Latest

ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ರಾಜ್ಯದಲ್ಲಿ ಏಕಾಏಕಿ ವಿದ್ಯುತ್ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಬೊಮ್ಮಾಯಿ, “ನಾವು ವಿದ್ಯುತ್ ದರ ಏರಿಕೆ ಅನುಷ್ಠಾನ ತಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ವಿದ್ಯುತ್ ದರ ಏರಿಕೆ ನಮ್ಮ ಸರ್ಕಾರ‌ ಮಾಡಿಲ್ಲ. ದರ ಏರಿಕೆ ವರದಿಯನ್ನು ನಾವು ಒಪ್ಪಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ದರ ಹೆಚ್ಚಳವಾಗಿದೆ” ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಸಮಾಧಾನ ವ್ಯಕ್ತಪಡಿಸಿದರು.

ಜವಾಬ್ದಾರಿ ಇಲ್ಲದ ಸರಕಾರ:

“ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಹತ್ತಿರ ಬಂದಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮಾನ್ಸೂನ್ ಮಳೆ ತಡವಾಗಿದ್ದರಿಂದ ಬಿತ್ತನೆ ಕೂಡ ತಡವಾಗಿ ಆಗುತ್ತಿದೆ. ಮಾನ್ಸೂನ್ ಮಳೆ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಸಹ ಬರುತ್ತಿವೆ. ಹೀಗಿದ್ದರೂ ಸಿಎಂ ಇವುಗಳನ್ನು ನಿಭಾಯಿಸಲು ಯಾವುದೇ ರೀತಿ ಸನ್ನದ್ಧವಾಗಿಲ್ಲ” ಎಂದು ಬೊಮ್ಮಾಯಿ ಹೇಳಿದರು.

“ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿರುವ ಡ್ಯಾಂ ಗಳ ನೀರು ಅತ್ಯಂತ ಕೆಳಮಟ್ಟದಲ್ಲಿದೆ‌. ಆದರೆ ನಾನು ಇಷ್ಟು ಬೇಗ ರಾಜ್ಯದಲ್ಲಿ ಬರಗಾಲ ಬರಲಿದೆ ಎಂದು ಹೇಳುವುದಿಲ್ಲ. ಆದರೆ ರಾಜ್ಯ ಸರ್ಕಾರ ಸಮರ್ಪಕವಾಗಿ ಯೋಜನೆಗಳನ್ನು ಮಾಡಿಕೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಅದರಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ, ಅವರಿಂದ ಸಹಕಾರ ಪಡೆಯಬೇಕು. ಈ ಕೂಡಲೇ ನೂರು ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು. ಎನ್‌ಡಿ‌ಆರ್‌ಎಫ್ ತಂಡಗಳನ್ನು ಚುರುಕುಗೊಳಸಬೇಕು.ನಗರ ಪ್ರದೇಶಗಳಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಸರ್ಕಾರ ಜನರಿಗೆ ಪ್ರಯೋಜನಕ್ಕೆ ಬಾರದ ಸರ್ಕಾರವಾಗಿದೆ” ಎಂದರು.

“ಗ್ಯಾರಂಟಿ ಬಗ್ಗೆ ಕಾದುನೋಡುವ ತಂತ್ರ ನಮ್ಮದಾಗಿದೆ. ಉಚಿತ ಬಸ್ ಪಾಸ್ ಆರಂಭದ ಶೂರತ್ವವನ್ನು ಸರ್ಕಾರ ತೋರಿಸುತ್ತಿದೆ. ರಾಜ್ಯದಲ್ಲಿ ಬಸ್ ಗಳ ಸಮಸ್ಯೆ ಉಂಟಾಗಿದೆ. ಈಗಾಗಲೇ ನಾವು ಡೀಸೆಲ್‌ ಅನುದಾನ ಬಿಡುಗಡೆ ಮಾಡಿದ್ದೇವೆ. ಅದನ್ನು ಮುಂದುವರಿಕೆ ಮಾಡಬೇಕು. ಗ್ಯಾರಂಟಿಗಳಿಗೆ ಹಣಕಾಸಿನ ಹೊಂದಾಣಿಕೆ ಬಗ್ಗೆ ಸರ್ಕಾರ‌ ಸ್ಪಷ್ಟವಾಗಿ ಹೇಳುತ್ತಿಲ್ಲ. ಹಣಕಾಸಿನ ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಡಲು ಸರ್ಕಾರ ಮುಂದಾಗಿದೆ. ಗ್ಯಾರಂಟಿ ವಿಚಾರದಲ್ಲಿ ಹಣಕಾಸಿನ ಬಗ್ಗೆ ಮಾಹಿತಿ ಪಡೆಯುವುದು ಪ್ರತಿಯೊಂದು ಕನ್ನಡಿಗನ ಹಕ್ಕು. ಆದರೆ ಈಗ ಸರಕಾರದ ನೀತಿ ಒಂದು ಕೈಯಲ್ಲಿ ಕಸಿದುಕೊಂಡು ಮತ್ತೊಂದು ಕೈಯಲ್ಲಿ ಕೊಡುವಂತಾಗಿದೆ” ಎಂದರು.

