Karnataka NewsLatestPolitics

*ಮಹಿಳಾ ದಿನಾಚರಣೆ ದಿನವೇ ಸಿಲಿಂಡರ್ ಬೆಲೆ ಏರಿಕೆ ಉಡುಗೊರೆ ನೀಡಿದ ಕೇಂದ್ರ ಸರಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ*

ಪ್ರಗತಿವಾಹಿನಿ ಸುದ್ದಿ: ಮಹಿಳಾ ದಿನಾಚರಣೆಯ ದಿನವೇ ದೇಶದ ಮಹಿಳೆಯರಿಗೆ ಕೇಂದ್ರದ ಬಿಜೆಪಿ ಸರ್ಕಾರ ಅಡುಗೆ ಅನಿಲದ ಬೆಲೆ ಏರಿಕೆ ಎಂಬ “ಉಡುಗೊರೆ” ನೀಡಿದೆ ಎಂದು ಕಿಡಿ ಕಾರಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕೇಂದ್ರದ ಈ ಕ್ರಮ ಅತ್ಯಂತ ದುಃಖಕರ ಹಾಗೂ ಖಂಡನೀಯವಾಗಿದೆ ಎಂದಿದ್ದಾರೆ.

Home add -Advt

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಏಕಾಏಕಿ 60 ರೂ ಹೆಚ್ಚಳ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ₹115 ಏರಿಕೆ ಮಾಡಲಾಗಿದೆ. ಕಳೆದ 11 ತಿಂಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ ಒಟ್ಟು ₹110 ಹೆಚ್ಚಳ ಮಾಡಿರುವುದು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ಭಾರೀ ಹೊರೆ ಹಾಕಿದಂತಾಗಿದೆ ಎಂದು ತಿಳಿಸಿದ್ದಾರೆ.

ಅಡುಗೆ ಅನಿಲವು ಪ್ರತಿಯೊಂದು ಮನೆಯ ಅಗತ್ಯ ವಸ್ತುವಾಗಿದೆ. ಮನೆಗಳನ್ನು ನಡೆಸುವ ಮಹಿಳೆಯರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಈ ಅಗತ್ಯ ವಸ್ತುವಿನ ಬೆಲೆ ಹೆಚ್ಚಿಸುವುದು ಮಹಿಳೆಯರ ಮೇಲೆ ಮತ್ತಷ್ಟು ಆರ್ಥಿಕ ಒತ್ತಡ ತರುವ ಕ್ರಮವಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುವ ಕೇಂದ್ರ ಸರ್ಕಾರ ಮಹಿಳೆಯರ ದಿನದಂದೇ ಇಂತಹ ನಿರ್ಧಾರ ಕೈಗೊಂಡಿರುವುದು ಅತ್ಯಂತ ವಿಷಾದಕರ ಎಂದು ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಸದಾ ಆರೋಪ ಮತ್ತು ಪ್ರತಿಭಟನೆ ಮಾಡುವ ಬಿಜೆಪಿ ನಾಯಕರು ಈಗ ಏನು ಹೇಳುತ್ತಾರೆ?
ಕೇಂದ್ರ ಸರ್ಕಾರದ ಈ ಬೆಲೆ ಏರಿಕೆಯನ್ನು ಅವರು ಸಮರ್ಥಿಸಿಕೊಳ್ಳುತ್ತಾರೆಯೇ? ಅಥವಾ ಬಡವರ ಮತ್ತು ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವು ತಕ್ಷಣವೇ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆದು ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಉಂಟಾಗಿರುವ ಆರ್ಥಿಕ ಭಾರವನ್ನು ಕಡಿಮೆ ಮಾಡಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

Related Articles

Back to top button