*ಲಕ್ಷ್ಮಣ ಸವದಿ ಬಿಜೆಪಿ ಸೇರಲು ನಾವು ಬಿಡಲ್ಲ: ರಮೇಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಶಾಸಕರಾಗಿರುವ ಲಕ್ಷ್ಮಣ ಸವದಿ ಅವರು ಬಿಜೆಪಿಗೆ ವಾಪಾಸ್ ಬರುವ ಯಾವುದೇ ಪ್ರಶ್ನೆ ಇಲ್ಲ. ಅವರು ಮತ್ತೆ ಮರಳಿ ಬಂದರೂ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರು ಬಿಜೆಪಿಗೆ ಮರಳಲಿದ್ದಾರೆ ಎಂಬ ಸುದ್ದಿಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಇದು ಕೇವಲ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಸವದಿ ಮತ್ತು ಅವರ ಬೆಂಬಲಿಗರು ಮಾಡುತ್ತಿರುವ ತಂತ್ರಗಾರಿಕೆಯಾಗಿದೆ ಎಂದು ಜಾರಕಿಹೊಳಿ ಅರೋಪ ಮಾಡಿದ್ದಾರೆ.
ಸವದಿ ಅವರು ಈ ಹಿಂದೆ ಬಿಜೆಪಿ ನಾಯಕರ ಬಗ್ಗೆ ಹಾಗೂ ಕ್ಷೇತ್ರದ ಜನರ ಮುಂದೆ ಮಾಡಿರುವ ಭಾಷಣಗಳನ್ನು ಎಲ್ಇಡಿ ಸ್ಟೀನ್ ಮೂಲಕ ಜನರಿಗೆ ತೋರಿಸುತ್ತೇವೆ. ಇಂತಹ ವದಂತಿಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಏಕೈಕ ಗುರಿ. ಇದಕ್ಕಾಗಿ ಇಂದಿನಿಂದಲೇ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಬಲಿಷ್ಠವಾಗಿ ಹೊರಹೊಮ್ಮಲು ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಈಗಿನಿಂದಲೇ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷಕ್ಕೆ ತರಲು ಪ್ರಯತ್ನಗಳನ್ನ ಮಾಡಲಾಗುತ್ತಿದೆ. ಯತ್ನಾಳ್ ಅವರು ಪಕ್ಷದ ವಿರುದ್ಧವಾಗಿಲ್ಲ, ಅವರು ಕೆಲವು ವ್ಯಕ್ತಿಗಳ ವಿರುದ್ಧ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಧ್ವನಿ ಸತ್ಯವಾಗಿದೆ. ಈ ವಿಷಯವು ಪಕ್ಷದ ರಾಷ್ಟ್ರೀಯ ನಾಯಕರ ಗಮನದಲ್ಲಿದೆ. ಯತ್ನಾಳ್ ಅವರಂತಹ ಪ್ರಬಲ ನಾಯಕರ ಅನಿವಾರ್ಯತೆ ಬಿಜೆಪಿಗೆ ಇದೆ. ಅವರು ಶೀಘ್ರದಲ್ಲೇ ಪಕ್ಷಕ್ಕೆ ಬರಲಿದ್ದಾರೆ ಎಂದರು.
ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಯತ್ನಾಳ್ ಪ್ರಚಾರ ನಡೆಸಿದ್ದು ಒಳ್ಳೆಯ ಬೆಳವಣಿಗೆ. ಯತ್ನಾಳ್ ಪ್ರಚಾರದಿಂದ ನಮ್ಮ ಅಭ್ಯರ್ಥಿಗೆ ಲಾಭವಾಗಬಹುದು ಎಂದು ಭವಿಷ್ಯ ನುಡಿದರು. ಯತ್ನಾಳ್ ಬಿಜೆಪಿಗೆ ಬಂದರೆ ಒಳ್ಳೆಯದು. ಹಿಂದೂ ಸಂಘಟನೆ ಮತ್ತು ಬಿಜೆಪಿ ಮತ ಕ್ರೋಢಿಕರಣಕ್ಕೆ ಅನುಕೂಲವಾಗುತ್ತದೆ. ಉಪಚುನಾವಣೆಯಲ್ಲಿ ನಮ್ಮ ಪಕ್ಷದವರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದ್ದು ಗೆಲ್ಲುವ ಆಶಾಭಾವನೆಯನ್ನು ನಾವು ಹೊಂದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ವ ಪಕ್ಷದ ನಾಯಕರ ವಿರುದ್ಧ ಯತ್ನಾಳ್ ಗಂಭೀರ ಆರೋಪ ಮಾಡಿದ್ರು, ಸಾರ್ವಜನಿಕವಾಗಿ ಟೀಕೆ ಮಾಡುತ್ತಿದ್ರು. ಹೀಗಾಗಿ ಪಕ್ಷದ ವರಿಷ್ಟರು ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ರು. ಆದರೆ ಇದೀಗ ಮತ್ತೆ ಅವರನ್ನ ಪಕ್ಷಕ್ಕೆ ತರಲು ಸರ್ಕಸ್ ಮಾಡಲಾಗುತ್ತಿದೆ ಎಂದರು.



