*ರೌಡಿಶೀಟರ್ ಮಹಿಳೆ ಮೇಲೆ ಇನ್ಸ್ಪೆಕ್ಟರ್ ಲವ್: ದೂರು ನೀಡಿದ ಸಂತ್ರಸ್ತೆ*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಹೊತ್ತ ಅಧಿಕಾರಿಯ ವಿರುದ್ಧ ಇದೀಗ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ರೌಡಿಶೀಟರ್ ಮಹಿಳೆಯನ್ನು ಪೊಲೀಸ್ ಇನ್ಸ್ ಪೆಕ್ಟರ್ ಲೈಂಗಿಕ ಕಿರುಕುಳು ನೀಡಿರುವ ಆರೋಪದ ಮೇಲೆ ದೂರು ದಾಖಲಾಗಿದೆ.
ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಾಪಣ್ಣ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಂತ್ರಸ್ತೆ ದೂರು ಸಲ್ಲಿಸಿದ್ದಾಳೆ. ಸಂತ್ರಸ್ತೆಯು ರೌಡಿಶೀಟರ್ ಆಗಿದ್ದು, ಆಕೆಗೆ ಫೋನ್ ಕರೆ ಮಾಡಿದ್ದ ಇನ್ಸ್ಪೆಕ್ಟರ್ ಚಿನ್ನ, ಮುದ್ದು, ಬಂಗಾರಿ ಎಂದೆಲ್ಲ ಅಶ್ಲೀಲ ಸಂದೇಶಗಳನ್ನೂ ಕಳುಹಿಸಿದ್ದ ಎಂಬ ಆರೋಪ ಮಾಡಲಾಗಿದೆ.
ದೂರುದಾರೆಯ ಪ್ರಕಾರ, ಇನ್ಸ್ಪೆಕ್ಟರ್ ಪಾಪಣ್ಣ ಕಚೇರಿಯ ಹಾಗೂ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಹಲವು ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೆ, ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯು ವಾಟ್ಸಪ್ ಮೂಲಕ ಕಳುಹಿಸಿದ್ದ ಅಶ್ಲೀಲ ಸಂದೇಶಗಳು ಹಾಗೂ ಸಂಭಾಷಣೆಗಳ ಸ್ಕ್ರೀನ್ಶಾಟ್ಗಳನ್ನು ಕೂಡ ಪೊಲೀಸ್ ಆಯುಕ್ತರಿಗೆ ಆಸಂತ್ರಸ್ತೆ ಸಲ್ಲಿಸಿದ್ದಾರೆ. ಜೊತೆಗೆ, ಇನ್ಸ್ಪೆಕ್ಟರ್ ಮತ್ತು ದೂರುದಾರೆ ನಡುವೆ ನಡೆದಿದ್ದೆಂದು ಹೇಳಲಾಗುತ್ತಿರುವ ಆಡಿಯೋ ದಾಖಲೆಗಳನ್ನೂ ಕಮಿಷನರ್ ಕಚೇರಿಗೆ ನೀಡಿದ್ದಾರೆ.
ಈ ಪ್ರಕರಣ ಬಹಿರಂಗಪಡಿಸಿದರೆ ದೂರುದಾರೆಯನ್ನೂ ಅವರ ಮಕ್ಕಳನ್ನೂ ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಇನ್ಸ್ಪೆಕ್ಟರ್ ಪಾಪಣ್ಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಲವಾರು ಬಾರಿ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರುದಾರೆ ಮನವಿ ಮಾಡಿದ್ದು, ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಿರುವ ಈ ದೂರಿನ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸುವ ಸಾಧ್ಯತೆ ಇದೆ.


