ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಹಿಸಿದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು.
ಚುನಾವಣೆ ಪ್ರಣಾಳಿಕೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ವಾಗ್ದಾನ ನೀಡಿದಾಗ ವಿರೋಧ ಪಕ್ಷಗಳು ಇದು ಕೇವಲ ಚುನಾವಣೆ ಗಿಮಿಕ್ ಎಂದಿದ್ದವು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಯೋಜನೆ ಜಾರಿ ಮಾಡಿ ರಾಜ್ಯದ ಅರ್ಹ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಜಮಾ ಮಾಡಲಾಗುತ್ತಿದೆ. ಇದುವರೆಗೂ ಜೂನ್ ಮಾಹೆಯವರೆಗಿನ ಗೃಹಲಕ್ಷ್ಮೀ ಹಣವನ್ನು ಜಮಾ ಮಾಡಲಾಗಿದೆ. ಬಾಕಿ ಇರುವ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವನ್ನು 5 ರಿಂದ 10 ದಿನದೊಳಗೆ ಜಮಾ ಮಾಡುವುದಾಗಿ ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ಇದುವರೆಗೂ ರೂ.26,260 ಕೋಟಿ ಹಣ ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಹಣ, ದೇಶದ ಸಣ್ಣ ಪುಟ್ಟ ರಾಜ್ಯಗಳ ವಾರ್ಷಿಕ ಆಯವ್ಯಯಕ್ಕೆ ಸಮನಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ರೀಲ್ಸ್ ಮಾಡಿ: ಬಹುಮಾನ ಗೆಲ್ಲಿ
ಗೃಹಲಕ್ಷ್ಮಿ ಯೋಜನೆ ಲಾಭ ಪಡೆದ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮೂಲಕ ಮಾಹಿತಿ ನೀಡಬಹುದು. ಫೇಸ್ಬುಕ್, ಯುಟ್ಯೂಬ್, ಇನ್ಸ್ಟಾಗ್ರಾಂ ಮೂಲಕ ಅಭಿಪ್ರಾಯವನ್ನು ರೀಲ್ಸ್ ವಿಡಿಯೋ ಮೂಲಕ ವ್ಯಕ್ತಪಡಿಸಲು ಕೋರಿದ್ದು, ಅತ್ಯುತ್ತಮ ವಿಡಿಯೋ ರೀಲ್ಸ್ ಗೆ ಬಹುಮಾನ ನೀಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದರು.
ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿ
ಬಡವರ ಮಕ್ಕಳಿಗೂ ಕೂಡ ಬಾಲ್ಯದಲ್ಲಿ ಉತ್ತಮ ಶಿಕ್ಷಣ ಸಿಗಬೇಕು, ಖಾಸಗಿ ನರ್ಸರಿಗಳ ಹಾವಳಿ ತಡೆಗಟ್ಟಬೇಕು ಎಂಬ ಉದ್ದೇಶದಿಂದ ಸರ್ಕಾರವೇ ರಾಜ್ಯದಲ್ಲಿ ಅಂಗನವಾಡಿಗಳಲ್ಲಿಯೇ ಎಲ್ಕೆಜಿ, ಯುಕೆಜಿ ಶಿಕ್ಷಣ ನೀಡಲು ಸರ್ಕಾರಿ ಮಾಂಟೆಸ್ಸರಿ ಪ್ರಾರಂಭ ಮಾಡಬೇಕು ಎಂಬ ದಿಟ್ಟ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಇದಕ್ಕೆ ನೇಮಕಗೊಳ್ಳುವವರಿಗೆ ಪಿಯುಸಿಯನ್ನು ಕನಿಷ್ಠ ವಿದ್ಯಾರ್ಹತೆ ಆಗಿ ನಿಗದಿಪಡಿಸಿದೆ. ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿಧರ ಮಹಿಳೆಯರು ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂದು ಸಚಿವರು ಹೇಳಿದರು.
ಆಹಾರ ಅಕ್ರಮ ಸಾಗಾಣಿಕೆಗೆ ಕಠಿಣ ಕ್ರಮ
ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಆರೋಗ್ಯವಂತರಾಗಲಿ ಎಂಬ ಉದ್ದೇಶದಿಂದ ಇಲಾಖೆಯು ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಠಿಕ ಆಹಾರವನ್ನು ನೇರವಾಗಿ ಅವರ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈ ನಡುವೆ, ರಾಜ್ಯದ ವಿವಿಧೆಡೆ ಈ ಆಹಾರ ಅಕ್ರಮವಾಗಿ ಬೇರೆಯವರ ಮನೆ ಸೇರುತ್ತಿದೆ ಎಂಬ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಯಾವುದೇ ಕಾರಣಕ್ಕೂ ಇಂತಹದನ್ನು ನಾನು ಸಹಿಸುವುದಿಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