Belagavi NewsBelgaum NewsKannada NewsKarnataka NewsLatest

ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬಹುರಾಜ್ಯ ಸ್ಥಾನಮಾನ – ಸಂಸದ ಅಣ್ಣಾಸಾಹೇಬ ಜೊಲ್ಲೆ




ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬಹುರಾಜ್ಯ ಸ್ಥಾನಮಾನ ದೊರೆತಿದೆ. ಈ ಕುರಿತು ಕೇಂದ್ರ ಸರ್ಕಾರದ ಸಹಕಾರ ಇಲಾಖೆಯಿಂದ ಆದೇಶ ಪತ್ರ ಬಂದಿದೆ. ಇನ್ನುಮುಂದೆ ಮಹಾರಾ?ದ ಕೊಲ್ಹಾಪೂರ ಜಿಲ್ಲೆಯ ಕಾಗಲ್ ಮತ್ತು ಗಡಹಿಂಗ್ಲಜ್ ತಾಲೂಕುಗಳ ಕೆಲವು ಗ್ರಾಮಗಳು ಅಧಿಕೃತವಾಗಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ಸೇರ್ಪಡೆಗೊಂಡಿವೆ’ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಕಾರ್ಖಾನೆಯ ಸಭಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ’ನಿರಂತರ ಅನುಸರಣೆಯಿಂದಾಗಿ ಕಾರ್ಖಾನೆ ಅಲ್ಪಾವಧಿಯಲ್ಲಿ ಬಹುರಾಜ್ಯ ಸ್ಥಾನಮಾನ ಪಡೆದುಕೊಂಡಿದೆ. ಬಹುರಾಜ್ಯಕ್ಕೆ ಪರಿವರ್ತನೆಯಾದ ನಂತರ ಕಾಗಲ್ ತಾಲೂಕಿನ ಅರ್ಜುನಿ, ಲಿಂಗನೂರು, ಚಿಖಲಿ, ಗೊರಂಬೆ, ಶೆಂಡೂರು, ಶಂಕರವಾಡಿ, ವಂದೂರು, ಕರ್ನೂರು ಹಾಗೂ ಗಡಹಿಂಗ್ಲಜ್ ತಾಲೂಕಿನ ಮುತ್ನಾಳ್, ನಿಲಜಿ, ಹೆಬ್ಬಾಳ, ದುಂಡಗೆ, ಅವರನಾಳ ಗ್ರಾಮಗಳು ಕಾರ್ಖಾನೆ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ’ ಎಂದರು.
’ಇನ್ನು ಮುಂದೆ, ಈ ಮಹಾರಾಷ್ಟ್ರದ ಗ್ರಾಮಗಳು ಅಧಿಕೃತವಾಗಿ ಕಾರ್ಖಾನೆಯ ಕಾರ್ಯಕ್ಷೇತ್ರದಡಿಯಲ್ಲಿ ಬಂದ ಪರಿಣಾಮ ನೆರೆರಾಜ್ಯದಲ್ಲಿ ಜಮೀನು ಹೊಂದಿದ ರಾಜ್ಯದ ಗಡಿಭಾಗದ ಸದಸ್ಯರು ಇತರರಂತೆ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಲಿದ್ದಾರೆ. ಕಾರ್ಖಾನೆಯು ಬಹುರಾಜ್ಯಗಳ ಸ್ಥಾನಮಾನ ಹೊಂದಿನ್ವಯ ನಿರ್ದೇಶಕರ ಸಂಖ್ಯೆ ೧೬ ರಿಂದ ೨೧ ಕ್ಕೆ ಹೆಚ್ಚಾಗಲಿದೆ. ಕಬ್ಬು ನುರಿಸುವ ಸಾಮರ್ಥ್ಯವನ್ನು ೯ ಸಾವಿರ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸುವ ಮೂಲಕ, ಬರುವ ಹಂಗಾಮಿನಲ್ಲಿ ಕಬ್ಬು ನುರಿಸುವ ಗುರಿಯನ್ನು ಪೂರ್ಣಗೊಳಿಸಲಾಗುವುದು. ಎಥೆನಾಲ್ ಘಟಕ ಪೂರ್ಣಗೊಂಡಿದ್ದು ಉತ್ಪಾದನೆ ಶೀಘ್ರದಲ್ಲೆ ಪ್ರಾರಂಭವಾಗಲಿದೆ.