
ಪ್ರಗತಿವಾಹಿನಿ ಸುದ್ದಿ: ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಪ್ರತಿಷ್ಠಿಯ ಸಹಕಾರಿ ಸಂಸ್ಥೆ ಟಿಎಂಎಸ್ ಉಳಿಸಿ ಹೋರಾಟಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಬಲ ನೀಡಿದ್ದಾರೆ.
ಟಿಎಂಎಸ್ ಉಳಿಸಿ ಎಂಬ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರು ಸಂಸ್ಥೆಯ ಹಿತ ಕಾಯುವ ಬದಲು ರೈತ ವಿರೋಧಿ ನಿರ್ಧಾರಗಳಿಗೆ ಅಧಿಕಾರಿಗಳ ಜೊತೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಎನ್.ಕೆ. ಭಟ್ಟ ಅವರ ಆಡಳಿತವು ಹೊಸ ಸಂಚಲನ ಮೂಡಿಸಿದೆ. ಅವರ ತಳ, ಬದ್ಧತೆ ಮತ್ತು ಜನಾಭಿಮಾನಿಯ ನಿಲುವು ಸಂಸ್ಥೆಯನ್ನು ರಾಜಕೀಯ ಹಸ್ತಕ್ಷೇಪದಿಂದ ದೂರವಿಟ್ಟು ಯಶಸ್ವಿಯಾಗಿ ಮುನ್ನಡೆಸಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಸ್ವರ್ಣವಲ್ಲಿ ಶ್ರೀಗಳ ಆದೇಶದಂತೆ ನಾರಾಯಣ ಭಟ್ಟ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು. ಈ ವೇಳೆ ಮಾತನಾಡಿದ ಹೋರಾಟಗಾರರುನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಯಾರಿಗೂ ಹೆದರದೇ ಅಗತ್ಯವಿದ್ದಲ್ಲಿ ಮತ್ತೆ ಧೈರ್ಯದಿಂದ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಕೈಬಿಟ್ಟ ನಂತರ ಮಾತನಾಡಿದ ಎನ್.ಕೆ. ಭಟ್ಟ ಅವರು, ಆಡಳಿತಾಧಿಕಾರಿಗಳು ಸಂಸ್ಥೆಯ ಕಾನೂನಿಗೆ ವಿರುದ್ಧವಾಗಿ ಠಾರಾವುಗಳನ್ನು ಸಿದ್ಧಪಡಿಸುತ್ತಿರುವುದರ ಹಿಂದೆ ಸ್ಥಳೀಯ ಶಾಸಕ ಸಿ.ಎಸ್.ಹೆಬ್ಬಾರ್ ಅವರ ಕೈವಾಡವಿದೆ. ನಾನು ಅಧ್ಯಕ್ಷನಾದ ಬಳಿಕ ವೈಯಕ್ತಿಕ ಲಾಭಕ್ಕಾಗಿ ಸಂಸ್ಥೆಯ ಹಣವನ್ನಾಗಲಿ ಅಥವಾ ಯಾವುದೇ ಸೌಲಭ್ಯವನ್ನಾಗಲಿ ಬಳಸಿಕೊಂಡಿಲ್ಲ. ಬದಲಾಗಿ ಸಂಸ್ಥೆಯ ಹಿತದೃಷ್ಟಿಂದ 10 ಗುಂಟೆಯ ಜಾಗವನ್ನು ಸಂಘದ ಹೆಸರಿಗೆ ಮಾಡಿಸಿದ್ದೇನೆ. ರೈತರ ಹಿತ ಕಾಯುವುದೇ ನನ್ನ ಏಕೈಕ ಗುರಿ ಎಂದರು.
ನನಗೆ ಅಧ್ಯಕ್ಷ ಸ್ಥಾನದ ಮೇಲೆ ಆಸೆಯಿಲ್ಲ. ರೈತರು ಸೂಚಿಸಿದರೆ ಈ ಕ್ಷಣವೇ ಸ್ಥಾನ ತ್ಯಜಿಸಲು ಸಿದ್ಧ. ಶಾಸಕರ ಹತ್ತಾರು ಅಡೆತಡೆಗಳ ನಡುವೆಯೂ ಸಂಸ್ಥೆಯು 50 ಕೋಟಿ ರೂ.ಲಾಭ ಗಳಿಸಿದೆ. ನಾನು ಎಂದಿಗೂ ರೈತಪರವಾಗಿಯೇ ಕಾರ್ಯನಿರ್ವಹಿಸುತ್ತೇನೆ ಎಂದರು.




