
ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗದ ಜಿಲ್ಲಾಸ್ಪತ್ರೆ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ ಪ್ರಕರಣ ಹೊಸ ತಿರುವು ಪಡೆದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರಿಗೆ ತಾಯಿಯೇ ಕಂದಮ್ಮನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಹೆತ್ತ ತಾಯಿಯೇ ತನ್ನ ಒಂದು ದಿನದ ಮಗುವನ್ನು ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಕೊಲೆ ಮಾಡಿರುವ ಆರೋಪಿ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ಆಸ್ಪತ್ರೆಯ ಹೆರಿಗೆ ವಾರ್ಡ್ ಗೆ ದಾಖಲಾಗಿದ್ದ ಶೈಲಾ ದಂಪತಿ ಮೇಲೆ ಮೊದಲೇ ಅನುಮಾನ ಬಂದಿತ್ತು. ಆದರೆ ದಂಪತಿ ಮಗು ತಮ್ಮದಲ್ಲ ಎಂದಿದ್ದರು. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಿ ವಿಚಾರಣೆ ನಡೆಸಿದಾಗ ಶೈಲಾಳೇ ಮಗು ಕೊಂದಿರುವುದು ಬೆಳಕಿಗೆ ಬಂದಿದೆ.
ಶೈಲಾಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ನಾಲ್ಕು ವರ್ಷಗಳ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆಯೂ ಆಗಿದೆ. ಆದಾಗ್ಯೂ ಶೈಲಾ ಗರ್ಭಿಣಿಯಾಗಿದ್ದರು. ಈ ವಿಚಾರವನ್ನು ಕುಟುಂಬದವರಿಂದ ಮುಚ್ಚಿಟ್ಟಿದ್ದರು. ತನಗೆ ಥೈರಾಯ್ಡ್ ಇದೆ ಎಂದು ಹೇಳಿ ಅದನ್ನೇ ನೆಪ ಮಾಡಿಕೊಂಡು ಆಸ್ಪತ್ರೆಗೆ ಹೋಗಿ ಬಂದು ಮಾಡುತ್ತಿದ್ದರು. ಆ.16ರಂದು ಶೈಲಾ ನಾದಿನಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದರು. ಈ ವೇಳೆ ಆಸ್ಪತ್ರೆಗೆ ನೋಡಲು ಬಂದ ಶೈಲಾ ಅವರಿಗೂ ಹೆರಿಗೆ ನೋವು ಕಾಣಿಸಿಕೊಂಡಿದೆ. ಗಾಬರಿಗೊಂಡ ಶೈಲಾ ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಅಂದೇ ಶೌಚಾಲಯದಲ್ಲಿ ಶೈಲಾ ನಾರ್ಮಲ್ ಡೆಲಿವರಿ ಮಾಡಿಕೊಂಡಿದ್ದು, ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ನಿಂದ ಮಗು ಕತ್ತು ಕೊಯ್ದು ಸಾಯಿಸಿದ್ದಾಳೆ. ವಿಚಾರಣೆ ವೇಳೆ ಈ ವಿಷಯವನ್ನು ಶೈಲಾ ಬಾಯ್ಬಿಟ್ಟಿದ್ದಾಳೆ. ಸದ್ಯ ಶೈಲಾಳನ್ನು ಪೊಲೀಸರು ಬಂಧಿಸಿದ್ದಾರೆ.