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ’ಕಾರ್ಖಾನೆಯ ಅಭಿವೃದ್ಧಿ ನಿಟ್ಟಿನಲ್ಲಿ ವಿಸ್ತರೀಕರಣ ಮಾಡಿದ ಪರಿಣಾಮ ಹೆಚ್ಚಿನ ಕಬ್ಬು ಅಗತ್ಯವಿತ್ತು. ಇದನ್ನು ಮನಗಂಡು ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಈ ಕಾರ್ಖಾನೆಯನ್ನು ಬಹುರಾಜ್ಯ ದರ್ಜೆಗೇರಿಸಿದರು. ಇದರಿಂದ ಗಡಿಭಾಗದ ರೈತರಿಗೆ ಮತ್ತು ಕಬ್ಬು ಉತ್ಪಾದಕರಿಗೆ ಅನುಕೂಲವಾಗಲಿದೆ. ಕಾರ್ಖಾನೆಯ ಆರ್ಥಿಕ ವಹಿವಾಟು ಹೆಚ್ಚಾಗಲಿದ್ದು ಕಾರ್ಖಾನೆಯು ಸಾಲಮುಕ್ತವಾಗುವ ದಿನಗಳು ಸಮೀಪಿಸಿವೆ’ ಎಂದರು.
ಕಾರ್ಯಾಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಮಾತನಾಡಿ ’ಜೊಲ್ಲೆ ದಂಪತಿಯ ನೇತೃತ್ವದಲ್ಲಿ ಕಾರ್ಖಾನೆಯು ಉತ್ತರೋತ್ತರವಾಗಿ ಪ್ರಗತಿ ಸಾಧಿಸುತ್ತಿದೆ. ಬಹುರಾಜ್ಯ ದರ್ಜೆಯ ಸ್ಥಾನಮಾನದ ಜೊತೆಗೆ ಮಾದರಿ ಕಾರ್ಖಾನೆಯಾಗುವತ್ತ ದಾಪುಗಾಲು ಇಡುತ್ತಿದೆ’ ಎಂದರು. ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿ ’ಬಹುರಾಜ್ಯ ದರ್ಜೆಯಿಂದ ಅಂತರರಾಜ್ಯ ರೈತರಿಗೆ ಅನುಕೂಲವಾಗಲಿದೆ. ಕಾರ್ಖಾನೆಯ ಸಿಬ್ಬಂದಿ ಜವಾಬ್ದಾರಿ ಹೆಚ್ಚಾಗಿದೆ’ ಎಂದರು.
ಬಹುರಾಜ್ಯ ಸ್ಥಾನಮಾನದ ಹಿನ್ನೆಲೆಯಲ್ಲಿ ಸದಸ್ಯರು ಕಾರ್ಖಾನೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಉಪಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ಪಪ್ಪು ಪಾಟೀಲ, ಸಮಿತ ಸಾಸನೆ, ಮ್ಹಾಳಪ್ಪಾ ಪಿಸೂತ್ರೆ, ಪ್ರತಾಪ ಮೇತ್ರಾಣಿ, ಕಲ್ಲಪ್ಪಾ ನಾಯಿಕ, ಉಜ್ವಲಾ ಶಿಂಧೆ, ಮನಿಷಾ ರಾಂಗೋಳೆ, ಜಯಕುಮಾರ ಖೋತ, ಕಿರಣ ನಿಕಾಡೆ, ಅಮಿತ ರಣದಿವೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಕಾಶ ಶಿಂಧೆ, ವೈಭವ ರಾಂಗೋಳೆ, ರಾಜೇಂದ್ರ ಖರಾಬೆ, ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button