
ಪ್ರಗತಿವಾಹಿನಿ ಸುದ್ದಿ: ತನ್ನ ಎರಡು ಯುದ್ಧ ವಿಮಾನಗಳನ್ನು ಶ್ರೀಲಂಕಾದ ನಾಗರಿಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಅನುಮತಿ ಕೇಳಿದ್ದ ಅಮೆರಿಕಾಗೆ ಶ್ರೀಲಂಕಾ ಶಾಕ್ ನೀಡಿರುವ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ.
ಸಂಸತ್ತಿನಲ್ಲಿ ಈ ವಿಚಾರ ತಿಳಿಸಿದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರು, ಎರಡು ಯುದ್ಧ ವಿಮಾನಗಳನ್ನು ನಿಲ್ಲಿಸಲು ಅನುಮತಿ ನೀಡುವಂತೆ ಅಮೆರಿಕ ಮನವಿ ಮಾಡಿತ್ತು. ಆದರೆ ನಮ್ಮ ತಟಸ್ಥ ನೀತಿಯನ್ನು ಕಾಪಾಡಿಕೊಳ್ಳಲು ನಾವು ಅನುಮತಿ ನೀಡಲಿಲ್ಲ ಎಂದು ತಿಳಿಸಿದರು.
ಜಿಬೌಟಿಯ ನೆಲೆಯಿಂದ ಹೊರಟ ಎಂಟು ಹಡಗು ವಿರೋಧಿ ಕ್ಷಿಪಣಿಗಳಿದ್ದ ಎರಡು ಯುದ್ಧ ವಿಮಾನಗಳನ್ನು ಮಾರ್ಚ್ 4 ರಿಂದ 8 ರವರೆಗೆ ಮಟ್ಟಾಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಮಾಡಲು ಅಮೆರಿಕ ಕೇಳಿತ್ತು. ಆದರೆ ಮಿಲಿಟರಿ ಉದ್ದೇಶಕ್ಕಾಗಿ ವಿಮಾನಗಳ ಲ್ಯಾಂಡಿಂಗ್‌ಗೆ ನಾವು ಅನುಮತಿ ಕೊಡಲಿಲ್ಲ ಎಂದು ಮಾಹಿತಿ ನೀಡಿದರು.
ಹಲವು ಒತ್ತಡಗಳ ಹೊರತಾಗಿಯೂ ನಾವು ನಮ್ಮ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಮಧ್ಯಪ್ರಾಚ್ಯ ಯುದ್ಧ ಸವಾಲುಗಳನ್ನು ಒಡ್ಡಿದ್ದರೂ ನಾವು ಯಾರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು.
ಫೆಬ್ರವರಿ 26 ರಂದು ಅಮೆರಿಕ ವಿನಂತಿ ಮಾಡಿತ್ತು. ಅದೇ ದಿನ ಇರಾನ್ ಕರೆ ಮಾಡಿ, ನೌಕಾ ಕಸರತ್ತಿನ ನಂತರ ಭಾರತದಿಂದ ಮರಳುತ್ತಿದ್ದ ಮೂರು ಯುದ್ಧ ನೌಕೆಗಳಿಗೆ ನಿಮ್ಮ ಬಂದರಿನಲ್ಲಿ ಲಂಗರು ಹಾಕಲು ಅನುಮತಿ ನೀಡುವಂತೆ ಮನವಿ ಮಾಡಿತ್ತು ಎಂದು ತಿಳಿಸಿದರು
ಮಾರ್ಚ್ 9 ರಿಂದ 13 ರವರೆಗೆ ಕೊಲಂಬೋದಲ್ಲಿ ಮೂರು ಹಡಗು ನಿಲ್ಲಿಸಲು ನಾವು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೆವು. ಒಂದು ವೇಳೆ ನಾವು ಇರಾನ್ ಮನವಿಯನ್ನು ಸ್ವೀಕರಿಸಿದ್ದರೆ ಅಮೆರಿಕದ ಮನವಿಯನ್ನೂ ಸ್ವೀಕರಿಸಬೇಕಿತ್ತು ಎಂದು ವಿವರ ನೀಡಿದರು.
ಮುಂದುವರೆದು ಯಾರ ಮನವಿಗೂ ಒಪ್ಪಿಗೆ ನೀಡದೇ ನಾವು ತಟಸ್ಥವಾಗಿರುವ ಸ್ಥಾನವನ್ನು ದೃಢವಾಗಿ ಕಾಯ್ದುಕೊಳ್ಳುತ್ತಿದ್ದೇವೆ ಎಂದು ದಿಸಾನಾಯಕ ಹೇಳಿದಾಗ ಸಂಸತ್ತಿನಲ್ಲಿದ್ದ 225 ಸದಸ್ಯರು ಚಪ್ಪಾಳೆ ತಟ್ಟಿ ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


