Kannada NewsKarnataka News

*ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ*

  • ರಾಜ್ಯದ 15 ಜಿಲ್ಲೆಗಳಲ್ಲಿ (ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ) ಮರುಸಮೀಕ್ಷೆಯಿಂದ ಒಟ್ಟು 23,395 ಮಾಜಿ ದೇವದಾಸಿ ಮಹಿಳೆಯರನ್ನು ಗುರುತಿಸಿಕೊಂಡಿರುತ್ತಾರೆ.
  • ಸಮೀಕ್ಷೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಅವಲೋಕನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು  ಹಿರಿಯ ನಾಗರಿಕರ  ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬಹುನಿರೀಕ್ಷಿತ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷಾ ವರದಿ ರಾಜ್ಯ  ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಶಕ್ತಿ ಭವನದಲ್ಲಿ ವರದಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದರು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ, ಇಲಾಖೆಯ ನಿರ್ದೇಶಕ ಮಹೇಶ ಬಾಬು ಇದ್ದರು.

ಮರು ಸಮೀಕ್ಷೆಯ ವಿಶ್ಲೇಷಣಾ ವರದಿಯಲ್ಲಿ ಮಾಜಿ ದೇವದಾಸಿ ಮಹಿಳೆಯರು ಹಾಗೂ 01ನೇ ತಲೆಮಾರು, 02ನೇ ತಲೆಮಾರು  ಮತ್ತು 03ನೇ  ಕುಟುಂಬದವರ ಮಾಹಿತಿ, ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿಗಾಗಿ ಮಾಡಲಾಗಿರುವ ಶಿಫಾರಸ್ಸುಗಳು ಸಮೀಕ್ಷಾ ವರದಿಯಲ್ಲಿವೆ.

ಮೂಲಹಂತದ ಸಮೀಕ್ಷೆಯ ಉದ್ದೇಶ:

Home add -Advt
  1. ಈ ಹಿಂದಿನ ಸಮೀಕ್ಷೆಯಲ್ಲಿ ಒಳಪಟ್ಟ ಮಾಜಿ ದೇವದಾಸಿ ಮಹಿಳೆಯರ ದತ್ತಾಂಶದಲ್ಲಿ ಲಭ್ಯವಿಲ್ಲದ ಮಾಜಿ ದೇವದಾಸಿ ಮಹಿಳೆಯರ  ವಯಸ್ಸು, ವಿಳಾಸ, ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕಸ್ಥಿತಿ ಹಾಗೂ ಅವರ 1ನೇ ತಲೆಮಾರು, 2ನೇ ತಲೆಮಾರು ಮತ್ತು  3ನೇ ತಲೆಮಾರಿನ ಮಕ್ಕಳ ಮಾಹಿತಿಗಳನ್ನು ಸಂಗ್ರಹಿಸುವುದು.
  • ಕಾರಣಾಂತರಗಳಿಂದ ಈ ಹಿಂದಿನ ಸಮೀಕ್ಷೆಯಿಂದ ಹೊರಗುಳಿದಿರುವ ಮಾಜಿ ದೇವದಾಸಿ ಮಹಿಳೆಯರನ್ನು ಸಮೀಕ್ಷಾ ಪಟ್ಟಿಗೆ ಸೇರ್ಪಡೆಗೊಳಿಸುವುದು ಹಾಗೂ ಅವರ ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಹಾಗೂ ಅವರ 1ನೇ ತಲೆಮಾರು, 2ನೇ ತಲೆಮಾರು ಮತ್ತು 3ನೇ ತಲೆಮಾರಿನ ಮಾಹಿತಿಗಳನ್ನು ಸಂಗ್ರಹಿಸುವುದು.
  • ಮಾಜಿ ದೇವದಾಸಿ ಮಹಿಳೆಯರ ಸರ್ವತೋಮುಖ ಪುನರ್ವಸತಿಗಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು  ರೂಪಿಸುವುದು.
  • ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಮಕ್ಕಳು (1ನೇ ತಲೆಮಾರು, 2ನೇ ತಲೆಮಾರು ಮತ್ತು 3ನೇ ತಲೆಮಾರು) ಸಮಾಜದಲ್ಲಿ ಗೌರವಯುತ ಬದುಕನ್ನು ನಡೆಸಲು ಸೂಕ್ತ ಕಾರ್ಯಕ್ರಮ/ಯೋಜನೆಗಳನ್ನು ರೂಪಿಸುವುದು.

