ಪ್ರಗತಿವಾಹಿನಿ ಸುದ್ದಿ, ಕಲಬುರಗಿ: ಕೆಎಇ ಪರೀಕ್ಷಾ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ ಆರ್.ಡಿ. ಪಾಟೀಲ್ ಗೆ ಅಪಾರ್ಟ್ ಮೆಂಟ್ ಒಂದರಲ್ಲಿ ಆಶ್ರಯ ನೀಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಪಾರ್ಟ್ ಮೆಂಟ್ ಮಾಲೀಕ, ಶಹಾಪುರದ ಶಂಕರ್ ಗೌಡ ಯಾಳವಾರ್ ಹಾಗೂ ವ್ಯವಸ್ಥಾಪಕ ದಿಲೀಪ್ ಪವಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರ್.ಡಿ. ಪಾಟೀಲ್ ಪ್ರಮುಖ ಪ್ರಕರಣವೊಂದರ ಆರೋಪಿಯಾಗಿದ್ದು ಪೊಲೀಸರಿಗೆ ಬೇಕಾಗಿದ್ದವ. ಆತನಿಗೆ ಆಶ್ರಯ ನೀಡುವ ಮುನ್ನ ಆತನ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕಿತ್ತು ಎಂದು ಪೊಲೀಸರು ವಾದಿಸಿದ್ದಾರೆ.
ಬಂಧಿತರ ಪೈಕಿ ಅಪಾರ್ಟ್ ಮೆಂಟ್ ವ್ಯವಸ್ಥಾಪಕ ದಿಲೀಪ್ ಪವಾರ್ ಆರೋಪಿ ಪಾಟೀಲ್ ನಿಂದ 10 ಸಾವಿರ ರೂ. ಮುಂಗಡ ಹಣ ಪಡೆದು ಶಂಕರಗೌಡರಿಗೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಇಎ ಪರೀಕ್ಷೆ ಆಕ್ರಮದಲ್ಲಿ ಆರ್.ಡಿ. ಪಾಟೀಲ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆಗೆ ಮುಂದಾದಾಗ ಆತ, ಇದೇ ಅಪಾರ್ಟ್ ಮೆಂಟ್ ನಲ್ಲೆ ತಂಗಿದ್ದ. ನ. 5 ರಂದು ರಾತ್ರಿ 11 ಗಂಟೆಗೆ ಮಹಾಲಕ್ಷ್ಮೀ ಅಪಾರ್ಟ್ ಮೆಂಟ್ ಗೆ ಆಗಮಿಸಿ ರಾತ್ರಿ ಅಲ್ಲಿಯೇ ಅಡಗಿದ್ದ. ಮರು ದಿನ ಮಧ್ಯಾಹ್ನ ಪೊಲೀಸರು ತನ್ನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿರುವ ಮಾಹಿತಿ ಸಿಗುತ್ತಲೇ ಕಾಂಪೌಂಡ್ ಗೋಡೆ ಜಿಗಿದು ಪರಾರಿಯಾಗಿದ್ದ. ಈ ದೃಶ್ಯಾವಳಿಗಳು ಕಟ್ಟಡದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