
- ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು :* ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷಸ್ಥಾನದಿಂದ ಸಧ್ಯದಲ್ಲೇ ನಿರ್ಗಮಿಸುವ ಸುಳಿವು ನೀಡಿದ್ದಾರೆ.
- ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು. ಇನ್ನು ಹೆಚ್ಚು ದಿನ ಅಧ್ಯಕ್ಷಸ್ಥಾನದಲ್ಲಿ ಇರಲು ಸಾಧ್ಯವಿಲ್ಲ ಎನ್ನುವ ಮಾತನಾಡಿರುವ ಅವರು, ನಂತರ, ಹೈಕಮಾಂಡ್ ಹೇಳುವಷ್ಟು ದಿನ ಜವಾಬ್ದಾರಿ ನಿಭಾಯಿಸುವುದಾಗಿಯೂ ತಿಳಿಸಿದ್ದಾರೆ.
- ಅವರ ಮಾತಿನಲ್ಲೇ ಓದಿ –
*ಉಪಮುಖ್ಯಮಂತ್ರಿಯಾದ ದಿನವೇ ಅಧ್ಯಕ್ಷ ಸ್ಥಾನ ತೊರೆಯಲು ನಿರ್ಧರಿಸಿದ್ದೆ:*
“ನಾನು ಈ ಹುದ್ದೆಯಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷವಾಗಿದೆ, ಮಾರ್ಚ್ ಬಂದರೆ ಆರು ವರ್ಷವಾಗಲಿದೆ. ಬೇರೆಯವರಿಗೆ ಅವಕಾಶ ನೀಡಬೇಕು. ನಾನು ನಾಯಕತ್ವದಲ್ಲಿ ಇರುತ್ತೇನೆ, ತಲೆಕೆಡಿಸಿಕೊಳ್ಳಬೇಡಿ. ನಾನು ಉಪಮುಖ್ಯಮಂತ್ರಿಯಾದ ದಿನವೇ ಈ ಹುದ್ದೆ ಬಿಡಬೇಕು ಎಂದು ನಿರ್ಧರಿಸಿದ್ದೆ. ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಇನ್ನು ಸ್ವಲ್ಪ ದಿನ ಮುಂದುವರಿಯಲು ಹೇಳಿದ್ದಾರೆ. ನಾನು ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ” ಎಂದು ತಿಳಿಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದು –
*ನಾನು ಓಡಿ ಹೋಗುವವನಲ್ಲ:*
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಯುವ ಬಗ್ಗೆ ಕೇಳಿದಾಗ, “ಪಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಅದ್ಯಕ್ಷರಾದವರು ಹೇಗೆ ಕೆಲಸ ಮಾಡಬೇಕು ಎಂದು ನಾನು ಉದಾಹರಣೆಯಾಗಬೇಕು, ಪಕ್ಷದಲ್ಲಿ ನಮ್ಮ ಗುರುತು ಬಿಟ್ಟುಹೋಗಬೇಕು. ನಾನು ಈ ವಿಚಾರವಾಗಿ ಮಾತನಾಡುತ್ತಿದ್ದೇನೆ ಹೊರತು, ತ್ಯಾಗ ಅಥವಾ ಓಡಿ ಹೋಗುವ ಬಗ್ಗೆ ಮಾತನಾಡುತ್ತಿಲ್ಲ. ನಾನು ಓಡಿ ಹೋಗುವ ಮನುಷ್ಯನಲ್ಲ. ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿಯವರೆಗೂ ಜವಾಬ್ದಾರಿ ನಿಭಾಯಿಸಲು ಸೂಚಿಸುತ್ತಾರೋ ಅಲ್ಲಿಯವರೆಗೂ ನಾನು ಕರ್ತವ್ಯ ನಿಭಾಯಿಸುತ್ತೇನೆ” ಎಂದು ತಿಳಿಸಿದರು.
