Karnataka NewsLatestPolitics

*ಐಪಿಎಲ್ ಟಿಕೆಟ್ ನಿರಾಕರಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದ್ದು, ಚಿನ್ನಸ್ವಾಮಿ ಸ್ಟೇಡುಯಂನತ್ತ ಆರ್ ಸಿಬಿ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಶಾಸಕರಿಗೆ ಐಪಿಎಲ್ ಮ್ಯಾಚ್​ಗಳ ಟಿಕೆಟ್ ವಿಚಾರವಾಗಿ ಸದನದಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ ಸ್ಪಂದಿಸಿರುವ ಕೆ.ಎಸ್.ಸಿ.ಎ ಶಾಸಕರಿಗೆ 1+1 ಟಿಕೆಟ್ ನೀಡಲು ಸಮ್ಮತಿ ನೀಡಿದೆ. ಈ ನಡುವೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಐಪಿಎಲ್ ಟಿಕೆಟ್ ನಿರಾಕರಿಸಿದ್ದಾರೆ.

ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಪಕ್ಷ ನಾಯಕ ಅಶೋಕ್ ಐಪಿಎಲ್ ಟಿಕೆಟ್​​ಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಬೆನ್ನಲ್ಲೇ ಕೆಎಸ್‌ಸಿಎ ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ 2 ಟಿಕೆಟ್ ನೀಡಲು ಕೆಎಸ್‌ಸಿಎ ಒಪ್ಪಿಕೊಂಡಿದೆ. ಸದ್ಯ ಒಬ್ಬ ಶಾಸಕರಿಗೆ ಎರಡು ಟಿಕೆಟ್ ನೀಡಲು ಒಪ್ಪಿರುವ ಕೆಎಸ್‌ಸಿಎ, ಮುಂದಿನ‌ ಐಪಿಎಲ್‌ ಪಂದ್ಯಕ್ಕೆ 5 ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ಇದೆಲ್ಲದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟಿಕೆಟ್ ನಿರಾಕರಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೂಡ ತಮಗೆ ಐಪಿಎಲ್ ಟಿಕೆಟ್ ಬೇಡ ಎಂದಿದ್ದಾರೆ.

ಶಾಸಕರು ಐಪಿಎಲ್ ಟಿಕೆಟ್ ಸ್ವೀಕರಿಸುವುದನ್ನು ಖಂಡಿಸಿರುವ ಸುರೇಶ್ ಕುಮಾರ್, ಮಾಧ್ಯಮಗಳಲ್ಲಿ ಸುದ್ದಿಯಾಗಿರುವಂತೆ ಪ್ರತಿಯೊಬ್ಬ ಶಾಸಕರಿಗೆ ಎರಡು ಟಿಕೆಟ್ ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್ ನೀಡುವ ವಿಷಯಕ್ಕೆ ತಮ್ಮ ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ. ವಿಧಾನಸಭೆಯಲ್ಲಿ ಚರ್ಚೆ ನಡೆದ 24 ಗಂಟೆಗಳಲ್ಲಿ ಸರ್ಕಾರ ತಕ್ಷಣ ಘೋಷಣೆ ಮಾಡಿರುವುದು ಆಶ್ಚರ್ಯಕರ. ಜನಪ್ರತಿನಿಧಿಗಳ ವಿಷಯ ಬಂದಾಗ ಮಾತ್ರ ಕಾರ್ಯ ಕೈಗೊಳ್ಳುವುದರಿಂದ ಸಾರ್ವಜನಿಕ ನಂಬಿಕೆಗೆ ಹೊಣೆ ಬರುತ್ತದೆ. ಆ ಟಿಕೆಟ್ ಅಥವಾ ಪಾಸ್‌ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತೇನೆ. ವಿಐಪಿ ಸಂಸ್ಕೃತಿ ಮುಂದುವರಿದಂತೆ ರಾಜಕಾರಣಿಗಳು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರಾಗುತ್ತಾರೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಸುರೇಶ್ ಕುಮಾರ್, ರಾಜ್ಯದಲ್ಲಿ ತಾವು “ಸಮಾಜವಾದಿ” ಎಂದು ಎಲ್ಲೆಡೆ ಹೇಳಿಕೊಳ್ಳುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿದೆ. ಈ “ಸಮಾಜವಾದಿ” ಎಂಬ ಸ್ವಯಂ ಘೋಷಿತ ಮುಖ್ಯಮಂತ್ರಿಯ ಆಡಳಿತದಲ್ಲೂ ವಿಐಪಿ ಸಂಸ್ಕೃತಿ ಮುಂದುವರಿಯುತ್ತಿರುವುದು ನಿಜಕ್ಕೂ ಅಚ್ಚರಿ ಹಾಗೂ ದುರಂತ.

