ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಕವಿತಾ(35) ಎಂಬುವರು ಕಳೆದ ಫೆಬ್ರವರಿ 23ರಂದು ದಾವಣಗೆರೆ ಜಿಲ್ಲೆಯ ಆಲೂರು ಗ್ರಾಮದಿಂದ ಹರಿಹರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಪತಿಯ ಮನೆಯಲ್ಲೂ ಪತ್ತೆಯಾಗದೆ, ತವರು ಮನೆಗೂ ಬಾರದೆ ಇದ್ದಾಗ ಅವರ ಕುಟುಂಬದವರು ದಾಖಲಿಸಿದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಕವಿತಾ ಅವರ ಶವ ಸುಟ್ಟುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ತನಿಖೆ ತೀವ್ರಗೊಳಿಸಿರುವ ಪೊಲೀಸರು ಕುಂಚೂರು ಗ್ರಾಮದ ಸಲೀಂ ಮುನ್ನಾಖಾನ್ ಎಂಬುವವನನ್ನು ಬಂಧಿಸಿದ್ದು ಇದೊಂದು ಅನೈತಿಕ ಸಂಬಂಧದ ಪ್ರಕರಣ ಎಂಬುದು ಬಹಿರಂಗವಾಗಿದೆ.
ಹರಿಹರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಬಿದ್ದಿದ್ದ ಕವಿತಾ ತೆಲಿಗಿ ಗ್ರಾಮಕ್ಕೆ ಬಂದಿದ್ದರು. ಆಕೆಯನ್ನು ಆರೋಪಿ ಸಲೀಂ ತನ್ನ ಬೈಕ್ ನಲ್ಲಿ ಕುಂಚೂರಿನ ಕೆರೆಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಮೊಬೈಲ್ ಫೋನ್ ನಲ್ಲಿ ಮಾತನಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಸಿಟ್ಟಿಗೆದ್ದ ಸಲೀಂ ಕವಿತಾ ಅವರ ಕತ್ತು ಹಿಸುಕಿ ಸಾಯಿಸಿದ್ದ.
ಈ ವಿಷಯ ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಕೆರೆಯ ದಂಡೆಯಲ್ಲಿ ಕಟ್ಟಿಗೆ ಪೇರಿಸಿ ಆಕೆಯ ಶವ ಸುಟ್ಟು ಹಾಕಿ ವಾಪಸಾಗಿದ್ದ. ಅಲ್ಲಿ ನಡೆದಿದ್ದ ಘಟನೆಯನ್ನು ತಮ್ಮ ಆತ್ಮೀಯ ಸ್ನೇಹಿತನೊಂದಿಗೆ ಇತ್ತೀಚೆಗೆ ಹಂಚಿಕೊಂಡ ನಂತರ ಈ ವಿಷಯ ಬಹಿರಂಗವಾಗಿ ಆರೋಪಿ ಬಂಧನಕ್ಕೆ ನೆರವಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