Belagavi NewsBelgaum NewsKannada NewsKarnataka NewsLatest

*ಗುರು ಭವನ ಲೋಕಾರ್ಪಣೆ*

ಬದುಕಿನಲ್ಲಿ ಅಜ್ಞಾನ, ದಾರಿದ್ರ್ಯ,  ಬಡತನ ದೂರವಾಗಲು ಗುರು ಅತ್ಯವಶ್ಯಕ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಪ್ರಗತಿವಾಹಿನಿ ಸುದ್ದಿ, ಖಾನಾಪುರ; ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನ ನೀಡಲಾಗಿದೆ. ಗುರು ಎಂದರೆ ದೇವರಿಗಿಂತಲೂ ಶ್ರೇಷ್ಠ ಎಂದು ನಮ್ಮ ಪೂರ್ವಜರು ತಿಳಿಸಿದ್ದಾರೆ. ನಮ್ಮ ಲೌಕಿಕ ಬದುಕು ಹಸನಾಗಲು ಅಥವಾ ಆಧ್ಯಾತ್ಮಿಕ ಸಾಧನೆಯಲ್ಲಿ ನಾವು ಮುಂದುವರೆಯಲೂ ಗುರು ಅತ್ಯವಶ್ಯಕ. ಗುರುವಿನ ಮಾರ್ಗದರ್ಶನವಿಲ್ಲದೆ ಯಾರೂ ತಮ್ಮ ವ್ಯಕ್ತಿತ್ವ ಪರಿಪೂರ್ಣ ಗೊಳಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿನ ಅಜ್ಞಾನ, ದಾರಿದ್ರ್ಯ,  ಬಡತನ ದೂರವಾಗಲು ಲೌಕಿಕ ಬದುಕಿನಲ್ಲಿ ಗುರು ಅತ್ಯವಶ್ಯಕ ಎಂದು ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು  ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶ್ರೇಷ್ಠ ಶಿಕ್ಷಕ ಚಂದ್ರಶೇಖರ ಹೊಸೂರ ಅವರ 30ನೇ ಪುಣ್ಯ ಸ್ಮರಣೆ ಹಾಗೂ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಬೀಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗುರುಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ. ನಮ್ಮೆಲ್ಲರ ಬದುಕಿನಲ್ಲಿ ವಿದ್ಯಕಲಿಸಿದ ಗುರು ಹಾಗೂ ಜನ್ಮ ನೀಡಿದ ತಂದೆ ತಾಯಿ ಇವರು ಎಂದೆಂದಿಗೂ ದೈವ ಸ್ವರೂಪ. ಇವರನ್ನು ಸದಾ ಗೌರವದಿಂದ ಕಾಣಬೇಕು. ದೇವರನ್ನು ಕಾಣಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ಇಡೀ ದೇಶವನ್ನೇ ಸುತ್ತುತ್ತೇವೆ. ಆದರೆ ದೇವರನ್ನು ಪ್ರತ್ಯಕ್ಷವಾಗಿ ನೋಡಿದ ಅವನೊಂದಿಗೆ ಮಾತನಾಡಿದ ನಿದರ್ಶನಗಳು ಎಲ್ಲೂ ಇಲ್ಲ. ನಿರ್ಗುಣ, ನಿರಾಕಾರ ಸ್ವರೂಪನಾದ ಕಾಣದ ದೇವರನ್ನು ಹುಡುಕಿ ನಾವೆಲ್ಲಾ ಬಳಲುತ್ತೇವೆ. ಇದರಿಂದ ದೇಹಕ್ಕೆ ದಣಿವಾಗುತ್ತದಯೆ ಹೊರತು ಅವನ ದರ್ಶನವಾಗುವುದಿಲ್ಲ. ಕಾರಣ ಕಾಣದ ದೇವರ ಸ್ವರೂಪವನ್ನು ಅರಿಯಲು ನಾವೆಲ್ಲರೂ ಗುರುವಿನ ಮೊರೆ ಹೋಗಬೇಕು ಎಂದರು. 

Home add -Advt

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಬೀಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನತೆಗೆ ಆಧ್ಯಾತ್ಮಿಕ ಜ್ಞಾನ ಉಣಬಡಿಸಬೇಕೆಂಬ ಸದಾಶಯದಿಂದ ಇಲ್ಲಿ ಗುರುಭವನ ನಿರ್ಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇದರ ಮೂಲಕ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಸಾಗರೋಪಾದಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದ ನೇತ್ರತ್ವವನ್ನು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು, ಅವರೊಳ್ಳಿ ಬೆಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹಾಗೂ ಕಮತೇನಟ್ಟಿಯ ಗುರುದೇವ ದೇವರು ವಹಿಸಿದ್ದರು. 

ವೇದಿಕೆಯ ಮೇಲೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಿ. ಚಂದ್ರಶೇಖರ ಹೊಸೂರು ಅವರ ಸಹೋದ್ಯೋಗಿಗಳು ಹಾಗೂ ಐಎಫ್ಎಸ್ ಅಧಿಕಾರಿ ಗಿರೀಶ ಹೊಸೂರ ಅವರ ವಿದ್ಯಾ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಅಯ್ಯಪ್ಪ ಮಂದಿರದಿಂದ ಗುರುಭವನದ ವರೆಗೆ ಜರುಗಿದ ಭವ್ಯ ಮೆರವಣಿಗೆ ಆಕರ್ಷಕವಾಗಿತ್ತು. 

ಪ್ರಾರಂಭದಲ್ಲಿ ಹಿರಿಯ ಐಎಫ್ಎಸ್ ಅಧಿಕಾರಿ ಗಿರೀಶ ಹೊಸುರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಗೆ ರಾಜಶೇಖರ ಪಾಟೀಲ ನಿರೂಪಿಸಿ ವಂದಿಸಿದರು.

Related Articles

Back to top button