ಪ್ರಗತಿವಾಹಿನಿ ಸುದ್ದಿ; ರಾಯಚೂರು: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೋಂದಣಿ ಉಚಿತವಾಗಿದೆ. ಅರ್ಜಿ ಸಲ್ಲಿಕೆಗೆ ಹಣ ಪಡೆಯುವಂತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಲವು ಬಾರಿ ಸ್ಪಷ್ಟವಾಗಿ ತಿಳಿಸಿದ್ದರೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಕ್ರಮವಾಗಿ ಹಣ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಕ್ರಮವಾಗಿ ಹಣ ಪಡೆದು ಅರ್ಜಿ ಸಲ್ಲಿಕೆ ಮಾಡುತ್ತಿದ್ದ ಮೂರು ಖಾಸಗಿ ಸೈಬರ್ ಕೇಂದ್ರಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ 3 ಖಾಸಗಿ ಸೈಬರ್ ಕೇಂದ್ರಗಳು ಜನರಿಂದ ಹಣ ಪಡೆದು ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸುತ್ತಿದ್ದರು ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಾನ್ವಿ ತಹಶೀಲ್ದಾರ್ ಚಂದ್ರಕಾಂತ್ ನೇತೃತ್ವದ ಅಧಿಕಾರಿಗಳು ನಿನ್ನೆ ಸೈಬರ್ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಸರ್ಕಾರದ ಐಡಿ ಹೆಸರಲ್ಲಿ ಅಕ್ರಮವಾಗಿ ಹಣ ಪಡೆದು ಅರ್ಜಿ ಸಲ್ಲಿಸುತ್ತಿರುವುದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮೂರು ಸೈಬರ್ ಕೇಂದ್ರಗಳನ್ನು ಸೀಜ್ ಮಾಡಿದ ತಹಶೀಲ್ದಾರ್, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದರು. ಇದೀಗ ತಹಶೀಲ್ದಾರ್ ಚಂದ್ರಕಾಂತ್ ದೂರಿನ ಆಧಾರದ ಮೇಲೆ ಪೊಲೀಸರು 3 ಖಾಸಗಿ ಸೈಬರ್ ಕೇಂದ್ರಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