*ಗುರುವಿನ ಆಶೀರ್ವಾದದಿಂದ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ವಾಭಿಮಾನಿ ಪೆನಲ್ ಗೆ ಜಯ: ಪೃಥ್ವಿ ಕತ್ತಿ*

ಪ್ರಗತಿವಾಹಿನಿ ಸುದ್ದಿ: ಹುಕ್ಕೇರಿ: ಕಳೆದ 3 ತಿಂಗಳ ಹಿಂದೆ ಮಹಾರಾಷ್ಟ್ರದ ಕನೇರಿ ಮಠದಲ್ಲಿ ಸೇರಿದ್ದ ಬೆಳಗಾವಿ ಜಿಲ್ಲಾ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಠಾಧೀಶರು ತಿಳಿಸಿದಂತೆ ನಮ್ಮ ನಮ್ಮ ತಾಲೂಕಿನಲ್ಲಿ ನಾವು ಸಂಘಟನೆ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅದರ ಪ್ರತಿಫಲವೇ ನಮಗೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಅಭೂತಪೂರ್ವ ಜಯ ದೊರಕಿತೆಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಅವರು ಗುರುವಾರದಂದು ಪಟ್ಟಣದ ವಿರಕ್ತಮಠದಲ್ಲಿ ನಡೆದ ಶಿವಲಿಂಗೇಶ್ವರ ಮಹಾಸ್ವಾಮಿಗಳ 59 ನೇ ಮತ್ತು ಕುಮಾರ ಮಹಾಸ್ವಾಮಿಗಳ 18 ನೇ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಗುರು ಕಾರುಣ್ಯವಿದ್ದರೆ ಯಾವುದೇ ಕೆಲಸ ಕಾರ್ಯಗಳಲ್ಲಿ ಜಯ ಮತ್ತು ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಅದಕ್ಕಾಗಿ ಎಲ್ಲರೂ ಗುರು ಹಿರಿಯರ ಹಿತೋಪದೇಶ ಪಾಲಿಸಬೇಕೆಂದು ತಿಳಿಸಿದರು.
ಸಂಘದ ನಿರ್ದೇಶಕ ಸತ್ತೆಪ್ಪಾ ನಾಯಿಕ ಮಾತನಾಡಿ ಗುರು-ವಿರಕ್ತರು ಒಂದಾಗಿ ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿಗೆ ಶ್ರಮಿಸಬೇಕು. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ನಮ್ಮ ವೀರಶೈವ ಲಿಂಗಾಯತ ಸಮಾಜವನ್ನು ವಿಭಜಿಸಿ ನಮ್ಮನ್ನು ತುಳಿಯುವ ಹುನ್ನಾರ ನಡೆದಿದೆ. ಅದರಿಂದ ಎಲ್ಲ ಮಠಾಧೀಶರು ಒಂದಾಗಿ ಒಟ್ಟಾಗಿ ಸಮಾಜ ಕಟ್ಟಲು ಪ್ರಯತ್ನಿಸಬೇಕೆಂದರು. ಸಂಘದ ಉಪಾಧ್ಯಕ್ಷ ಅಜಿತ ಮುನ್ನೋಳಿ ಮಾತನಾಡಿದರು.
ಸ್ಥಳೀಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ನಮ್ಮ ಸಮಾಜಕ್ಕೆ ಗ್ರಹಣ ಹಿಡಿದಿದೆ. ಗ್ರಹಣ ಬಿಟ್ಟ ಬಳಿಕ ಮತ್ತೆ ಎಲ್ಲ ಸರಿ ಹೋಗುತ್ತದೆ ಎಂದರು.
ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಮಾತನಾಡಿ ಹುಕ್ಕೇರಿಯಲ್ಲಿ ಹಿರೇಮಠ ಮತ್ತು ವಿರಕ್ತಮಠ ಒಂದಾಗಿ ಒಟ್ಟಾಗಿ ಧಾರ್ಮಿಕ ಕಾರ್ಯ ನಡೆಸುತ್ತಿವೆ. ಸಮಾಜದ ಎರಡು ಕಣ್ಣುಗಳಂತೆ ನಾವಿದ್ದೇವೆ. ಸಮಾಜಕ್ಕೆ ಮತ್ತು ಉಳಿದ ಮಠಮಾನ್ಯಗಳಿಗೆ ಇದು ಮಾದರಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲವೆಂದರು. ಬೆಲ್ಲದ ಬಾಗೇವಾಡಿ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರಾರಂಭದಲ್ಲಿ ವಿದ್ಯುತ್ ಸಹಕಾರಿ ಸಂಘದ ನೂತನ ಪದಾಧಿಕಾರಿಗಳನ್ನು ಶ್ರೀಮಠದಿಂದ ಸನ್ಮಾನಿಸಿದರು.
ಅರಳಿಕಟ್ಟಿಯ ಶಿವಮೂರ್ತಿ ಮಹಾಸ್ವಾಮಿಗಳು, ಗುಟಗುದ್ದಿಯ ಶಿವಾನಂದ ಶ್ರೀಗಳು, ಹಿರೇಬಾಗೇವಾಡಿಯ ಶ್ರೀಗಳು, ಕಂಕಣವಾಡಿಯ ಮಾರುತಿ ಶರಣರು, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಕೆಂಪಣ್ಣಾ ವಾಸೇದಾರ, ಮುಖಂಡ ಗೌಸಆಜಂ ನಾಯಿಕವಾಡಿ, ಪಂಚಮಸಾಲಿ ಸಮಾಜ ಅಧ್ಯಕ್ಷ ರವಿ ಪರಕನಟ್ಟಿ, ಸುಹಾಸ ನೂಲಿ, ಬಸವರಾಜ ಪಾಟೀಲ, ಶಿವಾನಂದ ಜಿರಲಿ, ಬಸವಣ್ಣಿ ಬಂದಾಯಿ, ಪ್ರೋ ಸಿ.ಜಿ.ಪಾಟೀಲ ಇತರರಿದ್ದರು. ಕಮತೇನಟ್ಟಿಯ ಗುರುದೇವ ದೇವರು ನಿರೂಪಿಸಿದರು.




