ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಬೆಳಗಾವಿ ಜಿಲ್ಲೆಯ ಖಾನಾಪುರ ಭಾಗದ ಎಲ್ಲಾ ರಸ್ತೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್. ಡಿ. ರೇವಣ್ಣ ಅವರು ಇಲ್ಲಿ ಇಂದು ತಿಳಿಸಿದರು.
ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಶಾಸಕಿ ಡಾ ಅಂಜಲಿ ಹೇಮಂತ್ ನಿಂಬಾಳ್ಕರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಖಾನಾಪುರ ಪಟ್ಟಣದಲ್ಲಿ ಮುಂದಿನ ಜನವರಿಯಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯಲಿರುವ ಶ್ರೀ ಲಕ್ಷ್ಮೀದೇವಿ ಜಾತ್ರೆಯ ವೇಳೆಗೆ ಈ ಭಾಗದ ವಿವಿಧ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಜಾತ್ರೆಗೆ ಆಗಮಿಸುವ ನಾಗರಿಕರು ಹಾಗೂ ಭಕ್ತರ ಅನುಕೂಲಕ್ಕಾಗಿ ಖಾನಾಪುರ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆಯ ಎರಡು ರಸ್ತೆಗಳ ಅಭಿವೃದ್ಧಿ ಕಮಗಾರಿಗಳನ್ನು ೩.೪೦ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಜಾತ್ರೆಗೆ ಮುನ್ನ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಅಲ್ಲದೆ ಕಲಘಟಗಿ ಕ್ಷೇತ್ರದ ಶಾಸಕ ಸಿ. ಎಂ. ನಿಂಬಣ್ಣನವರ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯ ಹೆದ್ದಾರಿ ೩೪ ರ ಧಾರವಾಡ-ಅಳ್ನಾವರ-ರಾಮನಗರ ರಸ್ತೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ಶುಲ್ಕ ಆಧಾರದಲ್ಲಿ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಬೈಲಗೊಂಗಲ ಕ್ಷೇತ್ರದ ಅಮಟೂರು-ಬೇವಿನಕೊಪ್ಪ-ಸಂಗೊಳ್ಳಿ ರಸ್ತೆ ವ್ಯಾಪ್ತಿಯಲ್ಲಿನ ಮಲಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ೪೦ ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ನೀಡಲಾಗಿದೆ ಎಂದು ಶಾಸಕ ಶಿವಾನಂದ್ ಮಹಾಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಸೇತುವೆ ಕಾಮಗಾರಿಯನ್ನು ಗುತ್ತಿಗೆದಾರರ ಸ್ವಂತ ವಿನ್ಯಾಸದಡಿಯಲ್ಲಿ ಟರ್ನ್ಕೀ ಆಧಾರದ ಮೇಲೆ ವಹಿಸಿರುವುದರಿಂದ ಸರ್ವೇಕ್ಷಣಾ ಕಾರ್ಯ, ಮಣ್ಣು ಪರೀಕ್ಷೆ ಹಾಗೂ ಇತರೆ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ನುಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