Belagavi NewsBelgaum NewsKannada NewsKarnataka NewsLatest

*ಡಿಸಿಸಿ ಬ್ಯಾಂಕ್ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಕ್ರಮ: ಅಣ್ಣಾಸಾಹೇಬ್ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಸಿಸಿ ಬ್ಯಾಂಕ್ ಬಗ್ಗೆ ಅನಗತ್ಯವಾಗಿ ಜನರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ.‌ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಲಕುತ್ತೇವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರು ತಿಳಿಸಿದರು.‌

ಸೋಮವಾರ ಬೆಳಗಾವಿ ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಠೇವಣಿದಾರರು ಮತ್ತು ಸಾಲಗಾರರು ಸೇರಿದಂತೆ ಎಲ್ಲರ ಹಿತಕಾಯಲು ಬದ್ಧರಾಗಿದ್ದೇವೆ. ಅನಗತ್ಯವಾಗಿ ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡುತ್ತಿರುವ ಡಾ.ಮಹಾಂತೇಶ ಕಡಾಡಿ ಅವರಿಗೆ ನೋಟಿಸ್ ನೀಡಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ‌ ದಿನಗಳಲ್ಲಿ ರಮೇಶ ಕತ್ತಿ ಅವರಿಗೂ ನೋಟಿಸ್ ನೀಡಲಾಗುವುದು ಎಂದರು.

ಜಿಲ್ಲೆಯ 4.75 ಲಕ್ಷ ರೈತರಿಗೆ, ಶೂನ್ಯ ಬಡ್ಡಿ ದರದಲ್ಲಿ 3,700 ಕೋಟಿ ರೂ.ವರೆಗೆ ಸಾಲ ವಿತರಣೆ ಮಾಡುವ ಮೂಲಕ ರಾಜ್ಯದಲ್ಲಿಯೇ ರೈತರಿಗೆ ಅತಿ ಹೆಚ್ಚು ಸಾಲ‌ ನೀಡಿದ ಹೆಗ್ಗಳಿಕೆ ಬಿಡಿಸಿಸಿ ಬ್ಯಾಂಕ್ ಹೊಂದಿದೆ. ಯಾರು ಎಷ್ಟೇ ಅಪಪ್ರಚಾರ ಮಾಡಿದರೂ, ಬ್ಯಾಂಕ್ ಠೇವಣಿ ಹೆಚ್ಚುತ್ತಲೇ ಇದ್ದು, ಮೂರು ತಿಂಗಳಲ್ಲಿ ಠೇವಣಿ ಮೊತ್ತವೂ 500 ಕೋಟಿ ರೂ.ಹೆಚ್ಚಾಗಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂಬ ಬಳಿಕ ಒಟ್ಟು ಠೇವಣಿಗಳ ಮೊತ್ತ 5,575 ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು.

ಠೇವಣಿದಾರರು ಮತ್ತು ರೈತರು ತಮ್ಮ ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯ ಪೂರೈಸಿಕೊಳ್ಳಲು ಪ್ರತಿ ವರ್ಷವೂ ಠೇವಣಿ ಹಿಂಪಡೆಯುವುದು ಹಾಗೂ ಕೃಷಿ ಉತ್ಪನ್ನ ಮಾರಾಟವಾದ ನಂತರ ಮತ್ತೆ ಠೇವಣಿ ಇರಿಸುವುದು ಸಾಮಾನ್ಯವಾಗಿದೆ. ಇದನ್ನೇ ಆಧರಿಸಿ ವಿರೋಧಿಗಳು ಮಾಡುತ್ತಿರುವ ಅಪ್ರಪ್ರಚಾರಕ್ಕೆ ಯಾರೂ ಕಿವಿಗೊಡಬಾರದು. ವಾಣಿಜ್ಯ ಸಾಲಗಳನ್ನು ನೀಡದೆ ಬ್ಯಾಂಕ್‌ ನಡೆಸಲಾಗದು. ಮಾರ್ಚ್‌ 31ಕ್ಕೆ ಪ್ರಸಕ್ತ ಆರ್ಥಿಕ ವರ್ಷ ಮುಗಿಯುತ್ತದೆ. ಆಗ ಬ್ಯಾಂಕಿನ ಸಮಗ್ರ ಚಿತ್ರಣವನ್ನು ಸಾರ್ವಜನಿಕವಾಗಿ ಮಂಡಿಸುತ್ತೇವೆ ಎಂದು ಹೇಳಿದರು.

