Belagavi NewsBelgaum NewsKannada NewsKarnataka News

*Exclusive News* *ಕೊಟಕ್ ಲೈಫ್ ಗೆ ದಾಖಲೆಯ ಬಿಸಿನೆಸ್ ಕೊಟ್ಟ ಶಿವಾನಂದ ನೀಲಣ್ಣವರ್* *ಮನಿ ಲಾಂಡ್ರಿಂಗ್ ವ್ಯವಹಾರದ ಅನುಮಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ಬಹುಕೋಟಿ ರೂಪಾಯಿ ಆರ್ಥಿಕ ಹಗರಣ ನಡೆಸಿದೆ ಎನ್ನಲಾಗಿರುವ ಶಿವಂ ಟ್ರಸ್ಟ್‌ ಮುಖ್ಯಸ್ಥ ಶಿವಾನಂದ ನೀಲಣ್ಣವರ ವಿರುದ್ಧ ಹಲವಾರು ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಖಾಸಗಿ ಜೀವವಿಮಾ ಕಂಪನಿ ಕೊಟಕ್ ಲೈಫ್ ಇನ್ಸೂರೆನ್ಸ್ ಹುಬ್ಬಳ್ಳಿ ಶಾಖೆಯ ಎಜನ್ಸಿ ಪಾರ್ಟ್ನರ್ (Agency Partner -part time employment) ಹುದ್ದೆಯಲ್ಲಿ  (ಕೋಡ್ -60760414) ಕಾರ್ಯನಿರ್ವಹಿಸುತ್ತಿದ್ದ ಆತ, 50ಕ್ಕೂ ಹೆಚ್ಚು ಇನ್ಸೂರೆನ್ಸ್ ಮ್ಯಾನೇಜರ್ ಡೈರೆಕ್ಟ್ (ಐಎಂಡಿ) ನೇಮಕ ಮಾಡಿದ್ದ. ಈ ಸಂದರ್ಭದಲ್ಲಿ ದೇಶದಲ್ಲೇ ದಾಖಲೆಯ 15 ಕೋಟಿ ರೂ.ಗಳಷ್ಟು ಬಿಸಿನೆಸ್ ಕೊಟ್ಟಿದ್ದ ಎನ್ನುವ ಸಂಗತಿ ಪ್ರಗತಿವಾಹಿನಿಗೆ ಲಭ್ಯವಾಗಿದೆ.

ಪ್ರಗತಿವಾಹಿನಿಗೆ ದೊರೆತಿರುವ ಮಾಹಿತಿಯ ಪ್ರಕಾರ, ಸಾವಿರಾರು ಜನರಿಂದ ತಲಾ ₹99 ಸಾವಿರದಂತೆ ಹಣ ಸಂಗ್ರಹಿಸಿ ವಿಮೆ ಮಾಡಿಸಿದ್ದ. ಒಂದು ಲಕ್ಷ ರೂಪಾಯಿಗೂ ಮೇಲ್ಪಟ್ಟ ವ್ಯವಹಾರಗಳಿಗೆ ಕಡ್ಡಾಯ ದಾಖಲೆ ಮತ್ತು ಪರಿಶೀಲನಾ ಪ್ರಕ್ರಿಯೆ ಇರುವ ಕಾರಣ, ಗಮನಕ್ಕೆ ಬಾರದೆ ಇರಲು ಉದ್ದೇಶಪೂರ್ವಕವಾಗಿ ₹99 ಸಾವಿರ ಮಿತಿಯನ್ನು ನಿಗದಿಪಡಿಸಲಾಗಿತ್ತು ಎನ್ನುವ ಸಂಗತಿ ಬಹಿರಂಗವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಒಂದೇ ಮೊತ್ತದ ವಿಮಾ ಪ್ರೀಮಿಯಂ ಮಾಡಿಸಿದ್ದರೂ ಕಂಪನಿ ಗಂಭೀರವಾಗಿ ಪರಿಗಣಿಸದೆ ಮೌನ ಸಮ್ಮತಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಈ ವ್ಯವಹಾರದಲ್ಲಿ ಕಮಿಷನ್ ಸೇರಿದಂತೆ ಶಿವಾನಂದ ನೀಲಣ್ಣವರ ಶೇ.40 ರಿಂದ 60 ರಷ್ಟು ಹಣ ಪಡೆಯುತ್ತಿದ್ದ ಎನ್ನುವ ಮಾಹಿತಿ ಕೂಡ ಪ್ರಗತಿವಾಹಿನಿಗೆ ಲಭ್ಯವಾಗಿದೆ. ಆತ ತನ್ನ ಅಡಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಜನರನ್ನು ಐಎಂಡಿ ನೇಮಕ ಮಾಡಿಕೊಂಡು, ಅವರ ಮೂಲಕವೂ ವ್ಯವಹಾರಗಳನ್ನು ನೀಡುತ್ತಿದ್ದ ಎನ್ನಲಾಗಿದೆ. ಆ ವ್ಯಕ್ತಿಗಳು ಮಾಡುವ ಪ್ರತಿಯೊಂದು ವ್ಯವಹಾರಕ್ಕೂ ಶಿವಾನಂದ ನೀಲಣ್ಣವರ್ ಪ್ರತ್ಯೇಕ ಕಮಿಷನ್ ಪಡೆಯುತ್ತಿದ್ದ.