ನೂತನ ಕಚೇರಿಗಳ ಶಂಕುಸ್ಥಾಪನೆ ಯಾವಾಗ ಎಂದು ಕೇಳಿದಾಗ, “ನಾನು ಎಐಸಿಸಿ ನಾಯಕರ ಬಳಿ ದಿನಾಂಕ ಕೇಳಿದ್ದೇನೆ. ಆದಷ್ಟು ಬೇಗ ನೀಡುವುದಾಗಿ ಹೇಳಿದ್ದು, ನಾನು ಅದಕ್ಕಾಗಿ ಕಾಯುತ್ತಿರುವೆ” ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿ, “ಇಂದಿರಾ ಗಾಂಧಿ ಅವರು ದೇಶದ ಮಹಿಳಾ ಶಕ್ತಿಯ ಚಿಹ್ನೆ. ದೇಶ ಪ್ರೇಮ, ದೃಢ ನಿಶ್ಚಯ, ಧೈರ್ಯದ ಪ್ರತೀಕವಾಗಿದ್ದಾರೆ” ಎಂದು ತಿಳಿಸಿದರು.
“ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಇಂದು ಬೆಳಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಗಾಂಧಿ ಅವರ ಸಮಾಧಿಗೆ ಹೋಗಿ ಗೌರವ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅವರು ನನನ್ನು ಕರೆದು ಅವರ ಸಮಾಧಿ ಸುತ್ತಮುತ್ತಲ ಜಾಗ ಅಭಿವೃದ್ಧಿ ಪಡಿಸಲು ಸೂಚಿಸಿದ್ದರು. ಜೊತೆಗೆ ಪೆರಂಬೂರಿನಲ್ಲಿರುವ ರಾಜೀವ್ ಗಾಂಧಿ ಅವರ ಸಮಾಧಿಗೆ ಗ್ರಾನೈಟ್ ಹಾಕುವ ಭಾಗ್ಯ ನನಗೆ ಸಿಕ್ಕಿದೆ. ನಾನು ಹಾಗೂ ನನ್ನ ಸಹೋದರ ನಮ್ಮದೇ ಕ್ವಾರೆಯಿಂದ ಗ್ರಾನೈಟ್ ಕಲ್ಲನ್ನು ತೆಗೆದುಕೊಂಡು ಹೋಗಿ ಅಲ್ಲಿ ಹಾಕಿ ನಮ್ಮ ಕೈಲಾದ ಸೇವೆ ಮಾಡುವ ಭಾಗ್ಯ ಸಿಕ್ಕಿತು” ಎಂದು ಸ್ಮರಿಸಿದರು.
“ಇಂದಿರಾ ಗಾಂಧಿ ಅವರ ಹತ್ಯೆಯಾದ ದಿನ ನಾವು ಯೂಥ್ ಕಾಂಗ್ರೆಸ್ ಸಮ್ಮೇಳನಕ್ಕಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದೆವು. ಇಂದಿರಾ ಗಾಂಧಿ ಅವರ ಹತ್ಯೆ ಹಿನ್ನೆಲೆಯಲ್ಲಿ ರೈಲು ಅರ್ಧದಾರಿಯಲ್ಲೇ ನಿಂತಿತು. ಆಗ ನಾನು ಪ್ರವಾಸಿ ಚಿತ್ರಮಂದಿರ ಆರಂಭಿಸಲು ಅರ್ಜಿ ಹಾಕಿದ್ದೆ. ಅದಕ್ಕೆ ನಾನು ಇಂದಿರಾ ಜೀ ಚಿತ್ರಮಂದಿರ ಎಂದು ಹೆಸರಿಟ್ಟೆ. ಇಂದಿರಾ ಗಾಂಧಿ ಅವರ ನಿಧನದ ನಂತರ ರಾಜೀವ್ ಗಾಂಧಿ ಅವರು ನಾಯಕತ್ವ ವಹಿಸಿದರು. ನನಗೆ ಹಾಗೂ ವಿನಯ್ ಕುಮಾರ್ ಸೊರಕೆ ಅವರು ವಿದ್ಯಾರ್ಥಿ ನಾಯಕರಾಗಿದ್ದೆವು” ಎಂದು ಮೆಲುಕು ಹಾಕಿದರು.
