Kannada NewsKarnataka NewsLatest

*ಮಂತ್ರಾಲಯದಿಂದ ವಾಪಸ್ ಬರುವಾಗ ಭೀಕರ ಅಪಘಾತ: ಕರ್ನಾಟಕದ 8 ಜನ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಇಂದು ಬೆಳ್ಳಂ ಬೆಳಗ್ಗೆ 4 ಗಂಟೆಯ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಎಂಟು ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. 

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮಂತ್ರಾಲಯ ಮಂಡಲದ ಚಿಲಕಲಡೋಣ ಸಮೀಪ ಬೊಲೆರೊ ವಾಹನ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಈ ದುರಂತ ಸಂಭವಿಸಿ ಕರ್ನಾಟಕದ ಎಂಟು ಜನ ಯಾತ್ರಿಕರು ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ಮೂಲದ ಭಕ್ತರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

 ಡಿಕ್ಕಿಯ ರಭಸಕ್ಕೆ ಬೊಲೆರೊ ವಾಹನವು ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟವರಲ್ಲಿ ಮಹಿಳೆಯರು ಸೇರಿದ್ದಾರೆ. ಘಟನೆಯಲ್ಲಿ ಸುಮಾರು 12 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೂಡಲೇ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಕರ್ನೂಲ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿಯಾದ ವೇಗ ಇಲ್ಲವೇ ನಿದ್ರೆಯ ಮಂಪರಿನಲ್ಲಿ ಚಾಲಕನ ವಾಹನ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮಂತ್ರಾಲಯ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button