೋಜನವಿಲ್ಲ. ಮೋದಿ ಅವರು ಪ್ರಜಾಪ್ರಭುತ್ವ ಮುಗಿಸಲು ಮುಂದಾಗಿದ್ದಾರೆ. ಅವರು ಸರ್ವಾಧಿಕಾರಿಯಾಗಿ ಆಡಳಿತ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅವರು ಸಂಸತ್ತಿನಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದಿರಲಿ, ಅವರ ಮಂತ್ರಿಗಳು ನಮ್ಮ ಪ್ರಶ್ನೆಗಳನ್ನು ಸಾವಧಾನವಾಗಿ ಕೇಳಿಸಿಕೊಳ್ಳುತ್ತಿಲ್ಲ.
ರಾಹುಲ್ ಗಾಂಧಿ ಅವರು ಅದಾನಿ ವಿಚಾರವಾಗಿ ಸರ್ಕಾರಕ್ಕೆ ಕೆಲವು ಪ್ರಶ್ನೆ ಕೇಳಿದ್ದಾರೆ. 2014ರಲ್ಲಿ ಈ ಉದ್ಯಮಿ ಆಸ್ತಿ 50 ಸಾವಿರ ಕೋಟಿ ಇತ್ತು. ನಂತರ 2020ರಲ್ಲಿ ಇದು 2 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಆಗ 2023ರಲ್ಲಿ ಇದು 12 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಎಂತಹ ಜಾದು? ಈ ಸಂಪತ್ತು ಹೇಗೆ ಬಂತು ಎಂದು ರಾಹುಲ್ ಗಾಂಧಿ ಅವರು ಕೇಳಿದರು. ಮೋದಿ ಅವರ ಜತೆ ಅದಾನಿ ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದರು? ಅಲ್ಲಿ ಅದಾನಿ ಅವರಿಗೆ ಎಷ್ಟು ಗುತ್ತಿಗೆ ಕೊಡಿಸಿದಿರಿ? ಜನಸಾಮಾನ್ಯರ ಪರಿಶ್ರಮದ ಬ್ಯಾಂಕುಗಳು ಹಾಗೂ ಎಲ್ ಐಸಿಯ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿರುವ ಹಣ ಎಷ್ಟು? ಅದಾನಿ ಅವರ ಬೋಗಸ್ ಕಂಪನಿಯ 20 ಸಾವಿರ ಕೋಟಿ ಹಣ ಯಾರದ್ದು ಎಂದು ಕೇಳಿದರು? ಇದೇ ಪ್ರಶ್ನೆಯನ್ನು ಕೇಳಿದರೆ ನಾವು ಸಿಕ್ಕಿ ಬೀಳುತ್ತೇವೆ ಎಂದು ಅವರನ್ನು ಅನರ್ಹ ಮಾಡಿ, ಅವರ ನಿವಾಸ ಕಸಿದಿದ್ದಾರೆ.
ಬಿಜೆಪಿ ಸಂಸದ ದಲಿತ ವೈದ್ಯನಿಗೆ ಹಲ್ಲೆ ಮಾಡಿದಾಗ ಪ್ರಕರಣ ದಾಖಲಾಯಿತು. ಸೆಷನ್ ಕೋರ್ಟ್ ನಲ್ಲಿ ಜಾಮೀನು ಸಿಗಲಿಲ್ಲ, ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಕೇಳಿ, 5 ಲಕ್ಷ ದಂಡ ವಿಧಿಸಿದರು. ಆಗ ಆತನಿಗೆ 29 ದಿನ ಸಮಯಾವಕಾಶ ನೀಡಿದರು. ಆದರೆ ರಾಹುಲ್ ಗಾಂಧಿ ಅವರಿಗೆ ತೀರ್ಪು ಬಂದ 24 ಗಂಟೆಗಳಲ್ಲಿ ಅನರ್ಹತೆ ಮಾಡಿದರು. ಆಮೂಲಕ ರಾಹುಲ್ ಗಾಂಧಿ ಅವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದರು. ಇವರು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುತ್ತಾರಾ?
