
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಒಂದು ವಾರಗಳ ಕಾಲ ಬಿಸಿ ಗಾಳಿ, ಉಷ್ಣ ಅಲೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಕಡೆ ಬಿಸಿಲಿನ ಝಳ ಹೆಚ್ಚುತ್ತಿದ್ದು, ಜನರು ಹೈರಾಣಾಗುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 35°C ರಿಂದ 37°C ಆಸುಪಾಸಿನಲ್ಲಿ ಇರಲಿದೆ. ಬೆಳಿಗ್ಗೆಯಿಂದಲೇ ಬಿಸಿಲ ಧಗೆ ಇದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡುಬರಬಹುದು.
ಉತ್ತರ ಕನ್ನಡ, ಉಡುಪಿ,ದಕ್ಷಿಣ ಕನ್ನಡ ಭಾಗಗಳಲ್ಲಿ ತಾಪಮಾನದ ಜೊತೆಗೆ ತೇವಾಂಶ ಹೆಚ್ಚಿರಲಿದ್ದು, ಸೆಖೆಯ ಅನುಭವ ಅಧಿಕವಾಗಲಿದೆ. ಗರಿಷ್ಠ ತಾಪಮಾನ 34°C ದಾಖಲಾಗುವ ಸಾಧ್ಯತೆ ಇದೆ.
ಕಲಬುರಗಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ತೀವ್ರವಾಗಿರಲಿದೆ. ಇಲ್ಲಿ ತಾಪಮಾನವು 40°C ದಾಟುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಾದ ಕೊಡಗು, ಚಾಮರಾಜನಗರ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಹೊರಗೆ ಹೋಗುವವರು ಹೆಚ್ಚಿನ ಪ್ರಮಾಣದಲ್ಲಿ ನೀರು, ಎಳನೀರು ಅಥವಾ ಮಜ್ಜಿಗೆ ಸೇವಿಸಿ. ಮಧ್ಯಾಹ್ನ 12:00 ರಿಂದ 4:00 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ ಎಂದು ಸಲಹೆ ನೀಡಲಾಗಿದೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಎಣ್ಣೆ ಪದಾರ್ಥಗಳಿಗಿಂತ ತಂಪು ಪಾನೀಯ ಹಾಗೂ ಹಣ್ಣುಗಳಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಒಟ್ಟಾರೆ ಒಂದು ವಾರಗಳ ಕಾಲ ರಣ ಬಿಸಿಲು ಮುಂದುವರೆಯಲಿದ್ದು, ಜನರು ಮನೆ, ಕಚೇರಿಗಳಿಂದ ಹೊರ ಹೋಗುವಾಗ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.




