ಖಾನಾಪುರ ತಾಲ್ಲೂಕಿನಲ್ಲಿ ಇಡೀ ದಿನ ಬಿಡದೇ ಸುರಿದ ಜಡಿಮಳೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಇಡೀ ದಿನ ಜಡಿಮಳೆ ಬಿಟ್ಟೂ ಬಿಡದೇ ಸುರಿಯಿತು. ಪಶ್ಚಿಮ ಘಟ್ಟ ಪ್ರದೇಶದ ಕಣಕುಂಬಿ, ಭೀಮಗಡ, ಲೋಂಡಾ, ನಾಗರಗಾಳಿ ಗುಂಜಿ ಮತ್ತು ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ದಿನವಿಡೀ ಸತತಧಾರೆ ಮುಂದುವರೆದಿದೆ. ಪಟ್ಟಣದಲ್ಲೂ ಮಧ್ಯಾಹ್ನ ಎರಡು ತಾಸುಗಳ ಕಾಲ ಸತತವಾಗಿ ದಪ್ಪ ಹನಿಗಳೊಂದಿಗೆ ಜೋರಾದ ಮಳೆ ಸುರಿದಿದ್ದರಿಂದ ರಸ್ತೆ ಹಾಗ ಚರಂಡಿಗಳು ನೀರಿನಿಂದ ತುಂಬಿ ಹರಿದಿವೆ.
ತಾಲ್ಲೂಕಿನ ಕರಂಬಳ, ಲಾಲವಾಡಿ, ಹೆಬ್ಬಾಳ, ಕಾಪೋಲಿ, ಹಲಸಾಲ, ಲೋಂಡಾ, ಗುಂಜಿ, ಹೆಮ್ಮಡಗಾ, ಶಿರೋಲಿ, ನೇರಸಾ ಹಾಗೂ ಸುತ್ತಲಿನ ಭಾಗದಲ್ಲಿ ಇಡೀ ದಿನ ಮಳೆಯ ಆರ್ಭಟ ಮುಂದುವರೆದಿದೆ. ದೇವಲತ್ತಿ, ಲೋಕೋಳಿ, ಪಾರಿಶ್ವಾಡ, ಇಟಗಿ, ಗಂದಿಗವಾಡ, ಬೀಡಿ, ಮಂಗೇನಕೊಪ್ಪ, ಕಕ್ಕೇರಿ, ಭುರಣಕಿ ಹಾಗೂ ಸುತ್ತಲಿನ ಭಾಗದಲ್ಲೂ ಮಳೆ ಸುರಿದಿದ್ದರಿಂದ ಕೃಷಿ ಭೂಮಿಗಳಲ್ಲಿ ನೀರು ನಿಂತಿದೆ. ಸತತಧಾರೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ಜನಜೀವನದಲ್ಲಿ ವ್ಯತ್ಯಯ ಉಂಟಾಗಿದೆ. ತಾಲ್ಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲೂ ತೊಂದರೆ ಉಂಟಾಗಿದೆ. ಹಲವೆಡೆ ವಿದ್ಯುತ್ ಕಂಬಗಳು, ಮರಗಳು, ಗಿಡದ ರೆಂಬೆ-ಕೊಂಬೆಗಳು ಧರೆಗುರುಳಿ ರಸ್ತೆಗಳು ಬಂದ್ ಆಗಿವೆ.
ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ, ಮಹದಾಯಿ ನದಿಗಳು ಮತ್ತು ಕಳಸಾ-ಭಂಡೂರಿ, ಅಲಾತ್ರಿ, ಮಂಗೇತ್ರಿ, ಪಣಸೂರಿ, ಕೋಟ್ನಿ, ಬೈಲ್, ಕುಂಬಾರ, ನಿಟ್ಟೂರ ಹಳ್ಳಗಳಲ್ಲಿ ನೀರಿನ ಸಂಗ್ರಹ ವೃದ್ಧಿಸಿದ್ದರಿಂದ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ. ಭೀಮಗಡ ಅರಣ್ಯದಲ್ಲಿ ಸತತಧಾರೆಯ ಪರಿಣಾಮ ನೇರಸಾ-ಗವ್ವಾಳಿ, ಹೆಮ್ಮಡಗಾ-ದೇಗಾಂವ, ಹೆಮ್ಮಡಗಾ-ತಳೇವಾಡಿ, ಚಿಕಲೆ-ಅಮಗಾಂವ ಮತ್ತು ಚಿಕಲೆ-ಪಾರವಾಡ ಗ್ರಾಮಗಳ ಮಾರ್ಗಮಧ್ಯದ ಜಲಮೂಲಗಳಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಈ ಭಾಗದಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ನಿರ್ಮಾಣ ಹಂತದಲ್ಲಿರುವ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯ ಕುಸಮಳಿ ಬ್ರಿಜ್ ಕಾಮಗಾರಿ ಇನ್ನೂ ಮುಗಿಯದ ಕಾರಣ ಬೆಳಗಾವಿಯಿಂದ ಗೋವಾ ಕಡೆಗೆ ಸಾಗುವ ವಾಹನಗಳಿಗೆ ಬೈಲೂರು, ಹಬ್ಬನಹಟ್ಟಿ ಮಾರ್ಗವಾಗಿ ಅವಕಾಶ ಕಲ್ಪಿಸಲಾಗಿತ್ತು. ಮಂಗಳವಾರ ಮಧ್ಯಾಹ್ನದಿಂದ ಹಬ್ಬನಹಟ್ಟಿ ಬಳಿಯ ಮಲಪ್ರಭಾ ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದೆ. ಪರಿಣಾಮ ಚೋರ್ಲಾ ಮಾರ್ಗದ ಗೋವಾ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಬ್ಬನಹಟ್ಟಿ ಗ್ರಾಮದ ಬಳಿಯ ಆಂಜನೇಯ ದೇಗುಲ ಮತ್ತು ಇಟಗಿ ಬಳಿಯ ಮರುಳಶಂಕರ ದೇವಾಲಯಗಳು ಮಲಪ್ರಭಾ ನದಿಯಲ್ಲಿ ಜಲಾವೃತಗೊಂಡಿವೆ. ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ನದಿಯಲ್ಲಿ ಇಳಿಯದಂತೆ ತಾಲ್ಲೂಕು ಆಡಳಿತ ಸಾರ್ವಜನಿಕರನ್ನು ಎಚ್ಚರಿಸಿದೆ. ಮಳೆಯಿಂದಾಗಿ ಇದುವರೆಗೂ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಮಂಗಳವಾರದವರೆಗೆ ಕಣಕುಂಬಿಯಲ್ಲಿ 4.5 ಸೆಂ.ಮೀ, ಜಾಂಬೋಟಿಯಲ್ಲಿ 3.8 ಸೆಂ.ಮೀ, ನಾಗರಗಾಳಿ, ಲೋಂಡಾದಲ್ಲಿ 3.2 ಸೆಂ.ಮೀ ಮತ್ತು ಖಾನಾಪುರ, ಅಸೋಗಾ ಭಾಗದಲ್ಲಿ 5 ಸೆಂ.ಮೀ ಮತ್ತು ಕಕ್ಕೇರಿ, ಬೀಡಿಯಲ್ಲಿ 2.2 ಸೆಂ.ಮೀ ಮಳೆಯಾಗಿದೆ.