ಅಧಿವೇಶನದ ವೇಳೆ ವಿಪಕ್ಷ ನಾಯಕನ ಆಯ್ಕೆ:

“ನಾನು ವಿಪಕ್ಷ ಸ್ಥಾನಕ್ಕೆ ಆಕಾಂಕ್ಷೆ ಪಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಬಸವರಾಜ ಬೊಮ್ಮಾಯಿ, ಅಧಿವೇಶ ಕರೆದ ಕೂಡಲೇ ವಿಪಕ್ಷದ ನಾಯಕರ ಆಯ್ಕೆ ನಡೆಯುತ್ತದೆ. ಇದೇನೂ ಹೊಸತಲ್ಲ. ರಾಜಕೀಯದಲ್ಲಿ ಇದು ಸಂಪ್ರದಾಯದಂತೆ ನಡೆದು ಬಂದಿದೆ” ಎಂದರು.

ಜನತೆ ಕೊಟ್ಟ ತೀರ್ಪು ಒಪ್ಪಿಕೊಂಡಿದ್ದೇವೆ

“ಸೋಲಿನ ಬಗ್ಗೆ ರಾಷ್ಟ್ರೀಯ ನಾಯಕರು ಬೇಸರ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ಜನ ಕೊಟ್ಟ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ. ನಾನೇ ಸೋಲಿನ ನೈತಿಕ ಹೊಣೆ ಹೊತ್ತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಕುರಿತು ಚರ್ಚೆಗಳು ನಡೆದಿಲ್ಲ. ಎಲ್ಲರ ಸೋಲಿಗೆ ನಾನೇ ಹೊಣೆ ಅಂದ ಮೇಲೆ ಶಾಸಕರ ಸೋಲಿನ ಆರೋಪದ ಬಗ್ಗೆ ಉತ್ತರಿಸುವ ಪ್ರಶ್ನೆಯಿಲ್ಲ ಎಂದರು.

“ಜಗದೀಶ ಶೆಟ್ಟರ್ ಅವರನ್ನು ಪುನಃ ಬಿಜೆಪಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಸಂತೃಪ್ತರಾಗಿದ್ದಾರೆ. ಹಾಗಾಗಿ ಅವರನ್ನು ಮತ್ತೆ ಸೇರಿಸಿಕೊಳ್ಳುವ ಪ್ರಶ್ನೆ ಬರುವುದಿಲ್ಲ. ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ನೀಡಬಾರದೆಂಬ ಅಭಿಯಾನ ಪ್ರತಿ ಸಲ ಚುನಾವಣಾ ಪೂರ್ವದಲ್ಲಿ ನಡೆಯುತ್ತದೆ, ಅದನ್ನೇನೂ ಗಂಭೀರವಾಗಿ ಪರಿಗಣಿಸುವಂತಿಲ್ಲ” ಎಂದರು.

ವಿಧಾನ ಪರಿಷತ್ ನ ಮೂರು ಸ್ಥಾನಗಳಿಗೂ ಸ್ಪರ್ಧೆ:

“ವಿಧಾನ ಪರಿಷತ್ ಚುನಾವಣೆಯಲ್ಲಿ ಮೂರೂ ಸ್ಥಾನಕ್ಕೆ ನಾವು ಸ್ಪರ್ಧಿಸುತ್ತೇವೆ. ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಆದರೂ ಪ್ರತಿಪಕ್ಷವಾಗಿ ಸ್ಪರ್ಧಿಸುತ್ತೇವೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button