*ಬಡತನ ನಿರ್ಮೂಲನೆಗೆ 20 ಅಂಶಗಳ ಕಾರ್ಯಕ್ರಮದ ಮೂಲಕ ಯುದ್ಧ ಸಾರಿದ್ದು ಇಂದಿರಾ ಗಾಂಧಿ:*
“ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನೆಗೆ 20 ಅಂಶಗಳ ಮೂಲಕ ಹೋರಾಟ ಆರಂಭಿಸಿದರು. ಉಳುವವನಿಗೆ ಭೂಮಿ ಕೊಟ್ಟಿದ್ದರೆ ಅದು ಇಂದಿರಾ ಗಾಂಧಿ ಅವರು. ಈ ಯೋಜನೆಯಲ್ಲಿ ಲಕ್ಷಾಂತರ ಜನ ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡುವಾಗ ಮೊಳಕಾಲ್ಮೂರು ಸಮೀಪ ವೃದ್ಧ ಮಹಿಳೆಯೊಬ್ಬರು ಬಂದು ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ತಂದು ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು ಎಂದು ಹೇಳಿದರು.
ಇಂದಿರಾ ಗಾಂಧಿ ಅವರ ಕೆಲಸಗಳ ಪೈಕಿ ಬ್ಯಾಂಕುಗಳ ರಾಷ್ಟ್ರೀಕರಣ ಬಹು ದೊಡ್ಡ ನಿರ್ಧಾರ. ಅದು ಇಲ್ಲವಾಗಿದ್ದರೆ ನಮಗೆ ಸಾಲ ಕೊಡುವವರೇ ಇರುತ್ತಿರಲಿಲ್ಲ. ನಾನು ಆರಂಭದಲ್ಲಿ ಮೊಟಾರ್ ಸೈಕಲ್ ಖರೀದಿ ಮಾಡಲು ಸೇಠುಗಳ ಬಳಿ ಹೋಗಿ ಬೇರೆಯವರ ಗ್ಯಾರಂಟಿ ನೀಡಬೇಕಿತ್ತು. ಈ ನಿರ್ಧಾರದಿಂದ ಬ್ಯಾಂಕುಗಳು ಜನರಿಗೆ ಸಾಲ ಸೌಲಭ್ಯ ನೀಡಿದರು. ಇಲ್ಲಿ ಜನಾರ್ದನ ಪೂಜಾರಿ ಅವರು ಎಲ್ಲಾ ಜನರಿಗೆ ಸಾಲ ಸಿಗುವಂತೆ ಮಾಡಿ, ಸಾಲದ ಪೂಜಾರಿ ಎಂದೇ ಹೆಸರು ಮಾಡಿದರು. ಅದರ ಪರಿಣಾಮವಾಗಿ ಇಂದು ಬ್ಯಾಂಕುಗಳು ಜನರ ಮನೆ ಬಾಗಿಲಿಗೆ ತಲುಪುವಂತಾಗಿದೆ. ಪ್ರಪಂಚದ ಅನೇಕ ದೊಡ್ಡ ಬ್ಯಾಂಕುಗಳು ಮುಳುಗಿದರೂ ನಮ್ಮ ದೇಶದ ಬ್ಯಾಂಕುಗಳು ಮುಳುಗಿಲ್ಲ. ಮನಮೋಹನ್ ಸಿಂಗ್ ಅವರ ದಿಟ್ಟ ನಿರ್ಧಾರಗಳ ಪರಿಣಾಮ ನಮ್ಮ ಬ್ಯಾಂಕುಗಳು ಸದೃಢವಾಗಿವೆ” ಎಂದರು.
