Sports

*ಟೆಸ್ಟ್ ನಲ್ಲಿ ಭಾರತ “ವೈಟ್ ವಾಶ್”: ಕೀವಿಸ್ ವಿರುದ್ಧ ರೋಹಿತ್ ಪಡೆಗೆ ಮುಖಭಂಗ*

ಪ್ರಗತಿವಾಹಿನಿ ಸುದ್ದಿ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 25 ರನ್ ಗಳಿಂದ ಸೋಲುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಸ್ವದೇಶಿ ಸರಣಿ ವೈಟ್‌ವಾಶ್ ಆಗಿದೆ.

ಐದು ದಿನಗಳ ಕಾಲ ನಡೆಯಬೇಕಿದ್ದ ಪಂದ್ಯದಲ್ಲಿ ಭಾರತ ತನ್ನ ದುರ್ಬಲ ಆಟ ಪ್ರದರ್ಶಿಸಿದ ಕಾರಣ, ಪಂದ್ಯ ಮುಗಿಯಲು ಇನ್ನೆರಡು ದಿನ ಬಾಕಿಯಿರುವಂತೆಯೇ ಸೋಲೊಪ್ಪಿಕೊಂಡಿದೆ.

ಮೊದಲ ಇನಿಂಗ್ಸ್ ನಲ್ಲಿ 235 ರನ್ ಗಳಿಸಿದ್ದ ನ್ಯೂಜಿಲೆಂಡ್ ಗೆ ಉತ್ತರವಾಗಿ ಭಾರತ, ತನ್ನ ಮೊದಲ ಇನಿಂಗ್ಸ್‌ ನಲ್ಲಿ ಕೇವಲ 263 ರನ್ ಗಳಿಗೆ ಆಲೌಟ್ ಆಗಿತ್ತು. ತದನಂತರ, ನ್ಯೂಜಿಲೆಂಡ್ ತಂಡ ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ 174 ರನ್ ಪೇರಿಸಿ, ಭಾರತಕ್ಕೆ ಗೆಲುವಿಗಾಗಿ 146 ರನ್ ಗಳ ಗುರಿಯನ್ನು ನೀಡಿತ್ತು.

ಈ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಕಂಡಿತು. ಈ ಮೂಲಕ 121 ರನ್ ಗಳಿಗೆ ಸರ್ವಪತನಗೊಳ್ಳುವ ಮೂಲಕ ತವರಿನಲ್ಲಿ ಹೀನಾಯ ಸೋಲು ಅನುಭವಿಸಿತು.

ರೋಹಿತ್ ಪಡೆಯ ಈ ಸೋಲಿನ ಮೂಲಕ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡ 58.33 ಪಾಯಿಂಟ್ ಗಳ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 62.50 ಪಾಯಿಂಟ್ ಗಳ ಮೂಲಕ ಅಗ್ರಸ್ಥಾನಕ್ಕೇರಿದೆ.

2000ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು ಕೊನೆಯ ಬಾರಿಗೆ ಕ್ಲೀನ್ ಸ್ವೀಪ್‌ ಆಗಿತ್ತು. 2000ರ ಫೆಬ್ರವರಿ ಮಾರ್ಚ್ ನಲ್ಲಿ ನಡೆದಿದ್ದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0 ಅಂತರದಿಂದ ಗೆಲುವು ಸಾಧಿಸಿತ್ತು. ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತವು ನಾಲ್ಕು ವಿಕೆಟ್ ಗಳಿಂದ ಸೋಲನುಭವಿಸಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button