LatestNationalPolitics

*ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರದ ಜೊತೆಗೆ ‘ಗ್ರೂಪ್ ಡಿ’ ಹುದ್ದೆ ಸರ್ಕಾರಿ ಉದ್ಯೋಗ*: *ಸಿಎಂ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಚೋರ್ಬಗಾನ್ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 19 ಜನರು ಮೃತಪಟ್ಟಿದ್ದು, 25 ಜನರು ಗಾಯಗೊಂಡಿದ್ದಾರೆ.

ಉತ್ತರ ಕೋಲ್ಕತ್ತಾದ ಚೋರ್ಬಗಾನ್ ದುರ್ಗಾ ಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಳೆ ಸುರಿಯುತ್ತಿದ್ದಂತೆ ಪೂಜಾ ಪೆಂಡಾಲ್‌ನ ಹೊರಗೆ ಕಾಯುತ್ತಿದ್ದ ಜನರು ಏಕಾಏಕಿ ಒಳಗೆ ನುಗ್ಗಿದ್ದಾರೆ. ಇದರಿಂದಾಗಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರನ್ನು ದಾಖಲಿಸಿದ್ದ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪಶ್ಚಿಮ ಬಂಗಾಳ ಸಿಎಂ ಸುವೆಂಧು ಅಧಿಕಾರಿ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಘಟನೆ ಬಹಳ ದುಃಖ ತಂದಿದೆ ಎಂದರು. ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು. ಅಲ್ಲದೇ ಮೃತರ ಕುಟುಂಬದ ಒಬ್ಬರಿಗೆ ‘ಗ್ರೂಪ್ ಡಿ’ ಶ್ರೇಣಿಯ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಚೋರ್ಬಗಾನ್ ದುರ್ಗಾ ಪೂಜಾ ಆಯೋಜಕರು, ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ಕುಟುಂಬ ಸದಸ್ಯರ ಪ್ರಕಾರ, ಪೆಂಡಾಲ್ ಪ್ರದೇಶದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಊದಿದ ಸೀಟಿಯಿಂದಾಗಿ, ಪೆಂಡಾಲ್‌ಗೆ ಭೇಟಿ ನೀಡಲು ಕಾಯುತ್ತಿದ್ದ ಜನರಲ್ಲಿ ನೂಕುನುಗ್ಗಲು ಉಂಟಾಯಿತು ಎಂದು ಹೇಳಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

ಇದು ಅತ್ಯಂತ ದುಃಖಕರ ಘಟನೆ. ನಾವು ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button