*ಕ್ಷೇತ್ರ ಪುನರ್ ವಿಂಗಡಣೆ: ಕರ್ನಾಟಕದಲ್ಲಿ ಹೆಚ್ಚಲಿರುವ ಸ್ಥಾನಗಳ ಬಗ್ಗೆ ಮಾಹಿತಿ ನೀಡಿದ ಅಮಿತ್ ಶಾ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆಯ ಕುರಿತು ಪರ ವಿರೋಧ ವ್ಯಕ್ತವಾಗುತ್ತಿದೆ. ಈ ನಡವೆ ಕೇಂದ್ರ ಗೃಹ ಸಚಿವ ಸಮೀತ್ ಶಾ ಅವರು ಕ್ಷೇತ್ರ ಪುನರ್ ವಿಂಗಡನೆ ನಂತರ ಕರ್ನಾಟಕಕ್ಕೆ ಎಷ್ಟು ಸ್ಥಾನಗಳು ಹೆಚ್ಚಲಿವೆ ಎಂಬ ಬಗ್ಗೆ ಸಂಸತನಲ್ಲಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯು ಸದ್ಯದ 28 ರಿಂದ 42 ಕ್ಕೆ ಏರಿಕೆಯಾಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕ್ಷೇತ್ರ ಮರುವಿಂಗಡಣೆ ಮಸೂದೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಆರೋಪಕ್ಕೆ ಲೋಕಸಭೆಯಲ್ಲಿ ಉತ್ತರ ನೀಡಿದ ಅವರು, ಕ್ಷೇತ್ರ ಪುನರ್ ವಿಂಗಡನೆ ಮಸೂದೆಯಿಂದಾಗಿ ಕರ್ನಾಟಕದ ಪ್ರಾತಿನಿಧ್ಯವು 14 ಸ್ಥಾನಗಳಷ್ಟು ಹೆಚ್ಚಾಗಲಿದ್ದು, ಒಟ್ಟು 42 ಸಂಸದರು ರಾಜ್ಯದಿಂದ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು.
ಸಚಿವರ ವಿವರಣೆಯ ಪ್ರಕಾರ, ಪ್ರಸ್ತುತ 543 ಸದಸ್ಯರಿರುವ ಲೋಕಸಭೆಯಲ್ಲಿ ದಕ್ಷಿಣ ಭಾರತದ ಒಟ್ಟು 129 ಸಂಸದರಿದ್ದಾರೆ (ಸುಮಾರು 23.76%) ಕ್ಷೇತ್ರ ಮರುವಿಂಗಡಣೆಯ ನಂತರ ರಚನೆಯಾಗುವ ಹೊಸ ಸದನದಲ್ಲಿ ದಕ್ಷಿಣದ ಸಂಸದರ ಸಂಖ್ಯೆ 195ಕ್ಕೆ ಏರಲಿದೆ. ಇದರಿಂದ ಲೋಕಸಭೆಯಲ್ಲಿ ಅವರ ಒಟ್ಟಾರೆ ಶಕ್ತಿ 23.97% ಆಗಲಿದ್ದು, ಯಾವುದೇ ರೀತಿಯ ಪ್ರಾತಿನಿಧ್ಯದ ನಷ್ಟವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಕ್ಷೇತ್ರ ಮರುವಿಂಗಡಣೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಗಳಿಂದ ದಕ್ಷಿಣದ ರಾಜ್ಯಗಳಿಗೆ ಹಾನಿಯಾಗಲಿದೆ ಎಂಬುದು ಕೇವಲ ಸೃಷ್ಟಿಸಿದ ನಿರೂಪಣೆಯಾಗಿದೆ. ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯವೂ ತನ್ನ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ, ಬದಲಿಗೆ ಸಂಸದರ ಸಂಖ್ಯೆ ಹೆಚ್ಚಾಗಲಿದೆ, ಎಂದು ಅಮಿತ್ ಶಾ ಸದನಕ್ಕೆ ಭರವಸೆ ನೀಡಿದರು.



