Kannada NewsKarnataka NewsLatest

*ಪೊಲೀಸರ ಭಯಕ್ಕೆ ಬೈಕ್ ಯೂ ಟರ್ನ್ ಮಾಡುತ್ತಿದ್ದಂತೆ ಭೀಕರ ಅಪಘಾತ: ಪತಿ ಸಾವು; ಪತ್ನಿಯ ಎರಡೂ ಕಾಲು ಕಟ್*

ಪ್ರಗತಿವಾಹಿನಿ ಸುದ್ದಿ: ರಸ್ತೆಯಲ್ಲಿ ಪೊಲೀಸರನ್ನು ಕಂಡು ಅವರು ಹಿಡಿಯುತ್ತಾರೆ ಎಂದು ಹೆದರಿ ಏಕಾಏಕಿ ಬೈಕ್ ಯೂ ಟರ್ನ್ ಮಾಡಿದ ಪರಿಣಾಮ, ಗೂಡ್ಸ್ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಕೊಡಗು ಜಿಲ್ಲೆಯ ಕುಶಾಲನಗರದ ಕೂಡು ಮಂಗಳೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಸವಾರ ಮೃತಪಟ್ಟಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಡಗು ಜಿಲ್ಲೆಯ ಮರೂರು ಗ್ರಾಮದ ನಿವಾಸಿ ನಟೇಶ್ (31) ಮೃತಪಟ್ಟ ದುರ್ದೈವಿ. ಇವರು ತಮ್ಮ ಪತ್ನಿ ದಿವ್ಯಾ (30) ಅವರೊಂದಿಗೆ ಬೈಕ್ನಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. 

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಮೀಪದ ರಸ್ತೆಯಲ್ಲಿ ಪೊಲೀಸರು ನಿಂತಿರುವುದನ್ನು ಕಂಡು ನಟೇಶ್ ಗಾಬರಿಗೊಂಡಿದ್ದಾರೆ.

ಬೈಕ್ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ, ಎಲ್ಲಿ ಪೊಲೀಸರು ಹಿಡಿಯುತ್ತಾರೋ ಎಂಬ ಭಯದಿಂದ ನಟೇಶ್ ಅವರು ಏಕಾಏಕಿ ಮುಖ್ಯ ರಸ್ತೆಯಲ್ಲೇ ಬೈಕನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನಿಸಿದ್ದಾರೆ.

Home add -Advt

ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಗೂಡ್ಸ್ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಟೇಶ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಅವರ ಪತ್ನಿ ದಿವ್ಯಾ ಅವರ ಎರಡೂ ಕಾಲುಗಳು ಕಟ್ ಆಗಿದ್ದು, ಅವರನ್ನು ತಕ್ಷಣವೇ ಕುಶಾಲನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Related Articles

Back to top button