ಪ್ರಗತಿವಾಹಿನಿ ಸುದ್ದಿ, (ಬೀಳಗಿ) ಬಾಗಲಕೋಟ: ಕಾಂಗ್ರೆಸ್ ಪ್ರಣಾಳಿಕೆ ಘೋಷಿಸಿದ್ದು, ಪೊಳ್ಳು ಭರವಸೆಗಳ ಜೊತೆಗೆ ಹಿಂದುತ್ವವನ್ನು ದಮನಿಸುವ ಹುನ್ನಾರ ನಡೆಸಿದೆ. ಇದು ಸೂರ್ಯ-ಚಂದ್ರರಿರುವರೆಗೂ ಸಾಧ್ಯವಿಲ್ಲ. ಭಜರಂಗದಳ ನಿಷೇಧಿಸುತ್ತೇನೆ ಎನ್ನುವ ನಿಮ್ಮನ್ನು ಈ ಬಾರಿ ಜನರೇ ಬಹಿಷ್ಕರಿಸುತ್ತಾರೆ ಎಂದು ಬಿಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಹೊನ್ನಿಹಾಳ, ಸೋರಕೊಪ್ಪ ಹಾಗೂ ನಕ್ಕರಗುಂದಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.
ಪ್ರತಿ ಕುಟುಂಬ ಸ್ವಾಭಿಮಾನ ಹಾಗೂ ಗೌರವಯುತವಾಗಿ ಬದುಕಬೇಕು. ನೆಮ್ಮದಿಯ ಕೌಟುಂಬಿಕ ಜೀವನ ಅವರದ್ದಾಗಿರಬೇಕು ಎಂಬ ನಿಟ್ಟನಲ್ಲಿ ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ವಸತಿ ಯೋಜನೆಯಡಿ ಮನೆಗಳನ್ನು ತಂದು ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೂ ಸೂರು ನೀಡಿದ್ದೇನೆ. ವಸತಿರಹಿತರಿಗೆ ಬಸವ ವಸತಿ ಯೋಜನೆಯಡಿ 2,246 ಮನೆಗಳನ್ನು ನಿರ್ಮಿಸಿಕೊಳ್ಳಲು ರೂ. 27.00 ಕೋಟಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 1,124 ಫಲಾನುಭವಿಗಳಿಗೆ ರೂ. 19.67 ಕೋಟಿ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 842 ಫಲಾನುಭವಿಗಳಿಗೆ ರೂ. 12.12 ಕೋಟಿ ಸಹಾಯಧನವನ್ನು ಮನೆ ನಿರ್ಮಿಸಿಕೊಳ್ಳಲು ನೀಡಲಾಗಿದೆ ಎಂದು ಅವರು ಹೇಳಿದರು.
ಮತಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಬೇಡಿಕೆಗೆ ಬಂದದ್ದನ್ನು ಪರಿಗಣಿಸಿ ಬಸವ ವಸತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಹೆಚ್ಚುವರಿ 600 ಫಲಾನುಭವಿಗಳಿಗೆ ರೂ. 8.30 ಕೋಟಿ ಅನುದಾನ ತಂದು ಮನೆ ನಿರ್ಮಿಸಿಕೊಡಲಾಗಿದೆ. ಆದಾಗ್ಯೂ ರೂ. 14.75 ಕೋಟಿ ಅನುದಾನದಲ್ಲಿ 500 ಬಸವ ವಸತಿ ಯೋಜನೆ ಮತ್ತು 500 ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಈಗಾಗಲೇ ಮಂಜೂರು ಮಾಡಿಸಲಾಗಿದೆ. ಪ್ರತಿ ಕುಟುಂಬಕ್ಕೂ ನೆಮ್ಮದಿಯ ಬದುಕು ಕಟ್ಟಿಕೊಡುವುದು ನನ್ನ ಸಂಕಲ್ಪವಾಗಿದ್ದು ಬೀಳಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಮ್ಮೆ ಆಶಿರ್ವದಿಸಿ ಮತದಾರರಲ್ಲಿ ಮುರುಗೇಶ ನಿರಾಣಿ ನಿವೇದನೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಸವರಾಜ ಖೋತ, ಡಾ. ಜೋಶಿ, ಡಾ. ಗಡ್ಡಿ, ಡಾ. ಬಾಳಿಕಾಯಿ, ಮಲ್ಲಿಕಾರ್ಜುನ ಗೌಡರ್, ಶಿವನಗೌಡ ಪಾಟೀಲ, ಈರಣ್ಣ ಕುಂಬಾರ, ಶಿವಲಿಂಗಪ್ಪ ಬೆಳವಲರ್, ಸಂಗಪ್ಪ ಅನವಾಲ, ಸಿದ್ದಪ್ಪ ನೀರಲಕೇರಿ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