ರಾಹುಲ್ ಗಾಂಧಿ ಹಾಗೂ ನಾನು ಸಂಸತ್ತಿನಲ್ಲಿ ಮಾಡಿದ ಭಾಷಣದ ಪ್ರಮುಖ ಅಂಶಗಳನ್ನು ಕಡತದಿಂದ ತೆಗೆದು ಹಾಕಿದ್ದಾರೆ. ರಾಹುಲ್ ಗಾಂಧಿ ಯಾವುದಕ್ಕೂ ಹೆದರುವ ಮನುಷ್ಯ ಅಲ್ಲ. ಮೋದಿ, ಶಾ ಅವರಂತಹ ನೂರು ಜನ ಬಂದರೂ ಹೆದರುವುದಿಲ್ಲ. ಹೀಗಾಗಿ ನಾವು ಅವರಿಗೆ ಶಕ್ತಿ ತುಂಬಬೇಕು. ಭಾರತ ಜೋಡೋ ಯಾತ್ರೆ ಯಶಸ್ವಿ ಮಾಡಿದಂತೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು. ಇದಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಆಗ ನಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ.
ಈ ಕಟ್ಟಡ ಕಟ್ಟಿರುವ ಶಿವಕುಮಾರ್ ಹಾಗೂ ಇದಕ್ಕೆ ಸಹಕಾರ ನೀಡಿದ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಕೆ.ಜೆ ಜಾರ್ಜ್ ಅವರಿಗೆ ನಾನು ಅಭಿನಂದಿಸುತ್ತೇನೆ. ಎಂದು ಖರ್ಗೆ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಭಾರತ ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ ಅವರು ಇಂದು ರಾಜ್ಯಕ್ಕೆ ಆಗಮಿಸಿ ಕೋಲಾರದಲ್ಲಿ ಜೈ ಭಾರತ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಮ್ಮ ಪಕ್ಷದ ನೂತನ ಕಟ್ಟಡ ಉದ್ಘಾಟನೆಗೆ ಮಾಡುವಂತೆ ಮನವಿ ಮಾಡಿಕೊಂಡೆ. ಅದಕ್ಕೆ ರಾಹುಲ್ ಗಾಂಧಿ ಅವರು ಒಪ್ಪಿದ್ದಾರೆ. ಇನ್ನು ನಮ್ಮ ಗೌರವಾನ್ವಿತ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಕಾರ್ಯಕ್ರಮದ ಭಾಗವಾಗಿ, ಇಂದಿರಾ ಗಾಂಧಿ ಭವನ ಉದ್ಘಾಟನೆ ಮಾಡಿರುವುದು ಬಹಳ ಸಂತೋಷ ತಂದಿದೆ. ಖರ್ಗೆ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಪಕ್ಷ ಹೊಸ ದಿಕ್ಕಿನತ್ತ ಸಾಗುತ್ತಿದ್ದು, ಬ್ಲಾಕ್ ಅಧ್ಯಕ್ಷರಾಗಿದ್ದ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾಕ್ಷಿ ಎಂದರು.
ಈ ಕಟ್ಟಡಕ್ಕೆ ಯಾವ ಹೆಸರು ಇಡಬೇಕು ಎಂದು ಖರ್ಗೆ ಅವರನ್ನು ಕೇಳಿದಾಗ, ಈ ಭವನಕ್ಕೆ ಇಂದಿರಾ ಗಾಂಧಿ ಭವನ ಎಂದು ಹೆಸರಿಡಿ ಎಂದು ಅವರು ಸಲಹೆ ನೀಡಿದರು. ಕಾಂಗ್ರೆಸ್ ಪಕ್ಷ ಇಂದು ದೇಶದಲ್ಲಿ ಗಟ್ಟಿಯಾಗಿ ಉಳಿಯಬೇಕಾದರೆ ಅದು ಗಾಂಧಿ ಕುಟುಂಬದಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷದ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಎಲ್ಲ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶವನ್ನು ಒಗ್ಗೂಡಿಸಿ ಆ ಸಂಕಷ್ಟದಿಂದ ಪಾರು ಮಾಡಿದೆ. ರಾಹುಲ್ ಗಾಂಧಿ ಅವರು ದೇಶಕ್ಕಾಗಿ ತಮಗೆ ಬಂದ ಎಲ್ಲ ರೀತಿಯ ಅಧಿಕಾರವನ್ನು ತ್ಯಾಗ ಮಾಡಿದ್ದಾರೆ.
