
ಪ್ರಗತಿವಾಹಿನಿ ಸುದ್ದಿ: ವರದಕ್ಷಿಣೆ ಕಿರುಕುಳಕ್ಕೆ ನೊಂದು ಬೇಸತ್ತ ಮಹಿಳೆ ತನ್ನ ದೇಹದ ಮೇಲೆಯೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಾಗ್ ಪತ್ ನಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಮನಿಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸಾವಿಗೂ ಮುನ್ನ ಮಹಿಳೆ ತನ್ನ ಕಾಲು, ಹೊಟ್ಟೆ ಹಾಗೂ ತೋಳಿನ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ತನ್ನ ಸಾವಿಗೆ ತನ್ನ ಪತಿ, ಅತ್ತೆಯೇ ಕಾರಣ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದು, ಅದರಲ್ಲಿಯೂ ತನ್ನ ಪತಿ ಹಾಗೂ ಅತ್ತೆ ನೀಡುತ್ತಿದ್ದ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ೨೦೨೩ರಲ್ಲಿ ನೊಯ್ಡಾ ಮೂಲದ ನಿವಾಸಿ ಕುಂದನ್ ಎಂಬುವರನ್ನು ವಿವಾಹವಾಗಿದ್ದು, ಮದುವೆ ವೇಳೆ ತನ್ನ ತಂದೆ-ತಾಯಿ 20 ಲಕ್ಷ ಹಣ ಹಾಗೂ ಬುಲೆಟ್ ಬೈಕ್ ವರದಕ್ಷಿಣೆಯಾಗಿ ಕೊಟ್ಟಿದ್ದಾರೆ. ಆದಾಗ್ಯೂ ಪತಿ ಹಾಗೂ ಅತ್ತೆ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಇನ್ನಷ್ಟು ಹಣಕ್ಕಾಗಿ ತನ್ನ ತಂದೆ-ತಾಯಿ, ಸಹೋದರನನ್ನು ಪೀಡಿಸುತ್ತಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.
ಪತಿ ಹಾಗೂ ಅತ್ತೆ ತನಗೆ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೇ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಅವರ ಬೆದರಿಕೆಗೆ ಹಿಂಸೆಗೆ ಬಗ್ಗದಿದ್ದಾಗ ನನಗೆ ಕರೆಂಟ್ ಶಾಕ್ ಕೊಟ್ಟು ಸಾಯಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಿರುಕುಳದಿಂದ ನೊಂದ ಮನಿಷಾ ವಿಚ್ಛೇದನದ ಬಗ್ಗೆಯೂ ಯೋಚಿಸಿದ್ದರು. ಆದರೆ ಈಗ ಮೈಮೇಲೆ ಡೇತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.