*ಸಿಲಿಂಡರ್ ಅಭಾವ: ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಮಾಲೀಕ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಅಡುಗೆ ಅನಿಲದ ಅಭಾವದಿಂದ ಹೋಟೆಲ್ ನಡೆಸುವುದು ದುಸ್ಥರವಾಗಿದ್ದು, ಇದರಿಂದ ಮನನೊಂದ ವ್ಯಕ್ತಿಯೊಬ್ಬರು ತಮ್ಮ ಹೋಟೆಲಿನಲ್ಲಿಯೇ ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದಲ್ಲಿ ಈ ಘಟನೆ ನಡೆದಿದೆ. ಹನುಮಾನ ಹೋಟೆಲ್ ಮಾಲೀಕ ರಾಮ ಹಳ್ಳೂರಿ (50) ಮೃತ ದುರ್ದೈವಿ. ಮಂಗಳವಾರ ಮುಂಜಾನೆ ಆರು ಘಂಟೆ ಸಮಯದಲ್ಲಿ ರಾಮ ಹಳ್ಳೂರಿ ತಾನು ನಡೆಸುತ್ತಿದ್ದ ಹೋಟೆಲ್ ಓಪನ್ ಮಾಡಿ ಹಗ್ಗದಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.
ಅಡುಗೆ ಅನಿಲ ಅಭಾವದಿಂದ ಕಂಗೆಟ್ಟಿದ್ದ ರಾಮ ಹಳ್ಳೂರಿ ವ್ಯಾಪರವೂ ನಡೆಯದೇ, ಸಾಲವನ್ನೂ ತೀರಿಸಲಾಗದೆ ಕಂಗೆಟ್ಟಿದ್ದರು ಎನ್ನಲಾಗಿದೆ.
ರಾಮ ಹಳ್ಳೂರಿಯವರ ಮಗ ಉದಯ ಹಳ್ಳೂರಿ ಮಾದ್ಯಮಗಳೊಂದಿಗೆ ಮಾತನಾಡಿ ಕಳೆದ ಒಂದು ವಾರದಿಂದ ಅಡುಗೆ ಅನಿಲ ಅಭಾವದಿಂದಾಗಿ ವ್ಯಾಪಾರ ಕುಂಟಿತಗೊಂಡಿತ್ತು, ಪ್ರತಿ ದಿನ ಹೋಟೆಲ್ ಬಾಡಿಗೆ ಮತ್ತು ಸಾಲದ ಮೊತ್ತ ನೀಡಲು ತೊಂದರೆಯಾಗಿತ್ತು ಇದರಿಂದ ಬೇಸತ್ತು ಮಾನಸಿಕ ಸ್ಥಿಮಿತ ಕಳೆದುಕೊಂಡು ಇಂದು ಮುಂಜಾನೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಹುಕ್ಕೇರಿ ಠಾಣೆಯ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.