“ಇನ್ನು ಮಾಲೀನ್ಯ ನಿಯಂತ್ರಣ ಮಂಡಳಿಗಳನ್ನು ಆರಂಭಿಸಿದ್ದು, ಇಂದಿರಾ ಗಾಂಧಿ ಅವರು. ಅಂಗನವಾಡಿ ಆರಂಭಿಸಿದರು. ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರ ನೇಮಕ ಮಾಡಿದ್ದು ಇಂದಿರಾ ಗಾಂಧಿ ಅವರು. ವೃದ್ಧಾಪ್ಯ, ವಿಧವಾ ಪಿಂಚಣಿ ಕೊಟ್ಟಿದ್ದು ಇಂದಿರಾ ಗಾಂಧಿ ಅವರು. ಅವರ ಯೋಜನೆಗಳನ್ನು ಯಾವುದೇ ಸರ್ಕಾರ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು 371ಜೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಕೃಷ್ಣ ಆವರ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಲಾಲ ಕೃಷ್ಣಾ ಆಡ್ವಾಣಿ ಅವರು ಇದು ಸಾಧ್ಯವಿಲ್ಲ ಎಂದು ಬರೆದರು.ಆದರೆ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲಕ ಜಾರಿಗೆ ತಂದಿತು” ಎಂದರು.
*ಇಂದಿರಾ ಗಾಂಧಿ ಅವರ ನುಡಿಮುತ್ತುಗಳ ಪುಸ್ತಕ ಬಿಡುಗಡೆ*
“ಕಾಂಗ್ರೆಸ್ ಸರ್ಕಾರ ಆಧಾರ್ ಕಾರ್ಡ್ ಜಾರಿಗೆ ತಂದಾಗ ಬಹಳಷ್ಟು ಟೀಕೆ ಮಾಡಿದರು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅದಿಕಾರಕ್ಕೆ ಬಂದಂತೆ. ಇಂದಿರಾ ಗಾಂಧಿ ಅವರ ನುಡಿಮುತ್ತುಗಳನ್ನು ಸಂಗ್ರಹಿಸಿ ಸೋನಿಯಾ ಗಾಂಧಿ ಅವರು ಪುಸ್ತಕ ಬರೆದಿದ್ದರು. ಅದನ್ನು ನಾನು ಕನ್ನಡದಲ್ಲಿ ಅನುವಾದ ಮಾಡಿ ಪುಸ್ತಕ ಮಾಡಿ, ಇಂದು ಬಿಡುಗಡೆ ಮಾಡಿಸಿದ್ದೇನೆ” ಎಂದರು.
“ಸವಾಲುಗಳು ನಮ್ಮ ಮನೆ ಬಾಗಿಲ ಮುಂದೆ ಕಾದು ಕುಳಿತಿರುತ್ತವೆ. ನಾವು ಪರ್ವತಗಳನ್ನು ಏರಬೇಕಿಲ್ಲ, ಸಾಗರಗಳನ್ನು ದಾಟಬೇಕಿಲ್ಲ. ನಮ್ಮ ಹಳ್ಳಿಗಳಲ್ಲಿ ಬಡತನ, ಪ್ರತಿ ಮನೆಯಲ್ಲಿ ಜಾತಿಯತೆ ಇದೆ. ನಾವು ಏರಬೇಕಾಗಿರುವುದು ದಾಟಬೇಕಾಗಿರುವುದು ಇವುಗಳನ್ನು ಎಂದು ಇಂದಿರಾ ಗಾಂಧಿ ಅವರು ತಿಳಿಸಿದ್ದಾರೆ. ಗೌರವ ಎಂಬುದು ಕೇಳಿ ಪಡೆಯುವಂತಹುದಲ್ಲ, ಗಳಿಸುವಂತಹದ್ದು. ಪ್ರೀತಿ ಕೊಡುವಂತಹದ್ದು, ಬಲವಂತವಾಗಿ ಪಡೆಯುವಂತಹದ್ದಲ್ಲ. ಜೀವನ ಅನುಭವಿಸುವಂತಹದ್ದು, ವಿವರಿಸುವಂತಹದ್ದಲ್ಲ ಎಂದು ಇಂದಿರಾ ಗಾಂಧಿ ಅವರು ತಿಳಿಸಿದ್ದಾರೆ. ಇಂದಿರಾ ಗಾಂಧಿ ಅವರ ನಾಯಕತ್ವ ದೇಶ ಹಾಗೂ ಪಕ್ಷ ಮರೆಯಲು ಸಾಧ್ಯವಿಲ್ಲ. ಎದುರಾಳಿ ನಿನ್ನನ್ನು ನಿಯಂತ್ರಿಸುವ ಮುನ್ನ, ನೀನು ನಿನ್ನನ್ನು ನಿಯಂತ್ರಿಸಬೇಕು ಎಂದು ಇಂದಿರಾ ಗಾಂಧಿ ಅವರು ಹೇಳುತ್ತಾರೆ. ಜಗತ್ತಿನಲ್ಲಿ ಎರಡು ರೀತಿಯ ಜನರಿರುತ್ತಾರೆ. ಒಬ್ಬ ಕೆಲಸ ಮಾಡುವವನು, ಮತ್ತೊಬ್ಬ ಅದರ ಲಾಭ ಪಡೆದುಕೊಳ್ಳುವವನು. ನೀವು ಮೊದಲ ಗುಂಪಿಗೆ ಸೇರಿ ಎಂದು ಇಂದಿರಾ ಗಾಂಧಿ ಅವರು ಹೇಳುತ್ತಾರೆ” ಎಂದು ಇಂದಿರಾ ಗಾಂಧಿ ಅವರ ಸಂದೇಶಗಳನ್ನು ಉಲ್ಲೇಖಿಸಿದರು.
