Belagavi NewsBelgaum NewsKannada NewsKarnataka NewsLatest

‎*ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಗೆ ಆಗ್ರಹ*

‎ಕನ್ನಡಪರ ಸಂಘಟನೆಗಳಿಂದ ಇದೇ 26ರಂದು ಬೆಳಗಾವಿ ಪಾಲಿಕೆಗೆ ಮುತ್ತಿಗೆ

ಪ್ರಗತಿವಾಹಿನಿ ಸಿದ್ದಿ: ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ ಎಂದೇ ಬಿಂಬಿತವಾದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಇದೇ 26ರಂದು ಮಂಗಳವಾರ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿವೆ.

‎ಕನ್ನಡಸೇನೆ-ಕರ್ನಾಟಕ, ಕಿತ್ತೂರು ಕರ್ನಾಟಕ ಸೇನೆ, ಗಡಿನಾಡ ಕನ್ನಡಿಗರ ಸೇನೆ, ಕನ್ನಡ ಕ್ರಿಯಾ ಸಮಿತಿ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ.

‎ನಾಳಿನ ಹೋರಾಟದಲ್ಲಿ ನಾಡಿನ ಕನ್ನಡಪರ ಹಿರಿಯ ಹೋರಾಟಗಾರರಾದ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡಸೇನೆ-ಕರ್ನಾಟಕ ರಾಜ್ಯಾಧ್ಯಕ್ಷ  ಕೆ.ಆರ್. ಕುಮಾರ್ ಮತ್ತಿತರ ಮುಖಂಡರು ನೇತೃತ್ವ ವಹಿಸಲಿದ್ದಾರೆ.

‎ಪ್ರತಿಭಟನೆಗೆ ಮುನ್ನ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪುನರ್ ಸ್ಥಾಪನೆಗೊಂಡ ಹಲ್ಮಿಡಿ ಶಾಸನದ ಪೂಜಾ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ವೇಳೆ ಕನ್ನಡಪರ ಹೋರಾಟಗಾರರು, ಹಲ್ಮಿಡಿ ಶಾಸನದ ಪ್ರತಿಕೃತಿಗೆ ಮಲಪ್ರಭೆ, ಘಟಪ್ರಭೆ, ದೂಧಗಂಗಾ, ಹಿರಣ್ಯಕೇಶಿ ಹಾಗೂ ಕೃಷ್ಣಾನ ನದಿಗಳ ಪವಿತ್ರ ಜಲಾಭಿಷೇಕ ಹಾಗೂ ಕ್ಷೀರಾಭಿಷೇಕ ನೆರೆವೇರಿಸಲಿದ್ದಾರೆ.

‎ಕಳೆದ ದಶಕಗಳಿಂದಲೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಗೆ ಒತ್ತಾಯಿಸಿ ನಿರಂತರ ಹೋರಾಟ ನಡೆಯುತ್ತಿದೆ. ಆದರೂ, ಮಹಾನಗರ ಪಾಲಿಕೆ ಮತ್ತು ಸರ್ಕಾರಗಳು ಜಾಣಕುರುಡರಂತೆ ವರ್ತಿಸುತ್ತಿವೆ. ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ, ಗಡಿ ವಿವಾದ ಪರಿಹಾರಕ್ಕೆ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಅಂಗೀಕರಿಸಬೇಕೆನ್ನುವುದು ಹಕ್ಕೊತ್ತಾಯವಾಗಿದೆ ಎಂದು ಕನ್ನಡಸೇನೆ-ಕರ್ನಾಟಕ ಬೆಳಗಾವಿ ಜಿಲ್ಲಾಧ್ಯಕ್ಷ ರಾಜು ಕೋಲಾ ತಿಳಿಸಿದ್ದಾರೆ.

‎ಹಲ್ಮಿಡಿ ಶಾಸನದ ಪೂಜೆ ಮತ್ತು ಮಹಾನಗರ ಪಾಲಿಕೆಗೆ ಮುತ್ತಿಗೆ ಕಾರ್ಯಕ್ರಮಕ್ಕೆ ಕನ್ನಡಿಗರು, ಕನ್ನಡಾಭಿಮಾನಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.


Home add -Advt

Related Articles

Back to top button