Home add -Advt

ಓ ಮರೆತಿದ್ದೆ! ಇದೇ ಸಮಾಜವಾದಿ ಮುಖ್ಯಮಂತ್ರಿಗಳು ಕಳೆದ ವರ್ಷ ಐಪಿಎಲ್‌ನಲ್ಲಿ ಆರ್.ಸಿ.ಬಿ ಗೆದ್ದಾಗ, ವಿಧಾನಸೌಧದ ಮುಂದೆ ನಿರ್ಮಿಸಲಾಗಿದ್ದ ವಿಜಯೋತ್ಸವದ ವೇದಿಕೆಗೆ ತಮ್ಮ ಮೊಮ್ಮಗನನ್ನು ಕರೆದುಕೊಂಡು ಹೋಗಿದ್ದ ದೃಶ್ಯವನ್ನು ನಾವೆಲ್ಲರೂ ಕಂಡಿದ್ದೇವೆ.

ಮೊನ್ನೆ ಗುರುವಾರ, 26ನೇ ತಾರೀಖಿನಂದು ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಗಳು ಉತ್ತರಿಸುತ್ತಿದ್ದರು.

ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಚಿನ್ನಸ್ವಾಮಿ ಸ್ಟೇಡಿಯಂ, ಐಪಿಎಲ್ ಪಂದ್ಯ, ಶಾಸಕರುಗಳಿಗೆ ಟಿಕೆಟ್ ಕೊಡುತ್ತಿಲ್ಲ ಹಾಗೂ ಶಾಸಕರಿಗೆ ಮರ್ಯಾದೆ ಸಿಗುತ್ತಿಲ್ಲ ಎಂಬ ಚರ್ಚೆ ಪಕ್ಷಾತೀತವಾಗಿ ಪ್ರಾರಂಭವಾಯಿತು.

ನಾನು ಆಗಲೇ ಮಧ್ಯ ಪ್ರವೇಶಿಸಿ ಮಾತನಾಡಬೇಕೆಂದಿದ್ದೆ. ಆದರೆ ನಡೆಯುತ್ತಿದ್ದ ಆ ವಿಚಿತ್ರ ವಿದ್ಯಮಾನಕ್ಕೆ ಸ್ವತಃ ಸಭಾಧ್ಯಕ್ಷರೇ ದನಿಗೂಡಿಸಿದ್ದು ನನಗೆ ಆಶ್ಚರ್ಯವನ್ನುಂಟುಮಾಡಿ, ನನ್ನನ್ನು ನಾನೇ ನಿಯಂತ್ರಿಸಿಕೊಂಡೆ.

ಸದನ ಮುಗಿದ ಮೇಲೆ ಎಲ್ಲಿ ಹೋದರೂ ಕೇಳಿ ಬರುತ್ತಿರುವ ಪ್ರಶ್ನೆಯೆಂದರೆ, “ಸರ್, ವಿಧಾನಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೀರೋ ಅಥವಾ ನಿಮಗೆ ಬೇಕಾದ ಸೌಲಭ್ಯ, ಸವಲತ್ತು, ಸ್ಥಾನಮಾನ, ಗೌರವಗಳ ಕುರಿತು ಮಾತನಾಡುತ್ತೀರೋ?” ಎಂದು.

ಒಂದು ವರ್ಷದ ಹಿಂದೆ ಇದೇ ವಿಧಾನಸಭೆಯಲ್ಲಿ, ಐಪಿಎಲ್ ಪಂದ್ಯದಲ್ಲಿ ಆರ್.ಸಿ.ಬಿ ಗೆದ್ದಾಗ, ಸರ್ಕಾರದ ಅವಿವೇಕತನದಿಂದ ಅಥವಾ ಅತ್ಯುತ್ಸಾಹದಿಂದ, ಆರ್.ಸಿ.ಬಿ ಗೆಲುವನ್ನು ತಮ್ಮ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುವ ಹಪಾಹಪಿತನದಿಂದ 11 ಜನ ಮೃತಪಟ್ಟ ಬಗ್ಗೆ ತುಂಬಾ ಚರ್ಚೆ ನಡೆದಿತ್ತು.

ಬಹಳಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದರು, ನೋವು ಅನುಭವಿಸಿದ್ದರು ಹಾಗೂ ಆ ನೋವನ್ನು ತೋಡಿಕೊಂಡಿದ್ದರು. ಆದರೆ, ಇವತ್ತು ಅದೇ ವಿಧಾನಸೌಧದಲ್ಲಿ, ಅದೇ ಐಪಿಎಲ್ ಪಂದ್ಯದ ಟಿಕೆಟ್ ಬಗ್ಗೆ ಬಹಳ ಆಕ್ರೋಶದಿಂದ ಚರ್ಚೆ ನಡೆಸಿ, “ನಮಗೆ ಮರ್ಯಾದೆ ಸಿಗಲೇಬೇಕು” ಎಂದು ಹೇಳುತ್ತಿರುವುದು ಜನಸಾಮಾನ್ಯರಲ್ಲಿ ರಾಜಕಾರಣಿಗಳ ಬಗೆಗಿನ ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.
ನಾವೆಲ್ಲರೂ ವೇದಿಕೆಯ ಮೇಲೆ ನಮ್ಮನ್ನು “ಜನಸೇವಕರು” ಎಂದು ಕರೆದುಕೊಳ್ಳುತ್ತೇವೆ. ಇಂತಹ ಹಿನ್ನೆಲೆಯಲ್ಲಿ ಈ ವಿಐಪಿ ಸಂಸ್ಕೃತಿಗೆ ಇಂದು ಪುರಸ್ಕಾರ ಸಿಗುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ.

ನಾನು ಇವತ್ತು ಮಾಧ್ಯಮಗಳ ಮೂಲಕ, ಸದ್ಯದಲ್ಲೇ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಪ್ರತಿಯೊಬ್ಬ ಶಾಸಕರಿಗೆ ತಲಾ ಎರಡು ಟಿಕೆಟ್ ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್ ಕೊಡುವ ಸುದ್ಧಿ ಓದಿ ತಿಳಿದೆ. ಇದು ಖಂಡಿತಾ ಸರಿಯಾದ ನಿರ್ಧಾರವಲ್ಲ. ವಿಧಾನಸಭೆಯಲ್ಲಿ ಈ ಚರ್ಚೆ ನಡೆದ ಕೇವಲ 24 ಗಂಟೆಯಲ್ಲೇ ಸರ್ಕಾರ ಈ ರೀತಿ ಘೋಷಣೆ ಮಾಡಲು ಉತ್ಸುಕತೆ ತೋರಿರುವುದು ನನಗೂ ಆಶ್ಚರ್ಯ ತಂದಿದೆ.

ನಮ್ಮ ಅದೆಷ್ಟೋ ಪ್ರಶ್ನೆಗಳಿಗೆ ವರ್ಷಾನುಗಟ್ಟಲೆ ಫಲಿತಾಂಶ ಸಿಕ್ಕಿರುವುದಿಲ್ಲ. ಆದರೆ, ಶಾಸಕರ ವಿಷಯ ಬಂದ ತಕ್ಷಣ ಇಷ್ಟು ಬೇಗ ಕೆಲಸ ಮಾಡಿಬಿಟ್ಟರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಮಾಧ್ಯಮಗಳ ಮೂಲಕ ಶಾಸಕರಿಗೆ ಟಿಕೆಟ್ ಕೊಡುತ್ತಾರೆ ಎಂದು ನಾನು ಏನು ತಿಳಿದುಕೊಂಡಿದ್ದೇನೋ, ಆ ಪಾಸ್‌ಗಳನ್ನು ಅಥವಾ ಆ ಟಿಕೆಟ್ (ಗಳನ್ನು) ನಾನು ಸವಿನಯವಾಗಿ ನಿರಾಕರಿಸುತ್ತೇನೆ.

ಸ್ಪಷ್ಟ ಮಾತುಗಳಲ್ಲಿ ಹೇಳುವುದಾದರೆ, ದಯವಿಟ್ಟು ನನಗೆ ಆ ಟಿಕೆಟ್ (ಗಳು ) ಖಂಡಿತ ಬೇಡ. ಈ ರೀತಿ ವಿಐಪಿ ಸಂಸ್ಕೃತಿಯನ್ನು ಮುಂದುವರೆಸಿದಷ್ಟು, ರಾಜಕಾರಣಿಗಳಾದ ನಾವು ಜನಸಾಮಾನ್ಯರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರಾಗುತ್ತಾ ಹೋಗುತ್ತೇವೆ ಎಂಬುದನ್ನು ನಾವೆಲ್ಲರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Related Articles

Back to top button