Kannada NewsKarnataka NewsNationalPolitics

*ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ : ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ .ಡಿ.ಕುಮಾರಸ್ವಾಮಿ ಅವರು ಇಂದು ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿ ಬಳಿ ಗುಡ್ಡ ಕುಸಿದಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಹೆಚ್‌ಡಿಕೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು. ಇನ್ನು ಮಳೆ, ನೆರೆ ಪರಿಸ್ಥಿತಿ, ಹಾನಿ, ರಕ್ಷಣಾ ಕಾರ್ಯಾಚರಣೆ ಇತ್ಯಾದಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಅವರು ಮಾಹಿತಿ ಪಡೆದುಕೊಂಡರು. ಅಲ್ಲದೇ ತ್ವರಿತಗತಿಯಲ್ಲಿ ಕಾರ್ಯಾಚರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುಡ್ಡ ಕುಸಿತದ ಭೀಕರತೆಯನ್ನು ಕುಮಾರಸ್ವಾಮಿ ಅವರು ಖುದ್ದು ಕೆಸರಿನಲ್ಲಿ ಓಡಾಡಿ ಗಮನಹರಿಸಿದರು. ಈ ವೇಳೆ ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಹಲವರಿದ್ದರು.

ಮೃತರ ಕುಟುಂಬಗಳ ಜತೆ ಸರ್ಕಾರ ನಿಲ್ಲಬೇಕು ಎಂದ ಕೇಂದ್ರ ಸಚಿವರು

ರಾಜ್ಯ ಸರಕಾರವು ಗುಡ್ಡ ಕುಸಿತದಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳ ಜತೆ ನಿಲ್ಲಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಸ್ಥಳದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಪರಿಹಾರ ಕಾರ್ಯದಲ್ಲಿ ರಾಜಕರಣ ಮಾಡಬಾರದು. ಕೇಂದ್ರ ಸರಕಾರವು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ಕೆಲಸವನ್ನು ಮಾಡಬೇಕು. ರಾಜಕೀಯದಿಂದ ಉಪಯೋಗ ಇಲ್ಲ. ನೊಂದ ಕುಟುಂಬಗಳಿಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಡಬೇಕು ಹಾಗೂ ಮನೆಗಳನ್ನು ಕಳೆದುಕೊಂಡವರಿಗೆ ಮರು ವಸತಿ ಕಲ್ಪಿಸಬೇಕು ಎಂದು ಎಂದರು.

ಒಂದೇ ಕುಟುಂಬದಲ್ಲಿ ಐವರು, ಇನ್ನೂ ಇಬ್ಬರು ಈ ದುರಂತದಲ್ಲಿ ಜೀವ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಎಲ್ಲರೂ ಶ್ರಮ ಜೀವಿಗಳು. ಇಬ್ಬರು ಮಕ್ಕಳು ಬಲಿಯಾಗಿರುವುದು ದುಃಖ ತಂದಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಯಾಕೆ ಈ ದುರಂತ ಸಂಭವಿಸಿತು? ಅದಕ್ಕೆ ಕಾರಣಗಳು ಏನು? ಕಾಮಗಾರಿಯಲ್ಲಿ ಸಮಸ್ಯೆ ಇದೆಯಾ? ಎಂಬ ಪರಿಶೀಲನೆ ನಡೆಸಲಾಗುವುದು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗುವುದು. ಮೊದಲು ಪರಿಹಾರ ಕಾರ್ಯ ಮುಗಿಯಲಿ. ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಅವರು ಮನವಿ ಮಾಡಿದರು.

ಈ ಘಟನೆ ಪರಿಹಾರ ಕಾರ್ಯ ವಿಳಂಬವಾಗಿ ಸಾಗುತ್ತಿದೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಈ ಬಗ್ಗೆ ನಾನು ಅಧಿಕಾರಿಗಳಿಗೆ ದೋಷ ಕೊಡಲಾರೆ. ಅವರು ಮಳೆಯ ನಡುವೆಯೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ದುರಂತ ಊಹೆಗೂ ನಿಲುಕದ್ದು. ಜನತೆಗೆ ಮೂಲಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು.

ರಾಜ್ಯ ಸರಕಾರದ ಯಾವೊಬ್ಬ ಸಚಿವರು, ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡದಿರುವ ಬಗ್ಗೆ ಸ್ಥಳೀಯರಿಗೆ ಬೇಸರವಿದೆ ಎಂದು ಮಾಧ್ಯಮಗಳು ಗಮನ ಸೆಳೆದಾಗ; ಈ ಬಗ್ಗೆ ನಾನು ಚರ್ಚೆ ನಡೆಸಲಾರೆ. ನಾನು ಬಂದಿದ್ದೇನೆ. ಕೇಂದ್ರದಿಂದ ಏನು ಸಹಾಯ ಮಾಡಿಸಬಹುದೋ ಅದನ್ನು ಮಾಡಿಸುತ್ತೇನೆ. ಇಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳದ್ದು ಜವಾಬ್ದಾರಿ ಇದೆ ಎಂದು ಉತ್ತರಿಸಿದರು.

ಭಾರೀ ಮಳೆಯಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು, ಕೊಡಗು ಸೇರಿ ಕರಾವಳಿ ಮಲೆನಾಡು ಭಾಗದಲ್ಲಿ ಕೃಷಿ ಬೆಳೆ ನಷ್ಟವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ನಾಯಕ ಸೂರಜ್ ನಾಯಕ್ ಸೋನಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಜೆಡಿಎಸ್ ಮುಖಂಡರು ಸಚಿವರ ಜತೆಯಲ್ಲಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button