
ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಉಡುಪಿಯಲ್ಲಿ ಇಬ್ಬರು ಶಂಕಿತ ಆರೋಪಿಗಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಬಂಧಿಸಲಾಗಿದೆ. ರೋಹಿತ್ ಹಾಗೂ ಸಂತ್ರಿ ಬಂಧಿತರು.
ಬಂಧಿತರಿಬ್ಬರೂ ಸುಷ್ಮಾ ಮೆರಿನ್ ಪ್ರೈವೆಟ್ ಲಿ. ಮೂಲಕ ಗುತ್ತಿಗೆ ಆಧಾರದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕೊಚ್ಚಿನ್ ಶಿಪ್ ಯಾರ್ಡ್ ಭಾರತೀಯ ನೌಕಾಪಡೆಗೆ ಟಗ್ ಗಳನ್ನು ನಿರ್ಮಿಸಿಕೊಡುವ ಸಂಸ್ಥೆಯಾಗಿದೆ. ಇದು ಖಾಸಗಿ ಸಂಸ್ಥೆಗಳಿಗೂ ಹಡಗನ್ನು ನಿರ್ಮಿಸಿಕೊಡುತ್ತದೆ. ಈ ಸಂಸ್ಥೆಯ ಪ್ರಧಾನ ಕಚೇರಿ ಕೇರಳದಲ್ಲಿದೆ. ಕಳೆದ ಒಂದೂವರೆ ವರ್ಷಗಳಿಂದ ಆರೋಪಿಗಳು ಹಡಗಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು, ತಾಂತ್ರಿಕ ಮಾಹಿತಿಗಳನ್ನು ವಾಟ್ಸಾಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿರುವವರಿಗೆ ಕಳುಹಿಸುತ್ತಿದ್ದರು.
ಕೇರಳದಲ್ಲಿ ಕೆಲಸ ಮಾಡುವವರೆಗೂ ರೋಹಿತ್ ಇದೇ ರೀತಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ. ಮಪ್ಲೆಗೆ ಬರುವವರೆಗೂ ಈ ಚಟುವಟಿಕೆ ಮುಂದುವರೆದಿತ್ತು ಎಂದು ತನಿಖೆಯಲ್ಲಿ ಬಯಲಾಗಿದೆ.


