*ಮಳೆಗೆ ಡಿಸಿ ಕಚೇರಿಯಲ್ಲಿ ಅವಾಂತರ: ನದಿಯಂತಾದ ರಸ್ತೆಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಸುರಿದ ಭಾರಿ ಮಳೆಗೆ ನವೀಕರಣಗೊಂಡ ಡಿಸಿ ಕಚೇರಿಯಲ್ಲಿ ನೀರು ತುಂಬಿಕೊಂಡು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಪರದಾಡಿದ್ದಾರೆ.
ಒಂದೂವರೆ ಗಂಟೆ ಸುರಿದ ಭಾರಿ ಮಳೆಗೆ ಛಾವಣಿ ಸೋರುತ್ತಿದ್ದು ಕಚೇರಿಗೆ ಬಂದಿದ್ದ ಸಾರ್ವಜನಿಕರು ಪರದಾಡಿದ್ದಾರೆ. ನೀರು ತುಂಬಿಕೊಂಡಿದ್ದರಿಂದ ಕಚೇರಿ ಸಿಬ್ಬಂದಿ ಕುರ್ಚಿ ಖಾಲಿ ಮಾಡಿ ಕಚೇರಿ ಬಿಟ್ಟು ಹೊರ ನಡೆದಿದ್ದಾರೆ.
ಇನ್ನೂ ಡಿಸಿ ಕಚೇರಿಯ ಅನೇಕ ಕೊಣೆಗಳಲ್ಲಿ ರಸ್ತೆ ಮೇಲೆ ನೀರು ಹರಿದು ಹೋಗುವ ಹಾಗೆ ನೀರು ಹರಿಯುತ್ತಿದ್ದು, ಮಳೆ ನೀರು ಹೊರ ಹಾಕಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ನದಿಯಂತಾದ ರಸ್ತೆಗಳು:
ಬೆಳಗಾವಿ ನಗರದಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ.
ಬೆಳಗಾವಿಯಲ್ಲಿ ಒಂದೂವರೆ ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಗಳು ನದಿ ಸ್ವರೂಪ ಪಡೆದುಕೊಂಡಿವೆ. ನಗರದ ಚೆನ್ನಮ್ಮ ವೃತ್ತ, ಕ್ಯಾಂಪ್, ಖಡೇಬಜಾರ, ಪೋರ್ಟ್ ರೋಡ್, ಗ್ಲೋಬ್ ಸಿನೆಮಾ ಥೇಟರ್ ಪ್ರದೇಶದಲ್ಲಿ ರಸ್ತೆಗಳು ನದಿಯಂತಾಗಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.