*ಇಂದಿರಾ ಆಡಳಿತದಲ್ಲಿ ನೆರೆ ರಾಷ್ಟ್ರಗಳ ಜೊತೆಗಿನ ಸ್ನೇಹ ಉತ್ತಮವಾಗಿತ್ತು*
“ಮಹಾಲಕ್ಷ್ಮಿಯ ಮತ್ತೊಂದು ಹೆಸರು ಇಂದಿರಾ. ಇಂದಿರಾ ಗಾಂಧಿ ಶತಮಾನ ಕಂಡ ಅತ್ಯುತ್ತಮ ನಾಯಕಿ, ಹಾಗೂ ವಿಶ್ವ ಕಂಡ ಶ್ರೇಷ್ಠ ಮಹಿಳಾ ಪ್ರಧಾನಿ. ಅವರ ಆಡಳಿತದಲ್ಲಿ ಪಾಕಿಸ್ತಾನವನ್ನು ಇಬ್ಭಾಗ ಮಾಡಿ ಬಾಂಗ್ಲಾದೇಶ ರಚನೆಗೆ ಕಾರಣರಾದರು. ಅವರ ನೀತಿಯಿಂದ ನಮ್ಮ ನೆರೆಯ ರಾಷ್ಟ್ರಗಳು ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ನಮ್ಮ ಮಿತ್ರರಾಗಿದ್ದವು. ಆದರೆ ಈಗ ನಮ್ಮ ನೆರೆ ರಾಷ್ಟ್ರಗಳಾದ ಭೂತಾನ್, ಬರ್ಮಾ ದೇಶಗಳು ನಮ್ಮ ಜೊತೆ ನಿಲ್ಲುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಕರೆದರು. ಅಟಲ್ ಬಿಹಾರಿ ವಾಜಪೇಯಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಅವರನ್ನು ವಿದೇಶಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದರು. ಇದು ಕಾಂಗ್ರೆಸ್ ಮುಖಂಡರಿಗೆ ಇದ್ದ ಹೃದಯ ವೈಶಾಲ್ಯತೆ” ಎಂದು ಶ್ಲಾಘಿಸಿದರು.
