Belagavi NewsBelgaum NewsKannada NewsKarnataka NewsLatest

ಹಿಂದೂ ರಾಷ್ಟ್ರ, ಹಿಂದೂ ಧರ್ಮ ರಕ್ಷಣೆಗೆ ಹೋರಾಡಿದ ಧೀರ ಸಂಭಾಜಿ ಮಹಾರಾಜ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ನಿಲಜಿಯಲ್ಲಿ ಧರ್ಮವೀರ ಸಂಭಾಜಿ ಮೂರ್ತಿ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತದ ಇತಿಹಾಸದಲ್ಲಿ ಅತ್ಯಂತ ಶೌರ್ಯ, ಧೈರ್ಯ, ಸ್ವಾಭಿಮಾನ, ಸಂಸ್ಕೃತಿ, ಸಂಸ್ಕಾರ ಮತ್ತು ಸಾಹಸಗಳಿಗೆ ಹೆಸರಾದ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಕಥೆ ಕೇಳುತ್ತಿದ್ದರೆ ನಮ್ಮಲ್ಲಿ ಉತ್ಸಾಹ ಉಕ್ಕಿ ಹರಿಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಭಾನುವಾರ ಸಂಜೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ನಿಲಜಿ ಗ್ರಾಮದಲ್ಲಿ ನೂತನ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿಯ ಪ್ರಾಣ ಪ್ರತಿಷ್ಠಾಪಣೆ ಹಾಗೂ ಮೂರ್ತಿಯ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಶಿವಾಜಿಯ ಹಿರಿಯ ಮಗ ಸಂಭಾಜಿ ಮಹಾರಾಜ ಬಾಲ್ಯದಿಂದಲೇ ಪಟ್ಟ ಕಷ್ಟ ಕಲ್ಪನಾತೀತ. ಅವರ ಆಯುಷ್ಯವೂ ದೊಡ್ಡದೇನಿಲ್ಲ. ಆದಾಗ್ಯ ತಂದೆಯ ಹಾದಿಯಲ್ಲೇ ನಡೆಯುವ ಮೂಲಕ ಹಿಂದೂ ರಾಷ್ಟ್ರ, ಹಿಂದೂ ಧರ್ಮ ರಕ್ಷಣೆಗೆ ಹೋರಾಡಿದ ಧೀರ ಅವರು. ಅಂತಹ ಮಹಾನ್ ವ್ಯಕ್ತಿಯ ಮೂರ್ತಿ ಗ್ರಾಮದಲ್ಲಿ ಪ್ರತಿಷ್ಠಾಪನೆಯಾಗಿರುವುದು ಹೆಮ್ಮೆಯ ಸಂಗತಿ. ಮುಂದಿನ ಪೀಳಿಗೆಗೆ ಅವರ ಆದರ್ಶ ಮಾರ್ಗದರ್ಶಕವಾಗಲಿ ಎಂದು ಸಚಿವರು ಹೇಳಿದರು. 

ರಾಜಹಂಸಗಡದಲ್ಲಿ 2 ವರ್ಷದ ಹಿಂದೆ 50 ಲಕ್ಷ ರೂ.ಗಳಿಗಿಂತ ಹೆಚ್ಚು ವೆಚ್ಚ ಮಾಡಿ ಸ್ಥಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲಷ್ಟೇ ಅಲ್ಲ, ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಇಂದು ವಿಶ್ವದ ಬೇರೆ ಬೇರೆ ಕಡೆಗಳಿಂದ ರಾಜಹಂಸಗಡ ನೋಡಲು, ಮಹಾರಾಜರ ಮೂರ್ತಿ ನೋಡಲು ಜನರು ಬರುತ್ತಿದ್ದಾರೆ. ​ಮಹಾರಾಜರ ಇತಿಹಾಸ, ಸಂಸ್ಕೃತಿಯನ್ನು ಅಜರಾಮರಗೊಳಿಸಲು ನಾವೆಲ್ಲ ಸೇರಿ ಕೆಲಸ ಮಾಡಬೇಕಿದೆ. ನಿಲಜಿ ಗ್ರಾಮ ಇಂದು ಸಂಪೂರ್ಣ ಮಂತ್ರಮುಗ್ದವಾಗಿದ್ದು, ಇಂದೇ ಗ್ರಾಮದಲ್ಲಿ ದೀಪಾವಳಿ ಹಬ್ಬದಂತೆ ಘೋಚರಿಸುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಮ್ಮ ಸರಕಾರ ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡಲು ಕ್ರಮ ತೆಗೆದುಕೊಂಡಿದೆ. ಪ್ರತಿ ಮಹಿಳೆಗೆ ಈವರೆಗೆ 14 ಕಂತುಗಳಲ್ಲಿ ತಲಾ 2 ಸಾವಿರ ರೂ ನೀಡುವ ಮೂಲಕ ಕೊಟ್ಯಂತರ ಜನರಿಗೆ ನೆರವು ನೀಡಲಾಗಿದೆ. ಸಾವಿರಾರು ಮಹಿಳೆಯರು ಈ ಹಣದಲ್ಲಿ ವಿವಿಧ ಉದ್ಯಮ, ಉದ್ಯೋಗ ಆರಂಭಿಸುವ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದು ನನಗೆ ಬಹಳ ಸಮಾಧಾನ, ನೆಮ್ಮದಿ ತಂದಿದೆ ಎಂದು ಹೆಬ್ಬಾಳಕರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಲಜಿ ಅಲೌಕಿಕ ಮಂದಿರದ ಶ್ರೀ ಶಿವಾನಂದ ಗುರೂಜಿ, ರಮಾಕಾಂತ ಕೊಂಡೂಸ್ಕರ್, ಸುದರ್ಶನ ಶಿಂಧೆ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಜಯವಂತ ಬಾಳೇಕುಂದ್ರಿ, ಬಾಳು ದೇಸೂರಕರ್, ಸಿ.ಕೆ.ಪಾಟೀಲ, ಸತೀಶ್ ಗನಗುಟ್ಕರ್, ನಾಗೇಶ್ ದೇಸಾಯಿ, ಭರತ್ ಪಾಟೀಲ, ಸಿ.ಪಿ.ಆಯ್ ಕಲ್ಯಾಣಶೆಟ್ಟಿ, ವಿನಂತಿ ಗೊಮನಾಚೆ, ಮನೋಹರ್ ಬೆಳಗಾಂವ್ಕರ್, ಚಂದ್ರಕಾಂತ ಕೊಂಡೂಸ್ಕರ್, ರಾಘವೇಂದ್ರ ಕೊಚೇರಿ, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button