ಭಾರತ ಜೋಡೋ ಯಾತ್ರೆ ಸಮಯದಲ್ಲಿ ಪತ್ರಕರ್ತರೊಬ್ಬರು ನೀವು ಇಷ್ಟೋಂದು ಪರಿಶ್ರಮ ಹಾಕುತ್ತಿರುವುದೇಕೆ ಎಂದು ಕೇಳಿದಾಗ. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಅವರು ಈ ದೇಶದ ಜನ ನನ್ನ ಮುತ್ತಾತ, ಅಜ್ಜಿ, ಅಪ್ಪ ಹಾಗೂ ಅಮ್ಮನಿಗೆ ಇಡೀ ನಮ್ಮ ಕುಟುಂಬಕ್ಕೆ ಅಪಾರ ಪ್ರೀತಿ ತೋರಿದ್ದು, ಈ ದೇಶದ ಜನ ಒಗ್ಗಟ್ಟಾಗಿರಬೇಕು ಎಂದು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು. ಇದೇ ಕಾರಣಕ್ಕೆ ಈ ಸಂಭಾಂಗಣವನ್ನು ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯ ನೆನಪಿಗಾಗಿ ಭಾರತ ಜೋಡೋ ಸಭಾಂಗಣ ಎಂದು ನಾಮಕರಣ ಮಾಡಿದ್ದೇವೆ ಎಂದರು.
ನಾವು ಯಾತ್ರೆ ಸಾಗಿದ ಮಾರ್ಗದಲ್ಲಿ 5 ಎಕರೆ ಜಾಗಗಳನ್ನು ಖರೀದಿ ಮಾಡಲು ನಿರ್ಧರಿಸಿ 3 ಎಕರೆ ಖರೀದಿ ಮಾಡಿದ್ದೇವೆ. ಉಳಿದ 2 ಎಕರೆ ಖರೀದಿ ಹಂತದಲ್ಲಿದೆ. ಈ ಜಾಗದಲ್ಲಿ ಕಾಂಗ್ರೆಸಿಗರಿಗೆ ಭಾರತ ಜೋಡೋ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಬೆಂಬಲದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಪಕ್ಷದ ನಾಯಕರು ಚುನಾವಣೆ ಕೆಲಸದಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಕೋಲಾರ ಕಾರ್ಯಕ್ರಮವನ್ನು ಅಡ್ಡಿ ಪಡಿಸಬಾರದು ಎಂದು ಕೇವಲ ಬೆಂಗಳೂರಿನ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಬೆಂಗಳೂರು ಶಾಸಕರಿಗೆ ಮಾತ್ರ ಆಹ್ವಾನ ನೀಡಿ ಚಿಕ್ಕದಾಗಿ ಕಾರ್ಯಕ್ರಮ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಾನು ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್ ಅವರಿಗೆ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಇವರು ಈ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು, ಇದನ್ನು ಪೂರ್ಣಗೊಳಿಸಿ, ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟ. ಈ ಕಟ್ಟಡವನ್ನು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವಂತೆ ಬಳಸಿಕೊಳ್ಳಲಾಗುವುದು.
ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ಭರವಸೆಯನ್ನು ರಾಹುಲ್ ಗಾಂಧಿ ಅವರಿಗೆ ಈ ಸಂದರ್ಭದಲ್ಲಿ ನೀಡುತ್ತೇನೆ ಎಂದು ಶಿವಕುಮಾರ ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಬಿ.ಎನ್. ಚಂದ್ರಪ್ಪ, ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ, ಮಾಜಿ ಸಚಿವ ಹೆಚ್.ಕೆ ಪಾಟೀಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