ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಿಕ್ಷಣಕ್ಕೆ ಅತಿಯಾದ ಮಹತ್ವವಿರುವ ಈಗಿನ ದಿನಮಾನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಬೆಂಬಲ ನೀಡಿ ಅವರನ್ನು ಶಿಕ್ಷಣವಂತರನ್ನಾಗಿ ಮಾಡಿದರೆ ಅವರು ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬಲ್ಲರು ಎಂದು ಬೆಳಗಾವಿಯ ಉಪ ಆಯುಕ್ತಾಧಿಕಾರಿ ಡಾ. ಕವಿತಾ ಯೋಗಪ್ಪನವರ ಹೇಳಿದರು.
ಬೆಳಗಾವಿಯ ಅಂಗಡಿ ಇಂಟರನ್ಯಾಷನಲ್ ಸ್ಕೂಲಿನಲ್ಲಿ ಶುಕ್ರವಾರ ನಡೆದ 4ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂದೆ ತಾಯಿಗಳು ಮಕ್ಕಳಿಗೆ ಮೊದಲ ಗುರು. ಅವರು ಮಕ್ಕಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸಲು ಅವರಿಗೆ ಒಳ್ಳೆಯ ಹಾಗೂ ಕೆಟ್ಟ ಅಭ್ಯಾಸಗಳ ಪರಿಣಾಮಗಳ ಕುರಿತು ಮನೆಯಲ್ಲಿ ಹೇಳಿಕೊಡಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಶ್ರಮವಹಿಸುವಂತೆ ಅವರನ್ನು ಪ್ರೇರೇಪಿಸಬೇಕು. ವಿದ್ಯಾರ್ಥಿಗಳು ಸಾಧನೆ ಮಾಡಿ ಗುರಿ ಮುಟ್ಟಲು ಶ್ರಮವಹಿಸುವುದರ ಮೂಲಕ ತಂದೆ ತಾಯಿಗಳಿಗೆ, ತಾವು ಕಲಿತ ಶಾಲೆಗೆ ಹಾಗೂ ದೇಶಕ್ಕೆ ಗೌರವವನ್ನು ತಂದು ಹೆಮ್ಮೆ ಪಡುವಂತೆ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಆದುದರಿಂದ ಪಾಲಕರು ಮಕ್ಕಳಿಗೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳ ಸಫಲ ಜೀವನದಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿ ಜೀವನವು ಸಫಲವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಚೇರಮನ್ ಹಾಗೂ ಸಂಸದ ಸುರೇಶ ಅಂಗಡಿ, ಉಪಾಧ್ಯಕ್ಷೆ ಮಂಗಲ ಅಂಗಡಿ, ಶ್ರದ್ಧಾ ಶೆಟ್ಟರ್, ಆಡಳಿತಾಧಿಕಾರಿ ರಾಜು ಜೋಶಿ, ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ, ಗಿರೀಶ ಕುಲಕರ್ಣಿ, ವಿನಾಯಕ ಜ್ಯೋತಿ, ಸುಶಾಂತ ಪುರಾಣಿಕಮಠ, ಮಹಾದೇವ ಶಿರಗಾಂವಕರ, ಶರದ ಪಾಟೀಲ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