Home add -Advt

‘ಭದ್ರತೆ ಆಧರಿಸಿಯೇ ನಾವು ವಾಣಿಜ್ಯ ಸಾಲ ಕೊಡುತ್ತಿದ್ದೇವೆ. ಗುತ್ತಿಗೆದಾರ ಜಯಶೀಲ ಶೆಟ್ಟಿ ಅವರಿಗೂ ಭದ್ರತೆ ಆಧರಿಸಿ 120 ಕೋಟಿ ಸಾಲ ವಿತರಿಸಿದ್ದೇವೆ. ಇದಕ್ಕಾಗಿ ಬೆಳಗಾವಿ ನಗರದಲ್ಲಿನ ನಾಲ್ಕು ಎಕರೆ ಜಾಗದ ಪತ್ರ ಹಾಗೂ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ 700 ಕೋಟಿ ರೂ.ಸರಕಾರದಿಂದ ತಮಗೆ ಬರಬೇಕಿರುವ ಬಗ್ಗೆ ದಾಖಲೆಗಳನ್ನು ಅವರು ಭದ್ರತೆ ರೂಪದಲ್ಲಿ ಕೊಟ್ಟಿದ್ದಾರೆ. ತಾವು ಪಡೆದ ಸಾಲಕ್ಕೆ ಈವರೆಗೆ ಬಡ್ಡಿ ರೂಪದಲ್ಲಿ 8 ಕೋಟಿ ರೂ. ಪಾವತಿಸಿದ್ದಾರೆ. ಮಾರ್ಚ್‌ನಲ್ಲಿ ಸಾಲದ ಮೊತ್ತ ಮರುಪಾವತಿಸುವುದಾಗಿ ತಿಳಿಸಿದ್ದಾರೆ. ತಮಗೆ ಅಧಿಕಾರ ತಪ್ಪಿದೆ ಎಂಬ ಕಾರಣಕ್ಕೆ ಬ್ಯಾಂಕಿಗೆ ಬಡ್ಡಿರೂಪದಲ್ಲಿ ಹಣ ಬರಬಾರದು ಎಂಬ ದುರುದ್ದೇಶದಿಂದ ಕೆಲವರು ಅಪ್ರಚಾರ ಮಾಡುತ್ತಿದ್ದಾರೆ. ಇನ್ನು ರೈತರಿಗೆ ಜಮೀನಿನ ಆಧರಿಸಿ ವಿತರಿಸುವ ಸಾಲದ ಮೊತ್ತ ಹೆಚ್ಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು ಎಂದರು.

ಇದೇ ವೇಳೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಬಿಡಿಸಿಸಿ ಬ್ಯಾಂಕಿನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಗೋಕಾಕದ ಡಾ.ಮಹಾಂತೇಶ ಕಡಾಡಿ ಅವರಿಗೆ ಕಾನೂನು ಪ್ರಕಾರ ನೋಟಿಸ್‌ ನೀಡಿದ್ದೇವೆ. ಅವರು ತಮ್ಮ ಆರೋಪ ಹಿಂದಕ್ಕೆ ತೆಗೆದುಕೊಂಡು, ಕ್ಷಮೆ ಕೇಳದಿದ್ದರೆ, ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಈ ವೇಳೆ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ರಾಜು ಕಾಗೆ, ನಿರ್ದೇಶಕರಾದ ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ್, ನಾನಾಸಾಹೇಬ ಪಾಟೀಲ, ರಾಹುಲ್‌ ಜಾರಕಿಹೊಳಿ, ನಿಲಕಂಠ ಕಪಲದಿನ್ನಿ ಸೇರಿದಂತೆ ಇತರರು ಇದ್ದರು.

https://pragativahini.com/100-electric-buses-sanctioned-for-belgaum

Related Articles

Back to top button