Belagavi NewsBelgaum NewsKannada NewsKarnataka News

*ಇತಿಹಾಸಕ್ಕೆ ಸಾಕ್ಷಿಯಾದ ಕಂಗ್ರಾಳಿ ಬಿ.ಕೆ: 43 ವರ್ಷಗಳ ಬಳಿಕ ಶ್ರೀ ಮಹಾಲಕ್ಷ್ಮಿ ಜಾತ್ರೆಗೆ ಭವ್ಯ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸುಮಾರು 43 ವರ್ಷಗಳ ದೀರ್ಘ ನಿರೀಕ್ಷೆಯ ನಂತರ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಇಂದು ಬೆಳಗ್ಗೆ 5.58ಕ್ಕೆ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಭವ್ಯವಾಗಿ ಚಾಲನೆ ನೀಡಲಾಯಿತು.

ಗ್ರಾಮದೆಲ್ಲೆಡೆ ಭಕ್ತಿ, ಸಂಭ್ರಮ ಮತ್ತು ಹಬ್ಬದ ವಾತಾವರಣ ಕಂಗೊಳಿಸಿತು.

ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ-ಹವನ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. 

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Home add -Advt

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ್,  ಗ್ರಾಮಸ್ಥರು, ಹಿರಿಯರು, ಯುವಕರು ಹಾಗೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಜಾತ್ರೆಯ ಸಂಭ್ರಮಕ್ಕೆ ಸಾಕ್ಷಿಯಾದರು.

ಸಾಂಪ್ರದಾಯಿಕ ವಾದ್ಯಗಳ ನಾದ, ಪೂಜಾ ವಿಧಿವಿಧಾನಗಳು ಮತ್ತು ಭಕ್ತರ ಜಯಘೋಷಗಳಿಂದ ಗ್ರಾಮವು ಹಬ್ಬದ ಮೆರಗು ಪಡೆದುಕೊಂಡಿತು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, “ದೀರ್ಘ ಕಾಲದ ಬಳಿಕ ನಡೆಯುತ್ತಿರುವ ಈ ಜಾತ್ರೆ ಗ್ರಾಮಸ್ಥರ ಏಕತೆ ಮತ್ತು ಭಕ್ತಿಯ ಸಂಕೇತವಾಗಿದೆ. ತಾಯಿ ಮಹಾಲಕ್ಷ್ಮಿಯ ಆಶೀರ್ವಾದದಿಂದ ಗ್ರಾಮಕ್ಕೆ ಶಾಂತಿ, ಸಮೃದ್ಧಿ ಬರಲಿ. ಜಾತ್ರಾ ಮಹೋತ್ಸವವು ನಿರ್ವಿಘ್ನವಾಗಿ ನೆರವೇರಲಿ,” ಎಂದು ಪ್ರಾರ್ಥಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. 

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನಿರ್ದೇಶನದಂತೆ ಗ್ರಾಮದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಮಿತಿಯವರು ಸೂಕ್ತ ವ್ಯವಸ್ಥೆ ಮಾಡಿರುವುದು ಗಮನಾರ್ಹವಾಗಿದೆ.

ಒಟ್ಟಾರೆ, ಕಂಗ್ರಾಳಿ ಬಿ.ಕೆ ಗ್ರಾಮವು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ, ಭಕ್ತಿ ಮತ್ತು ಸಂಪ್ರದಾಯಗಳ ಸಮ್ಮಿಲನದ ಮೂಲಕ ಹೊಸ ಚರಿತ್ರೆ ಬರೆಯುತ್ತಿರುವುದು ವಿಶೇಷವಾಗಿದೆ.

Related Articles

Back to top button