Home add -Advt

ಹಾಕುವ ಹಣ ಕಮಿಷನ್ ರೂಪದಲ್ಲಿ ಪೈಟ್ ಮನಿಯಾಗಿ ಆತನ ಕೈ ಸೇರುತ್ತಿತ್ತು ಎನ್ನುವ ಅನುಮಾನವಿದೆ. ಹೀಗಾಗಿ ಇದು ಕೇವಲ ವೈಯಕ್ತಿಕ ವ್ಯವಹಾರವಲ್ಲದೆ, ಸಂಘಟಿತ ಜಾಲದ ರೂಪದಲ್ಲಿ ಕಾರ್ಯನಿರ್ವಹಿಸುತ್ತಿತ್ತೇ ಎನ್ನುವ ಅನುಮಾನಗಳು ಹೆಚ್ಚಾಗಿವೆ.

ಒಟ್ಟಾರೆ 15 ಕೋಟಿ ರೂ.ಗಳಷ್ಟು ವ್ಯವಹಾರ ನೀಡಿದ್ದು, 2024-25ನೇ ಸಾಲಿನಲ್ಲಿ ಮಾತ್ರ ದೇಶದಲ್ಲೇ ದಾಖಲೆಯ ಸುಮಾರು ₹10 ಕೋಟಿಗೂ ಅಧಿಕ ಮೊತ್ತದ ವ್ಯವಹಾರ ನೀಡಿ, ವಿದೇಶ ಪ್ರವಾಸಕ್ಕೆ ಅರ್ಹತೆ ಪಡೆದಿದ್ದ ಎನ್ನುವ ಮಾಹಿತಿ ಮೂಲಗಳಿಂದ ಹೊರಬಿದ್ದಿದೆ. ಅಲ್ಲದೇ, ಮುಂದಿನ 2025-26ನೇ ಸಾಲಿನಲ್ಲಿ ₹100 ಕೋಟಿ ಮೌಲ್ಯದ ಹೊಸ ವ್ಯವಹಾರ ತಂದುಕೊಡುವ ಭರವಸೆ ನೀಡಿದ್ದ, ಇದಕ್ಕೆ ಪ್ರತಿಯಾಗಿ ಕಂಪನಿಯಿಂದ ಹೆಲಿಕಾಪ್ಟರ್ ನೀಡುವಂತೆ ಬೇಡಿಕೆ ಇಟ್ಟಿದ್ದನೆಂಬ ಎಕ್ಸ್‌ಕ್ಲೂಸಿವ್ ಮಾಹಿತಿ ಕೂಡ ಪ್ರಗತಿವಾಹಿನಿಗೆ ದೊರೆತಿದೆ. ಆದರೆ ಕಂಪನಿ ನಿರ್ಣಯ ತೆಗೆದುಕೊಳ್ಳಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಆತ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದ್ದಾನೆ ಎನ್ನುವ ಮಾತುಗಳೂ ಹರಿದಾಡುತ್ತಿವೆ.