*ಸಂಘಟನೆಗೆ ದುಡಿದ ಕಾರ್ಯಕರ್ತರಿಗೆ ಅಧಿಕಾರ ಕೊಟ್ಟಿದ್ದೇವೆ*
“ನಮ್ಮ ನಾಯಕರು ಮತಕಳ್ಳತನದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಸಹಿ ಸಂಗ್ರಹ ಅಭಿಯಾನ ಮಾಡಿದ್ದೇವೆ. ಬಿಹಾರ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಏನು ಹೆಚ್ಚುಕಮ್ಮಿಯಾಗಿದೆ ಎಂದು ಜನ ಚರ್ಚೆ ಮಾಡುತ್ತಿದ್ದಾರೆ. ಎಲ್ಲದಕ್ಕೂ ಕೊನೆ ಎಂಬುದು ಇದ್ದೇ ಇರುತ್ತದೆ. ನಾನು ಎಲ್ಲಿರುತ್ತೇನೆ ಎಂಬುದು ಮುಖ್ಯವಲ್ಲ. ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಅನೇಕ ನಿಗಮಮಂಡಳಿ ನಿರ್ದೇಶಕರ ಪಟ್ಟಿ ಸಿದ್ಧವಾಗಿದ್ದು, ಮರುಪರಿಶೀಲನೆ ಮಾಡಿಸಿ, ಬ್ಲಾಕ್ ಅಧ್ಯಕ್ಷರಿಗೆ ಅಧಿಕಾರ ಕೊಡಬೇಕಾಗಿದೆ. ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಹೆಚ್ಚು ಸಹಿ ಸದಸ್ಯತ್ವ ಮಾಡಿಸಿದ ಹೊಳಲ್ಕೆರೆಯ ಸವಿತಾ ಎಂಬಾಕೆಗೆ ಅಧ್ಯಕ್ಷ ಸ್ಥಾನ ಕೊಡಿಸಿದ್ದೆ. ಆಕೆ ಅಧಿಕಾರವನ್ನು ತನ್ನ ಗಂಡನಿಗೆ ಬಿಟ್ಟುಕೊಟ್ಟಿದ್ದಾಳೆ. ಅದಕ್ಕಾಗಿ ಎನ್ಎಸ್ ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರಿಗೆ ಅವಕಾಶ ನೀಡಿದ್ದೇವೆ. ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಗ್ಯಾರಂಟಿ ಸಮಿತಿಗಳ ಮೂಲಕ ಪ್ರತಿ ಸಮಿತಿಯಲ್ಲಿ 15 ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಇಡೀ ದೇಶದಲ್ಲಿ ಕಾರ್ಯಕರ್ತರಿಗೆ ಈ ರೀತಿ ಅಧಿಕಾರ ನೀಡಿರುವುದು ನಮ್ಮಲ್ಲಿ ಮಾತ್ರ” ಎಂದರು.
*ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ:*
“ರಾಜಕೀಯದಲ್ಲಿ 33% ಮೀಸಲಾತಿ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಾವು ಮಹಿಳಾ ನಾಯಕತ್ವವನ್ನು ಬೆಳೆಸಬೇಕು. ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ. ನಾಯಕರ ಕುಟುಂಬದವರನ್ನು ನಾಯಕರಾಗಿ ಬೆಳೆಯುವುದು ಮುಖ್ಯವಲ್ಲ, ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕು. ಬೆಂಗಳೂರಿನಲ್ಲಿ ಜಿಬಿಎ ಮೂಲಕ 369 ವಾರ್ಡ್ ಗಳನ್ನು ಮಾಡಲಾಗಿದ್ದು, ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಯ ವಾರ್ಡ್ ಮೀಸಲಾತಿ ಪಟ್ಟಿ ಇಂದು ಬಿಡುಗಡೆಯಾಗಲಿದೆ. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರಿಗೆ ಅರ್ಜಿ ಕರೆಯಲಾಗುವುದು. ಈಗ ಹೊಸ ಮತದಾರರ ಪಟ್ಟಿ ರಚನೆಯಾಗಲಿದೆ. ಕೂಡಲೇ ಮನೆ ಮನೆಗೆ ಹೋಗಿ ಖಾತಾ ಯೋಜನೆ, ಆಸ್ತಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ ಪ್ರಚಾರ ಮಾಡಬೇಕು” ಎಂದು ಕರೆ ನೀಡಿದರು.