ಸಚಿವರ ಅಧ್ಯಕ್ಷತೆಯಲ್ಲಿ ಸಭೆ:

  • ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಮಾಡುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವರಾದ  ಲಕ್ಷ್ಮೀ  ಆರ್.‌ ಹೆಬ್ಬಾಳಕರ್‌  ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಕಾರ್ಯದರ್ಶಿಗಳು, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ  ಹಾಗೂ ಸಮುದಾಯ ಆಧಾರಿತ ಸಂಖ್ಯೆಗಳ ಮುಖ್ಯಸ್ಥರೊಂದಿಗೆ ಸಭೆಗಳನ್ನು ನಡೆಸಲಾಗಿತ್ತು.
  • ಮಾಜಿ ದೇವದಾಸಿ ಮಹಿಳೆಯ ಮರು ಸಮೀಕ್ಷೆಯ Web application ಅನ್ನು ಸೇವಾ ಸಿಂಧು, ವಿದ್ಯುನ್ಮಾನ ನಾಗರೀಕ ಸೇವಾ  ವಿತರಣಾ ನಿರ್ದೇಶನಾಲಯ (EDCS) ಇವರಿಂದ ಸಿದ್ದಪಡಿಸುವುದರ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
  • ಸಮೀಕ್ಷೆಯನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನುಭವಿ ಸಿಬ್ಬಂದಿಗಳು, ದೇವದಾಸಿ ಪುನರ್ವಸತಿ ಯೋಜನೆಯ ಸಿಬ್ಬಂಧಿಗಳು ಹಾಗೂ ಮಾಜಿ ದೇವದಾಸಿಯರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ  ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲಾಯಿತು.

ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣಾ ವರದಿ

  • ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯ ಸ್ಥಿತಿಗತಿಗಳನ್ನು ಅರಿಯಲು ರಾಜ್ಯದ 15 ಜಿಲ್ಲೆ (ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ)  ಗಳಲ್ಲಿ 15ನೇ ಸೆಪ್ಟೆಂಬರ್ 2025 ರಿಂದ 31ನೇ ಡಿಸೆಂಬರ್ 2025 ರವರಗೆ ಸಮೀಕ್ಷೆಯನ್ನು ನಡೆಸಿದ್ದು, ಸಮೀಕ್ಷೆಯಿಂದ  15 ಜಿಲ್ಲೆಗಳಲ್ಲಿ 23,395 ಜನರನ್ನು ಹಾಗೂ ಸದರಿ ಕುಟುಂಬದವರ 01ನೇ ತಲೆಮಾರು, 02 ನೇ ತಲೆಮಾರು ಮತ್ತು 03ನೇ ತಲೆಮಾರಿನ ಒಟ್ಟು 90,092 ಜನರು ಇರುವುದು ತಿಳಿದು ಬಂದಿದೆ.
  • ಅತೀ ಹೆಚ್ಚು ಮಾಜಿ ದೇವದಾಸಿ ಮಹಿಳೆಯರು ಹೊಂದಿರುವ ಮೊದಲ 05 ಜಿಲ್ಲೆಗಳಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 4,189, ವಿಜಯನಗರ ಜಿಲ್ಲೆಯಲ್ಲಿ 3,876, ಬೆಳಗಾವಿ ಜಿಲ್ಲೆಯಲ್ಲಿ 2,649, ಕೊಪ್ಪಳ ಜಿಲ್ಲೆಯಲ್ಲಿ 2,469 ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 2,333  ಜನರು ಇರುವುದು ತಿಳಿದು ಬಂದಿದೆ.
  • ಸಮೀಕ್ಷೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಹಾಗೂ ಕುಟುಂಬದವರ 03 ತಲೆಮಾರಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ಶೈಕ್ಷಣಿಕ ಮಾಹಿತಿ, ಕುಟುಂಬದ ಸದಸ್ಯರ ಅವಲಂಬಿತರ ಮಾಹಿತಿ, ಉದ್ಯೋಗದ ಮಾಹಿತಿ, ಕೃಷಿ ಭೂಮಿಯ ಮೂಲದ ಮಾಹಿತಿ, ಆದಾಯದ ಮಾಹಿತಿ, ಕೌಶಲ್ಯ ತರಬೇತಿ ಮಾಹಿತಿ, ಆರೋಗ್ಯದ ಸ್ಥಿತಿಗತಿ, ಮಾಶಾಸನ ಮಾಹಿತಿ ಹಾಗೂ  ಮೂಲಭೂತ ಸೌಕರ್ಯಗಳ  ಮಾಹಿತಿಯು ಸಮೀಕ್ಷೆಯಲ್ಲಿ ಒಳಗೊಂಡಿದೆ.