ಈ ಪ್ರಕರಣದಲ್ಲಿ, ಕೊಟಕ್ ಲೈಫ್ ಇನ್ಸೂರೆನ್ಸ್ ನ ಮೂವರು ನೌಕರರು ಆತನ ಬೆನ್ನಿಗೆ ನೇರವಾಗಿ ನಿಂತು, ವ್ಯವಹಾರಕ್ಕೆ ಸಾಥ್ ನೀಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. “ಮನಿ ಲಾಂಡರಿಂಗ್” ವ್ಯವಹಾರಕ್ಕೆ ಅವರು ಸಹಕಾರ ನೀಡಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.

ತಾನು ಯಾವುದೇ ರೀತಿಯ ಮನಿ ಲಾಂಡರಿಂಗ್ ದಂಧೆಗೆ ಸಹಕಾರ ನೀಡುವುದಿಲ್ಲ, ಮತ್ತು ಯಾರೇ ಅಂತಹ ವ್ಯವಹಾರದಲ್ಲಿ ಸಹಕಾರ ನೀಡುವುದು ಗಮನಕ್ಕೆ ಬಂದಲ್ಲಿ ಕಂಪನಿಗೆ ಮಾಹಿತಿ ನೀಡುತ್ತೇನೆ ಎಂದು ಪ್ರತಿವರ್ಷ ಡಿಕ್ಲರೇಶನ್ ನೀಡುವ ಕೊಟಕ್ ಲೈಫ್ ಇನ್ಸೂರೆನ್ಸ್ ಉದ್ಯೋಗಿಗಳೇ ಈ ದೊಡ್ಡ ವ್ಯವಹಾರಕ್ಕೆ ಸಾಥ್ ನೀಡುತ್ತಿದ್ದುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಹಾಗಾಗಿ ಆ ಮೂವರು ನೌಕರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರೆ, ಸಂಪೂರ್ಣ ವ್ಯವಹಾರ ಬಯಲಾಗಲಿದೆ.

ಹಣದ ಮೂಲ, ವ್ಯವಹಾರದ ವಿಧಾನ, ಕಮಿಷನ್ ಜಾಲ ಮತ್ತು ಕಂಪನಿಯ ಒಳಾಂಗಣ ಸಂಪರ್ಕಗಳ ಕುರಿತು ಸಿಐಡಿ ತನಿಖೆ ನಡೆಸಬೇಕಿದೆ. ಕೊಟಕ್ ಲೈಫ್ ಜೊತೆಗಿನ ವ್ಯವಹಾರ ಕಾನೂನು ಪ್ರಕಾರವೇ ನಡೆದಿತ್ತೇ ಅಥವಾ ಅಕ್ರಮವಾಗಿತ್ತೇ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ.

ಪ್ರಕರಣವು ಬೆಳಕಿಗೆ ಬಂದ ಬಳಿಕ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾಮಾನ್ಯ ಜನರ ಹಣವನ್ನು ಬಳಸಿಕೊಂಡು ದೊಡ್ಡ ಮಟ್ಟದ ಹಣಕಾಸು ವ್ಯವಸ್ಥೆ ನಿರ್ಮಿಸಲಾಗಿತ್ತೇ ಎನ್ನುವ ಪ್ರಶ್ನೆಗಳು ಮೂಡಿವೆ. 35 ಸಾವಿರಕ್ಕೂ ಹೆಚ್ಚು ಜನರು ಶಿವಂ ಟ್ರಸ್ಟ್ ನಲ್ಲಿ ತಮ್ಮ ಹಣ ಹೂಡಿಕೆ ಮಾಡಿದ್ದರು.

ಪ್ರಕರಣವನ್ನು ಇದೀಗ ಸಿಐಡಿ ತನಿಖೆಗೆ ಒಪ್ಪಿಸಲಾಗಿದ್ದು, ಬೆಳಗಾವಿಗೆ ಆಗಮಿಸಿರುವ ಸಿಐಡಿ ಅಧಿಕಾರಿಗಳು ಸಂಪೂರ್ಣ ಹಣಕಾಸು ವ್ಯವಹಾರಗಳ ದಾಖಲೆ, ಬ್ಯಾಂಕ್ ಖಾತೆಗಳು, ಕಮಿಷನ್ ವಹಿವಾಟು ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.

 ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 

Related Articles

Back to top button