*ಪಕ್ಷವನ್ನು ಮರೆತವರಿಗೆ ಎಐಸಿಸಿ ನಾಯಕರಿಂದಲೇ ಉತ್ತರ:*
“ಸಧ್ಯದಲ್ಲಿ ನೂರು ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕೆ ಯಾರು ಸಹಕಾರ ನೀಡಿದ್ದಾರೆ, ನೀಡಿಲ್ಲ ಎಂದು ಪಟ್ಟಿ ನೀಡಿ ಎಂದು ಎಐಸಿಸಿ ನಾಯಕರು ತಿಳಿಸಿದ್ದಾರೆ. ಕೆಲವರು ಆಸಕ್ತಿ ತೋರಿದ್ದಾರೆ, ಕೆಲವರು ಆಸಕ್ತಿ ತೋರಿಲ್ಲ. ಕೆಲವರಿಗೆ ಕೇವಲ ಅಧಿಕಾರ ಮಾತ್ರ ಬೇಕು. ಈ ಕಾಂಗ್ರೆಸ್ ಕಚೇರಿ ದೇವಾಲಯ ಎಂಬುದನ್ನು ಕೆಲವರು ಮರೆತಿದ್ದಾರೆ. ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ದೆಹಲಿ ನಾಯಕರು ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತಾರೆ. ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ನಾನು ಅವಧಿಯಲ್ಲಿ ನೂರು ಕಾಂಗ್ರೆಸ್ ಕಚೇರಿ ಮಾಡಬೇಕು ಎಂಬುದು ನನ್ನ ಬಯಕೆ. ಈ ಸಂದರ್ಭದಲ್ಲಿ ಗಾಂಧಿ ಭಾರತ ಎಂಬ ಪುಸ್ತಕ ಬಿಡುಗಡೆ ಮಾಡಿಸಲಾಗುವುದು. ನೂರು ವರ್ಷಗಳ ಹಿಂದೆ ಗಾಂಧಿಜಿ ಅವರ ಅಧ್ಯಕ್ಷತೆಯಡಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಕಾರ್ಯಕ್ರಮದ ದಾಖಲೆ ಆಧರಿಸಿ ಹಾಗೂ ನಮ್ಮ ಕಾರ್ಯಕ್ರಮಗಳನ್ನೂ ಸೇರಿಸಿ ಪುಸ್ತಕ ರಚಿಸಲಾಗಿದೆ” ಎಂದು ತಿಳಿಸಿದರು.
Indira Gandhi is a symbol of women power: DCM DK Shivakumar
AICC leaders will respond to those who have forgotten party
Bengaluru, Nov 19: Deputy Chief Minister DK Shivakumar today hailed Indira Gandhi as a symbol of women power, patriotism and courage.
Speaking at an event organized at the KPCC office to celebrate the birth anniversary of Indira Gandhi, he said, “We are celebrating the birth anniversary of Iron Lady of India. Sonia Gandhi had asked me to develop the area around Indira Gandhi’s tomb. She had also asked us to develop the Raji Gandhi tomb at Sri Perambadur. We had the pleasure of laying the granite from our quarry there.”
“It was Indira Gandhi who launched a 20-point programme to eradicate poverty. It was she who gave land to the tiller in the country. Lakhs of people in the state benefited from that. Nationalisation of bank was done by her. She started pollution control birds across the country. She is the one who introduced old age and widow pension,” he recalled.
Book on Indira Gandhi released
“Sonia Gandhi had penned a book on Indira Gandhi. I have got this book translated into Kannada and it was released today,” he said.
“Indira Gandhi was the finest and strongest leader of the last century. She had the courage to break Pakistan into two and create Bangladesh. Relationship of India was great when she was in power. Now, many of our neighbours are not with India,” he added.
Get ready for local body elections
“We have formed 369 wards under GBA and we will hold elections shortly. Along with, there would be elections for zilla and taluk panchayats. The ward reservation list would be released today,” he informed.
“We are planning laying foundation stone for 100 party offices in the state. AICC leaders have asked for a list of party leaders who did not actively participate in this. Delhi leaders will give them the right answer,” he said.
I had decided to quit the party post the day I became DCM
“I am not permanent in this post. I have completed 5.5 years, others need opportunity. I had decided to quit KPCC presidency the day I assumed office as DCM but Kharge and Raul Gandhi asked me to continue for some more time. I am doing my duty,” he said.
Q&A
Asked if he would continue in the party post, he said, “I will follow the party directions. I am only trying to leave a legacy behind. I am not the man who runs away. I will continue to fulfil my responsibilities for the post as long as Gandhi family and AICC President ask me to continue.”