ಮಾಜಿ ದೇವದಾಸಿ ಮಹಿಳೆಯರು ಮತ್ತು 01ನೇ ತಲೆಮಾರು, 02ನೇ ತಲೆಮಾರು  ಮತ್ತು 03ನೇ  ತಲೆಮಾರಿನ ಕುಟುಂಬದವರ  ಪುನರ್ವಸತಿಗಾಗಿ ಶಿಫಾರಸ್ಸುಗಳು:

ಶೈಕ್ಷಣಿಕ ಕ್ಷೇತ್ರದಲ್ಲಿ:- ಶಾಲಾ ಕಾಲೇಜುಗಳಲ್ಲಿ ಹಾಗೂ ವಿವಿಧ ಅರ್ಜಿ ನಮೂನೆಗಳಲ್ಲಿ ತಂದೆಯ ಹೆಸರು ನಮೂದಿಸುವುದನ್ನು ಕಡ್ಡಾಯಗೊಳಿಸದಂತೆ  ಕ್ರಮವಹಿಸುವುದು. ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡಲು ವಿಶೇಷ ವಿದ್ಯಾರ್ಥಿವೇತನ ಯೋಜನೆ, ಆಯಾ ವರ್ಗದ ಇಲಾಖೆಗಳ ಮುಖಾಂತರ  ಜಾರಿಯಲ್ಲಿರುವ ಶಿಕ್ಷಣಕ್ಕೆ ಸಂಬಂಧಿಸಿದ ವಸತಿ ಶಾಲೆಗಳ ಸೌಲಭ್ಯ, ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು, ವಿಶೇಷ ತರಬೇತಿಯನ್ನು ನೀಡಲು ಸಮೀಕ್ಷಾ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಚಿಕಿತ್ಸೆಗೆ ಅನುಕೂಲವಾಗಲು ಸರ್ಕಾರದಿಂದ ಒದಗಿಸುವ ವಿವಿಧ ಯೋಜನೆಗಳಡಿ ಆರೋಗ್ಯ ಸೌಲಭ್ಯವನ್ನು ಕಲ್ಪಿಸುವುದು ಹಾಗೂ  ಆಯುಷ್ಮಾನ್ ಭಾರತ್‌ ಕಾರ್ಡ್ ಗಳನ್ನು ವಿತರಿಸುವುದು, ಕೌಶಲ್ಯ ಅಭಿವೃದ್ಧಿ ತರಬೇತಿ/ಆರ್ಥಿಕ ಚಟುವಟಿಕೆಗಳಿಗೆ  ಸಹಾಯಧನ ನೀಡಿ  ಸ್ವಾವಲಂಬಿಗಳಾಗಿ  ಬದುಕಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು, ಕೃಷಿ, ಪಶುಸಂಗೋಪನೆ ಮುಂತಾದ ವಿಷಯಗಳಲ್ಲಿ  ತರಬೇತಿ ನೀಡಲು ಸಮೀಕ್ಷಾ  ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಮಾಜಿ ದೇವದಾಸಿ ಮಹಿಳೆಯರ ಮತ್ತು 1ನೇ ತಲೆಮಾರು, 2ನೇ ತಲೆಮಾರು ಹಾಗೂ 3ನೇ ತಲೆಮಾರಿನ ಮಕ್ಕಳ ವಿವಾಹ ಹಾಗೂ  ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಲು ಪ್ರೋತ್ಸಾಹ ಧನ ನೀಡುವುದು, ಯಾವುದೇ ಕಾರಣಕ್ಕೂ ಸಮಾಜದ ಈ ಅನಿಷ್ಟ ಪದ್ದತಿಗೆ  ಸಮರ್ಪಣೆಯಾಗದಂತೆ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಪುನರ್ವಸತಿ ಕಲ್ಪಿಸಲು ಸರ್ಕಾರವು “ವಿಶೇಷ ಪ್ಯಾಕೇಜ್‌” ಅನ್ನು ಘೋಷಣೆ ಮಾಡಲು ಸಮೀಕ್ಷಾ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ರಾಜ್ಯದ 15 ಜಿಲ್ಲೆಗಳಲ್ಲಿರುವ ಮಾಜಿ ದೇವದಾಸಿ ಮಹಿಳೆಯರ ಮತ್ತು 01ನೇ ತಲೆಮಾರು, 02ನೇ ತಲೆಮಾರು ಹಾಗೂ 03ನೇ ತಲೆಮಾರಿನ  ಕುಟುಂಬದ ಸದಸ್ಯರ  ಸ್ಥಿತಿಗತಿ ಅರಿಯಲು, ಪುನರ್ವಸತಿ ಕಲ್ಪಿಸಲು ಮತ್ತು ಸರಕಾರದ ಸೌಲಭ್ಯಗಳನ್ನು  ಒದಗಿಸುವ ಹಿನ್ನೆಲೆಯಲ್ಲಿ ಅವರ  ನಿಖರ ಮಾಹಿತಿ ಸಂಗ್ರಹಿಸುವುದಕ್ಕಾಗಿ ಮರು ಸಮೀಕ್ಷೆಯನ್ನು ನಡೆಸಲಾಗಿತ್ತು. ಈಗ ಬಂದಿರುವ ವರದಿಯನ್ನು ಆಧರಿಸಿ  ಸರಕಾರ ಮುಂದಿನ  ಕ್ರಮಗಳನ್ನು ಕೈಗೊಳ್ಳಲಿದೆ.

ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು.

Related Articles

Back to top button