
ಪ್ರಗತಿವಾಹಿನಿ ಸುದ್ದಿ: ಬಿರುಗಾಳಿ ಹಾಗೂ ಭಾರಿ ಮಳೆಯಿಂದಾಗಿ 74 ಜನರು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದ್ದು, ವಿವಿಧ ಜಿಲ್ಲೆಗಳಲ್ಲಿ ಸಾಲು ಸಾಲು ಅನಾಹುತಗಳು ಸಂಭವಿಸಿವೆ. ಗೋಡೆ ಕುಸಿತ, ಮರಗಳು ಬಿದ್ದಿರುವುದು ಮತ್ತು ಸಿಡಿಲು ಬಡಿದ ಘಟನೆಗಳಲ್ಲಿ ಇದುವರೆಗೆ ಸುಮಾರು 74 ಜನರು ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಇಲ್ಲಿ 17 ಜನರು ಸಾವನ್ನಪ್ಪಿದ್ದಾರೆ. ಉನ್ನಾವ್ನಲ್ಲಿ ಬಾಲಕ ಸೇರಿ 7 ಮಂದಿ ದುರ್ಮರಣ ಹೊಂದಿದ್ದಾರೆ.
ಹವಾಮಾನ ಇಲಾಖೆಯ ವರದಿಯಂತೆ, ಪಶ್ಚಿಮ ಉತ್ತರ ಪ್ರದೇಶ ವ್ಯಾಪ್ತಿಯಲ್ಲಿ ಚಂಡಮಾರುತ ಮತ್ತು ದಕ್ಷಿಣ ರಾಜಸ್ಥಾನದಿಂದ ಬೀಸುತ್ತಿರುವ ಗಾಳಿಯ ಪ್ರಭಾವದಿಂದಾಗಿ ಗಂಟೆಗೆ 80 ರಿಂದ 100 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಿದೆ. ಬುಧವಾರ ಮಧ್ಯಾಹ್ನ ಆರಂಭವಾದ ಈ ಹವಾಮಾನ ವೈಪರೀತ್ಯ ಸಂಜೆ ವೇಳೆಗೆ ಭೀಕರ ಚಂಡಮಾರುತವಾಗಿ ಮಾರ್ಪಟ್ಟು ಭಾರಿ ಅವಾಂತರ ಸೃಷ್ಟಿಸಿದೆ.
ಪ್ರಯಾಗ್ರಾಜ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಅಲ್ಲಿ 17 ಜನರು ಮೃತಪಟ್ಟಿದ್ದಾರೆ. ಮೃತರ ಪೈಕಿ ಐವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಉಳಿದಂತೆ ಭದೋಹಿಯಲ್ಲಿ 10, ಫತೇಪುರ್ 8, ಉನ್ನಾವ್ 7, ಬದಾಯೂನ್ 6 ಮತ್ತು ಬರೇಲಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಉನ್ನಾವ್ ಜಿಲ್ಲೆಯ ದಹಿ ಎಂಬಲ್ಲಿ ಮರ ಬಿದ್ದು 70 ವರ್ಷದ ರೈತ ಮೃತಪಟ್ಟರೆ, ಅಸಿವಾನ್ನಲ್ಲಿ 9 ವರ್ಷದ ಬಾಲಕ ಬಲಿಯಾಗಿದ್ದಾನೆ.




